ಉತ್ತರ ಪ್ರದೇಶ: ಪುಣ್ಯಕ್ಷೇತ್ರ ಮಥುರಾದಲ್ಲಿ ಮಾಂಸ ಹಾಗೂ ಮದ್ಯ ಮಾರಾಟಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ಬ್ರೇಕ್ ಹಾಕಿದೆ.
ಸೋಮವಾರ ಲಕ್ನೋದಲ್ಲಿ ನಡೆದ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಯೋಗಿ, ಮಥುರಾದಲ್ಲಿ ಸಂಪೂರ್ಣವಾಗಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಿರುವ ವಿಚಾರವನ್ನು ತಿಳಿಸಿದರು.
ಮಥುರಾದಲ್ಲಿ ಮಾಂಸ ಹಾಗೂ ಮದ್ಯ ಮಾರಾಟ ನಿಷೇಧ ಹೇರುವಂತೆ ಬ್ರಜ್ ಪ್ರದೇಶದ ನಿವಾಸಿಗಳ ಬಹುದಿನಗಳ ಒತ್ತಾಯವಾಗಿತ್ತು. ಅದರಂತೆ ಈಗ ಅದನ್ನು ಈಡೇರಿಸಲಾಗಿದೆ ಎಂದರು.
ಮಾಂಸ ಮತ್ತು ಸಾರಾಯಿ ವ್ಯಾಪಾರಸ್ಥರಿಗೆ ಪರ್ಯಾಯ ಉದ್ಯೋಗದ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವ ಮುಖ್ಯಮಂತ್ರಿಗಳು, ಮಥುರಾ ವೈಭವವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಹಾಲಿನ ಮಾರಾಟವನ್ನು ಕೈಗೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಆದಿತ್ಯನಾಥ್ ಅವರು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ಕೋವಿಡ್ ಸೋಂಕನ್ನು ಹೋಗಲಾಡಿಸಲು ಪ್ರಾರ್ಥಿಸಿದರು. ಬ್ರಿಜ್ ಭೂಮಿಯನ್ನು ಅಭಿವೃದ್ಧಿಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಇದಕ್ಕಾಗಿ ಯಾವುದೇ ಹಣದ ಕೊರತೆಯಿಲ್ಲ ಎಂದಿದ್ದಾರೆ.
ಬಹಳ ಹಿಂದಿನಿಂದಲೂ ನಿರ್ಲಕ್ಷಿಸಲ್ಪಟ್ಟ ನಂಬಿಕೆಯ ಸ್ಥಳಗಳು ಈಗ ಪುನರುಜ್ಜೀವನಗೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಕ್ಯಾಬಿನೆಟ್ ಮಂತ್ರಿಗಳಾದ ಲಕ್ಷ್ಮಿ ನಾರಾಯಣ್ ಚೌಧರಿ ಮತ್ತು ಶ್ರೀಕಾಂತ್ ಶರ್ಮಾ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.