Advertisement
ತಾಯಿಗೆ ಕಣ್ಣೀರುನನ್ನ ತಾಯಿಗೆ ನಾನು ಒಬ್ಬನೇ ಮಗ. ಕಳೆದ ಅನೇಕ ವರ್ಷಗಳಿಂದ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಮನೆಯವರಿಗೆ ಹಣ ಕಳುಹಿಸುತ್ತಿದ್ದೆ. ನಿನ್ನೆ ಮೊನ್ನೆಯ ವರೆಗೂ ಸಮಸ್ಯೆ ಈ ಹಂತಕ್ಕೆ ತಲುಪ ಬಹುದು ಎನ್ನುವ ಅರಿವು ನನಗೆ ಇರಲಿಲ್ಲ. ತಿಂಗಳ ಕೊನೆ ಕೈಯಲ್ಲಿ ಹಣವಿಲ್ಲ. ಊರಿನಲ್ಲಿ ಒಂದು ಹೊತ್ತು ಗಂಜಿ ಕುಡಿದು ಬದುಕು ಸಾಗಿಸೋಣವೆಂದರೂ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ತಾಯಿ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಕುಷ್ಠಗಿ ನಿವಾಸಿ ರಾಜು ಅಳಲು ತೊಡಿಕೊಂಡರು.
ಊರಿನಲ್ಲಿರುವ ಪತ್ನಿ ತುಂಬು ಗರ್ಭಿಣಿ. ಕೋವಿಡ್-19 ಭೀತಿಯಿಂದಾಗಿ ನಮಗಿಲ್ಲಿ ಕೆಲಸವಿಲ್ಲದಂತಾಗಿದೆ. ಊರಿಗೆ ಹೋಗಿ ಅಲ್ಲಿಯಾದರೂ ಕೆಲಸ ಮಾಡೋಣವೆಂದು ಲಾರಿ
ಚಾಲಕನೊಬ್ಬನಿಗೆ 1,000 ರೂ.ಕೊಟ್ಟು ಮಾ. 27ರಂದು ಮಂಗಳೂರಿ ನಿಂದ ಪ್ರಯಾಣ ಬೆಳೆಸಿದೆ. ಆದರೆ ದುರದೃಷ್ಟಕ್ಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದೆವು. ನನ್ನ ಬರುವಿಕೆಗೆ ಪತ್ನಿ ಹಾಗೂ ಅನಾರೋಗ್ಯ ಪೀಡಿತ ತಾಯಿ ಕಾಯುತ್ತಿದ್ದಾರೆ. ಮುಂದಿನ 10 ದಿನ ದೊಳಗೆ ಪತ್ನಿಯ ಹೆರಿಗೆಯಾಗಲಿದೆ. ಆ ಮಗುವನ್ನು ನೋಡುವ ಭಾಗ್ಯ ನನಗೆ ಇಲ್ಲ ಅನ್ನಿಸುತ್ತದೆ. ಇಲ್ಲಿ ಕಳೆಯುವ ಒಂದು ನಿಮಿಷ ಸಹ ವರ್ಷ ಎನಿಸುತ್ತಿದೆ. ಒಮ್ಮೆ ಊರಿಗೆ ಹೋದರೆ ಮತ್ತೆ ಈ ಕಡೆ ಬರೋದಿಲ್ಲ. ಅಲ್ಲಿನ ಕನಿಷ್ಠ ಕೂಲಿಯಲ್ಲಿ ಜೀವನ ಸಾಗಿಸುವೆ ಎಂದು ಗದಗ ನಿವಾಸಿ ಮಾದೇಶ ಅಳಲು ತೋಡಿಕೊಂಡರು. ಲಾರಿಯಲ್ಲಿ ಜನರ ಸಾಗಾಟ
ಲಾರಿ ಸೇರಿದಂತೆ ವಿವಿಧ ವಾಹನ ಗಳ ಮೂಲಕ ಮಂಗಳೂರು, ಸುರತ್ಕಲ್‌ನ 350ಕ್ಕೂ ಅಧಿಕ ಕಾರ್ಮಿಕರು ಗದಗ ಸೇರಿದಂತೆ ವಿವಿಧ ಊರುಗಳಿಗೆ ತೆರಳಲು ಲಾರಿಯಲ್ಲಿ ಮಂಗಳೂರಿನಿಂದ ಒಳದಾರಿಯ ಮೂಲಕ ಶಿರೂರು ಚೆಕ್ ಪೋಸ್ಟ್ ಪ್ರವೇಶಿಸುತ್ತಿರುವಾಗ ಅಲ್ಲಿನ ಪೊಲೀಸರು ಚೆಕ್‌ಪೋಸ್ಟ್ ನಿಂದ ವಾಪಸ್ ಕಳಿಸಿದ್ದಾರೆ.
