ಹುಬ್ಬಳ್ಳಿ: ಬಿಜೆಪಿ ರಾಷ್ಟ್ರ-ರಾಜ್ಯ ನಾಯಕರು ಜಗದೀಶ ಶೆಟ್ಟರನ್ನ ಸೋಲಿಸಲೇಬೇಕೆಂದು ಚಾಲೆಂಜ್ ಮಾಡಿದಂತಿದೆ.ಆದರೆ ಕ್ಷೇತ್ರದ ಮತದಾರರು ಮಾತ್ರ ನನ್ನನ್ನು ಗೆಲ್ಲಿಸಲೇಬೇಕೆಂಬುದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಜಗದೀಶ ಶೆಟ್ಟರನನ್ನು ಸೋಲಿಸಲು ಕೇಂದ್ರ-ರಾಜ್ಯ ಸರಕಾರಗಳು, ಇಡೀ ಬಿಜೆಪಿಯೇ ಟೊಂಕ ಕಟ್ಟಿ ನಿಂತಂತಿದೆ. ಯಾರೇ ಬಂದರೂ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದರು.
ಏನು ಮಾಡಿದರು ಜಗದೀಶ ಶೆಟ್ಟರ ಸ್ವಲ್ಪ ಸಿಟ್ಟಾಗಿ ಸುಮ್ಮನಾಗಿ ಬಿಡುತ್ತಾರೆ ಎಂದು ಕೊಂಡಿದ್ದರು. ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ, ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರಿಂದ ಬಿಜೆಪಿ ಬಿಟ್ಟು ಹೊರ ಬಂದೆ, ನಾನು ಕಾಂಗ್ರೆಸ್ ಸೇರಿರುವುದು ಬಿಜೆಪಿಯವರಿಗೆ ತಳಮಳ ಶುರುವಾಗಿದೆ ಎಂದರು.
ಬಿಜೆಪಿಯಲ್ಲಿ ಲಿಂಗಾಯತ ರನ್ನು ಮೂಲೆಗುಂಪು ಹಾಗೂ ನನ್ನ ಟಿಕೆಟ್ ತಪ್ಪಲು ಬಿ.ಎಲ್.ಸಂತೋಷ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕಾಗಿಯೇ ನನ್ನನ್ನು ಸೋಲಿಸಲೇಬೆಂಬ ಸರ್ವ ಯತ್ನಗಳು ನಡೆಯುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಎಲ್ಲ ರೀತಿಯ ಒತ್ತಡ, ನಿರ್ವಹಣೆಗೆ ಮುಂದಾಗಿದ್ದಾರೆ.
ಹಲವು ಪಾಲಿಕೆ ಸದಸ್ಯರು ಮಾನಸಿಕವಾಗಿ ನನ್ನನ್ನು ಬೆಂಬಲಿಸುವ ಮನೋಭಾವ ಹೊಂದಿದ್ದರು ಅವರ ಮೇಲೆ ಒತ್ತಡ ತರುವ, ಬೆದರಿಸುವ ಅವರ ಮೇಲೆಯೇ ಗೂಢಚಾರ ನಡೆಸುವ, ನಿಗಾ ಇರಿಸುವ ಯತ್ನಕ್ಕೆ ಜೋಶಿಯವರು ಮುಂದಾಗಿದ್ದು, ಫೋನ್ ಮಾಡಿ ಹೆದರಿಸುವುದು ಮಾಡುತ್ತಿದ್ದು, ಇನ್ನೊಂದು ಪಕ್ಷದ ಗೂಂಡಾಗಿರಿ ಬಗ್ಗೆ ಮಾತನಾಡುವವರು, ಇದೀಗ ತಾವೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಲಿ ಎಂದರು.
ಪಾಲಿಕೆ ಕಾಂಗ್ರೆಸ್ ಸದಸ್ಯರಿಗೆ ಒತ್ತಡ ತರುವುದು, ಹೆದರಿಕೆ ಹಾಕುವ ಯತ್ನಗಳು ನಡೆಯುತ್ತಿದ್ದು, ನನ್ನ ಮನೆ ಸುತ್ತಲು ಗುಪ್ತಚರ ಕಾರ್ಯ ನಿಯೋಜಿಸಲಾಗಿದೆ. ಯಾರು ಬರುತ್ತಾರೆ ಎಂಬ ಮಾಹಿತಿ ಪಡೆದು ಅವರನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ ಎಂದರು.
ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ನಾಯಕತ್ವವನ್ನು ಸರಕಾರ ಮಾಡುವ ಹುನ್ನಾರವೂ ನಡೆದಿದೆ. ಲಿಂಗಾಯತರಿಗೆ ಅವಕಾಶ ನೀಡಿದರು ಅದು ಮಹತ್ವದ್ದಲ್ಲದಿರಬೇಕು ಎಂಬ ವ್ಯವಸ್ಥಿತ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಬಿಜೆಪಿ ಯವರು ನನ್ನ ಮೇಲೆ ಮುಗಿಬಿದ್ದಷ್ಟು ಜನ ನನ್ನನ್ನು ಇನ್ನಷ್ಟು ಹತ್ತಿರಕ್ಕೆ ಕರೆದುಕೊಳ್ಳುತ್ತಿದ್ದಾರೆ. ಯಾರು ಏನೆ ಮಾಡಿದರು ಜನ ನನ್ನನ್ನು ಗೆಲ್ಲಿಸಲಿದ್ದಾರೆ ಎಂದರು.
ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪನಂತಹವರು ನನ್ನ ವಿರುದ್ಧ ಏನೇ ಟೀಕೆ ಮಾಡಲಿ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದರು