Advertisement

ಹೊಸತನವಿಲ್ಲ ಹಳೆಯದೇ ಎಲ್ಲಾ

11:22 AM Dec 16, 2018 | |

ಕಾಲೇಜ್‌ನಲ್ಲಿ ಸಭ್ಯವಾಗಿ ಓದಿಕೊಂಡಿರುವ ಹುಡುಗ. ಅದೇ ಕಾಲೇಜಿಗೆ ಅಮೆರಿಕಾದಿಂದ ಬಂದು ಸೇರುವ ಹುಡುಗಿ. ಇಬ್ಬರಿಗೂ ಒಂದೇ ನೋಟದಲ್ಲಿ ಪ್ರೀತಿ. ಇಬ್ಬರ ಪ್ರೀತಿಗೂ ಮೊದಲು ಮನೆಯವರಿಂದ ಗ್ರೀನ್‌ ಸಿಗ್ನಲ್‌. ಇನ್ನೇನು ನಿಶ್ಚಿತಾರ್ಥ ಮುಗಿದು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸಣ್ಣ ಕಿರಿಕ್‌ನಿಂದಾಗಿ ಮದುವೆ ಮುರಿದು ಬೀಳುತ್ತದೆ. ಮತ್ತೆ ಹೇಗೋ ಎರಡು ಕುಟುಂಬಗಳು ಒಂದಾದವು ಎನ್ನುವಷ್ಟರಲ್ಲಿ ಮತ್ತೂಂದು ಕಿರಿಕ್‌.

Advertisement

ಅದರಿಂದ ಮತ್ತೆ ಮದುವೆ ಮುರಿದು ಬೀಳುತ್ತದೆ. ಮತ್ತೆ ಈ ಕುಟುಂಬಗಳನ್ನು ಒಂದುಗೂಡಿಸಲು ಪಡಬಾರದ ಹರಸಾಹಸ. ಅಷ್ಟರೊಳಗೆ ಎದುರಿಗಿದ್ದ ಪ್ರೇಕ್ಷಕ ಸುಸ್ತೋ ಸುಸ್ತು! ಇದಿಷ್ಟು ಈ ವಾರ ತೆರೆಗೆ ಬಂದಿರುವ “ವಿರಾಜ್‌’ ಚಿತ್ರದ ಕಥಾಹಂದರ. “ವಿರಾಜ್‌’ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಕನ್ನಡದಲ್ಲಿ ಕಳೆದ ನಾಲ್ಕು ದಶಕಗಳಿಂದ ಬಂದಂತಹ  ಹತ್ತಾರು ಚಿತ್ರಗಳ ಒಂದೊಂದು ದೃಶ್ಯಗಳನ್ನು ಭಟ್ಟಿ ಇಳಿಸಿ ಮಾಡಿದ ಚಿತ್ರ.

ಆದರೆ ಇಂಥ ಭಟ್ಟಿ ಇಳಿಸುವ ಕೆಲಸವನ್ನೂ ಕೂಡ ಪ್ರೇಕ್ಷಕರು ರೋಸಿ ಹೋಗುವಂತೆ ಮಾಡಿದ್ದಾರೆ ನಿರ್ದೇಶಕರು. ಹತ್ತು ನಿಮಿಷದಲ್ಲಿ ಹೇಳಿ ಕೈ ತೊಳೆದುಕೊಳ್ಳಬಹುದಾದ ಕಥೆಯನ್ನು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಸಲುವಾಗಿಯೇ ಎರಡೂ ಕಾಲು ಗಂಟೆ ಎಳೆದಂತಿದೆ. ಹೊಸತನದ ಕಥೆ, ಆಕರ್ಷಕ ನಿರೂಪಣೆ, ಚಿತ್ರದ ಮೇಲೆ ಬಿಗಿಯಾದ ಹಿಡಿತವಿಲ್ಲದಿದ್ದರೆ ಒಂದು ಚಿತ್ರ ನಿರ್ದೇಶಕನ, ನಿರ್ಮಾಪಕನ ಹಿಡಿತಕ್ಕೆ ಸಿಗದೆ ಹೇಗೆಲ್ಲ ಹಳಿ ತಪ್ಪಿ ಹೋಗಬಹುದು.