Related Articles
350ಕ್ಕೂ ಅಧಿಕ ಕಾರ್ಮಿಕರು ತೊಂದರೆಯಲ್ಲಿ ಇರುವುದನ್ನು ಗಮನಿಸಿದ ಜಿಲ್ಲಾಡಳಿತ ಅವರಿಗೆ ಸೂರು ಕಲ್ಪಿಸಲು ಮುಂದಾಗಿದೆ. ಬಾರ್ಕೂರು ಸರಕಾರಿ ಕಾಲೇಜು, ಬೀಡಿನಗುಡ್ಡೆ, ಕಾಪುವಿನಲ್ಲಿ ತಂಗಲು ಅವಕಾಶ ನೀಡಿದೆ. ಪ್ರಸ್ತುತ ಬಾರ್ಕೂರಿನ ಕಾಲೇಜಿನ 50 ಕೊಠಡಿಗಳಲ್ಲಿ 262 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
Advertisement
ಊಟದ ವ್ಯವಸ್ಥೆಬಾರ್ಕೂರು ಕಾಲೇಜಿನಲ್ಲಿರುವ 270 ಕೂಲಿ ಕಾರ್ಮಿಕರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಮಂದಾರ್ತಿ ದೇವಸ್ಥಾನದಿಂದ ಬರುತ್ತಿದೆ. ದಾನಿಗಳ ನೆರವಿನಿಂದ ಬೆಳಗ್ಗಿನ ಉಪಾಹಾರ ಹಾಗೂ ಚಾ, ಬಿಸ್ಕೆಟ್ ವ್ಯವಸ್ಥೆ ಕಲ್ಪಿಸ ಲಾಗಿದೆ. ಮಕ್ಕಳು ಸೇರಿದಂತೆ ಎಲ್ಲರಿಗೂ ಎರಡು ಹೊತ್ತು ಹಾಲು ವಿತರಿಸಲಾಗುತ್ತಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ತಿಳಿಸಿದರು.ಬಾರ್ಕೂರು ಕಾಲೇಜಿನಲ್ಲಿ 262 ಕಾರ್ಮಿಕರು ಆಶ್ರಯ ಪಡೆದುಕೊಡಿದ್ದಾರೆ.ಇದು ಕೂಲಿ ಕಾರ್ಮಿಕರ ಕಷ್ಟವಾ ದರೆ ಪೊಲೀಸರ ಕಷ್ಟ ಇನ್ನೊಂದು ರೀತಿಯದ್ದು, ಅವರ ಪರಿಸ್ಥಿತಿ ಕಂಡು ಬಿಡುವ ಎಂಬ ಮನಸ್ಸಾದರೂ ಬಿಡುವಂತಿಲ್ಲ. ಒಂದು ವಾಹನ ಜಿಲ್ಲೆಯ ಗಡಿ ದಾಟಿ ಹೋದರೂ ನಿಮ್ಮನ್ನು ಜವಾಬ್ದಾರರನ್ನಾಗಿ ಮಾಡ ಲಾಗುತ್ತದೆ ಎಂದು ಗಡಿ ಭಾಗದ ಠಾಣೆಗಳಿಗೆ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ನೀಡಿದೆ. ಇದರಿಂದಾಗಿ ಪೊಲೀಸರು ಕೂಡ ನಿರ್ದಾಕ್ಷಿಣ್ಯವಾಗಿ ವಾಪಸು ಕಳುಹಿಸುತ್ತಿದ್ದಾರೆ. ಸಾಸ್ತಾನ ಟೋಲ್ ಪ್ಲಾಜಾ: ಪ್ರವೇಶ ನಿಷಿದ್ಧ
ಕೋಟ: ಸಾಸ್ತಾನ ಟೋಲ್‌ಪ್ಲಾಜಾದಲ್ಲಿ ಶನಿವಾರ ಸಂಜೆಯಿಂದ ಪೊಲೀಸ್ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದ್ದು ತಪಾಸಣೆಯನ್ನು ಮತ್ತಷ್ಟು ಬಿಗು ಗೊಳಿಸಲಾಗಿದೆ. ಪೂರ್ವಾಹ್ನ 11ರ ಅನಂತರ ತುರ್ತು ಕಾರ್ಯ ಹೊರತುಪಡಿಸಿ ಇತರ ಯಾವುದೇ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೇವಲ ಎರಡು ಗೇಟ್‌ಗಳನ್ನು ಮಾತ್ರ ತೆರೆದು ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ವಾಹನಗಳ ವಿಳಾಸ, ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಂಡು ಬಿಡಲಾಗುತ್ತಿದೆ. ಪದೇ-ಪದೇ ತಿರುಗಾಡದಂತೆ ತಿಳಿಸಲಾಗುತ್ತದೆ. 55 ಕಾರ್ಮಿಕರಿಗೆ ಮೂಡುಬಿದಿರೆಯಲ್ಲಿ ನೆಲೆ
ಮೂಡುಬಿದಿರೆ: ಕೊಪ್ಪಳ ಜಿಲ್ಲೆಯ ಕುಷ್ಠಗಿಯ 55 ಮಂದಿ ಕೂಲಿ ಕಾರ್ಮಿಕರು ಊರಿಗೆ ಹೋಗುವ ಹಾದಿಯಲ್ಲಿ ಮೂಡುಬಿದಿರೆಯಲ್ಲಿ ಸಿಲುಕಿಕೊಂಡರು. ಪೊಲೀಸ್, ಕಂದಾಯ ಇಲಾಖೆಗಳು, ಮಾಜಿ ಸಚಿವ ಕೆ. ಅಭಯಚಂದ್ರ, ಶಾಸಕ ಉಮಾನಾಥ ಕೋಟ್ಯಾನ್ ಸಹಕಾರದಿಂದ ಅವರು ಮೂಡುಬಿದಿರೆ ಸಮಾಜ ಮಂದಿರದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿದ್ದಾರೆ. ಬಿಳಿನೆಲೆ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ
ಸುಬ್ರಹ್ಮಣ್ಯ: ನೆಟ್ಟಣ ರೈಲು ನಿಲ್ದಾಣದಲ್ಲಿ ಬಾಕಿಯಾಗಿದ್ದ ಉ.ಕ. ಮೂಲದ 30 ಮಂದಿ ಕಾರ್ಮಿಕರಿಗೆ ಬಿಳಿನೆಲೆ ಸ.ಹಿ.ಪ್ರಾ. ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಸಾಂತ್ವನ ಕೇಂದ್ರಗಳಿಗೆ ರವಾನೆ
ಪಡುಬಿದ್ರಿ: ಕೋವಿಡ್-19 ಭೀತಿ ಮತ್ತು ದ.ಕ. ಜಿಲ್ಲೆ ಬಂದ್‌ನಿಂದ ಕಂಗೆಟ್ಟು ತಮ್ಮ ಊರಿನತ್ತ ನಡೆದೇ ಹೊರಟಿದ್ದ ಉತ್ತರ ಕರ್ನಾಟಕ ಭಾಗದ ಕಾರ್ಮಿಕ ಕುಟುಂಬಗಳನ್ನು ರವಿವಾರ ತಡೆದಿರುವ ಕಾಪು ಪೊಲೀಸರು ಅವರಲ್ಲಿ ಧೈರ್ಯ ತುಂಬಿ ಮಂಗಳೂರಿನ ಕದ್ರಿಯಲ್ಲಿ ತೆರೆದಿರುವ ಸಾಂತ್ವನ ಕೇಂದ್ರಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸುಮಾರು 22 ಮಂದಿ ಕಾರ್ಮಿಕರು ಸಂಸಾರ ಸಮೇತರಾಗಿ ಕಾಲ್ನಡಿಗೆಯಲ್ಲಿ ಬಂದಿದ್ದರು. ತಂಡದಲ್ಲಿ ಎಳೆಯ ಮಕ್ಕಳೂ ಇದ್ದರು. ಕಾಪು, ಪಡುಬಿದ್ರಿ, ನಂದಿಕೂರು