ತೆರೆಮೇಲೆ ಹೇಗೆಲ್ಲ ಅಪಘಾತ ಆಗಬಹುದು. ನೋಡುಗರಿಗೂ ಹೇಗೆ ಆಘಾತ ಮಾಡಬಹುದು ಎಂಬುದಕ್ಕೆ ವಿರಾಜ್‌ ಚಿತ್ರ ಸದ್ಯದ ತಾಜಾ ಉದಾಹರಣೆ. ಇನ್ನು ಚಿತ್ರದ ನಾಯಕ ವಿದ್ಯಾಭರಣ್‌ ಅಭಿನಯ ದೇವರಿಗೇ ಪ್ರೀತಿ! ಆ್ಯಕ್ಷನ್‌, ರೊಮ್ಯಾನ್ಸ್‌, ಎಮೋಷನ್ಸ್‌ ಯಾವ ದೃಶ್ಯಗಳಿಗೂ ಭೇದ-ಭಾವ ಮಾಡದೇ, ಆರಂಭದಿಂದ ಅಂತ್ಯದವರೆಗೂ ಅದೇ ಪೇಲವ ಅಭಿನಯ ಮುಂದುವರೆಸಿಕೊಂಡು ಹೋಗಿದ್ದಾರೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಚಿತ್ರದ ನಾಯಕ ತೆರೆಮೇಲೆ ನಿರ್ಲಿಪ್ತ – ನಿರ್ಭಾವುಕ. ಇನ್ನು ಚಿತ್ರದ ನಾಯಕಿ ಶಿರಿನ್‌ ತೆರೆಮೇಲೆ ಅಂದವಾಗಿ ಕಂಡರೂ, ಅಂದಕ್ಕೊಪ್ಪುವ ಅಭಿನಯ ನೀಡಲು ಸಾಧ್ಯವಾಗಿಲ್ಲ. ಹಿರಿಯ ನಟ ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಟೆನ್ನಿಸ್‌ ಕೃಷ್ಣ ಮೊದಲಾದ ಕಲಾವಿದರ ದೊಡ್ಡ ತಾರಾಬಳಗವಿದ್ದರೂ, ಯಾರನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಹಾಗಾಗಿ ಯಾರ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುವುದಿಲ್ಲ. 

Advertisement

ಇನ್ನು ಚಿತ್ರದಲ್ಲಿ ಕೊಂಚ ಸಮಾಧಾನ ತರುವ ಅಂಶವೆಂದರೆ ಛಾಯಾಗ್ರಹಣ. ಚಿತ್ರದ ದೃಶ್ಯಗಳನ್ನು ಮಲ್ಲಿಕಾರ್ಜುನ್‌ ಕ್ಯಾಮರಾದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಚಿತ್ರದ ಸಂಕಲನ ಕೆಲಸ ಛಾಯಾಗ್ರಹಣಕ್ಕೆ ಪೂರಕವಾಗಿರುವುದಕ್ಕಿಂತ, ಮಾರಕವಾಗಿದ್ದೆ ಹೆಚ್ಚು ಎಂಬಂತೆ ಅನಿಸುತ್ತದೆ. ಇನ್ನು ಚಿತ್ರದ ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ, ಸಂಭಾಷಣೆ ಮೊದಲಾದ ಅಂಶಗಳ ಬಗ್ಗೆ ಮಾತನಾಡದಿರುವುದು ಒಳಿತು. 

ಚಿತ್ರ: ವಿರಾಜ್‌
ನಿರ್ದೇಶನ: ನಾಗೇಶ್‌ ನಾರದಾಸಿ
ನಿರ್ಮಾಣ: ಮಂಜುನಾಥ ಸ್ವಾಮಿ. ಎನ್‌
ತಾರಾಗಣ: ವಿದ್ಯಾಭರಣ್‌, ಶಿರಿನ್‌, ನಿಖಿತಾ, ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಸ್ವಾತಿ, ಟೆನ್ನಿಸ್‌ ಕೃಷ್ಣ, ಕಡ್ಡಿಪುಡಿ ಚಂದ್ರು, ಉಗ್ರಂ ಮಂಜು ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next