ಬಳಿ ಮುಂದೆ ಸಾಗಲು ಪೊಲೀಸರು ಅವಕಾಶ ನಿರಾಕರಿಸಿದಾಗ ಅತಂತ್ರರಾಗಿ ರಸ್ತೆ ಬದಿಯೇ ಬೀಡುಬಿಟ್ಟಿದ್ದರು. ಬಳಿಕ ಪೊಲೀಸರು ಅವರನ್ನು ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಅವರ ಮಿನಿ ಟಿಪ್ಪರ್ ಮೂಲಕ ಸಾಂತ್ವನ ಕೇಂದ್ರಗಳಿಗೆ ಕಳಿಸಿದರು. ಹಸಿದವರಿಗೆ ನೆರವು
ಪಲಿಮಾರಿನ ಹಾಜಿ ಕೋಟೆ ಅಹಮ್ಮದ್ ಬಾವಾ ಫ್ಯಾಮಿಲಿ ಟ್ರಸ್ಟ್ ನಿಂದ ಹಸಿದವರಿಗೆ ಅನ್ನ ಸಹಿತ ದಿನಸಿ ವಸ್ತುಗಳ ಪೂರೈಕೆ ನಡೆಯುತ್ತಿದೆ. ಪಡುಬಿದ್ರಿ ಆಟೋರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ಪಡುಬಿದ್ರಿ ಅಟೋ ನಿಲ್ದಾಣ ವ್ಯಾಪ್ತಿಯ ರಿಕ್ಷಾ ಚಾಲಕ ಮತ್ತು ಮಾಲಕರ ಬಡಕುಟುಂಬಗಳಿಗೆ ಸುಮಾರು 1.20 ಲಕ್ಷ ರೂ. ವೆಚ್ಚ ಭರಿಸಿ 10 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ, ಅರ್ಧ ಕೆಜಿ ಚಾ ಹುಡಿ ಮನೆ ಮನೆಗೆ ವಿತರಿಸಲಾಯಿತು. ವಿನಾ ಕಾರಣ ಕೇರಳಕ್ಕೆ ಹೋಗಿ
ಬರುತ್ತಿದ್ದಾತನಿಗೆ ಏಕಾಂತ ವಾಸ
ಮೀನಿನ ಲಾರಿಯಲ್ಲಿ ವಿನಾ ಕಾರಣ ಕೇರಳಕ್ಕೆ ತೆರಳಿ ವಾಪಸಾಗುತ್ತಿದ್ದ ಹೆಜಮಾಡಿ ಎಸ್.ಎಸ್. ರೋಡ್ ನಿವಾಸಿಯೊಬ್ಬರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮನೆಯಲ್ಲಿಯೇ ಏಕಾಂತ ವಾಸದಲ್ಲಿರಿಸಿದರು. ಲಾಕ್‌ಡೌನ್ ಬಳಿಕ ಮೀನು ಸಾಗಾಟದ ಲಾರಿಯಲ್ಲಿ ಕಂಡಕ್ಟರ್‌ನಂತೆ ಕುಳಿತು ಕೇರಳದಲ್ಲಿರುವ ಸಹೋದರನ ಮನೆಗೆ ಆಗಾಗ ತೆರಳಿ ವಾಪಸಾಗುತ್ತಿದ್ದ ಆತ ಮನೆಯಲ್ಲಿದ್ದಾನೋ ಇಲ್ಲವೋ ಎಂದು ತಿಳಿಯಲು ಆರೋಗ್ಯ ಕಾರ್ಯಕರ್ತೆಯರು ಕರೆ ಮಾಡಿದಾಗ ಕರೆ ಸ್ವೀಕರಿಸದೆ ವಂಚಿಸುತ್ತಿದ್ದ. ಅಲ್ಲದೆ ಹೆಜಮಾಡಿಯ ಇನ್ನೊಂದು ಭಾಗದಲ್ಲಿರುವ ತಂದೆಯ ಮನೆಗೂ ಹೋಗಿ ಬರುತ್ತಿದ್ದ. ಇದನ್ನು ತಿಳಿದ ಪೊಲೀಸರು ಆತನನ್ನು ತಂದೆ ಮನೆಯಿಂದ ಕರೆತಂದು ತನ್ನದೇ ಮನೆಯಲ್ಲಿ ಕುಳಿತುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.