Advertisement

ಏನೇ ಸಮಸ್ಯೆಗಳಿದ್ದರೂ ಕುಳಿತು ಮಾತನಾಡೋಣ ಬನ್ನಿ 

03:45 AM Jan 23, 2017 | Team Udayavani |

ಕಲಬುರಗಿ: ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಕುಳಿತು ಮಾತನಾಡೋಣ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪಕ್ಷದ ನಾಯಕರು ಹಾಗೂ ಮುಖಂಡರಿಗೆ ಕರೆ ನೀಡಿದ್ದಾರೆ.

Advertisement

ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕುಳಿತು ಮಾತನಾಡಿದರೆ ಎಂತಹ ಸಮಸ್ಯೆಯೂ ಬಗೆಹರಿಯುತ್ತದೆ. ಮಾತನಾಢುವ ವೇಳೆ ತಮ್ಮ ತಪ್ಪಿನ ಬಗ್ಗೆಯೂ ಹೇಳಬಹುದು. ಯಾವುದೇ ಸಂಕೋಚವಿಲ್ಲದೇ ಮಾತುಕತೆಗೆ ಬನ್ನಿ ಎಂದು ರಾಜ್ಯದ ನಾಯಕರಿಗೆ ಆಹ್ವಾನವಿತ್ತರು.

“ನಮ್ಮಲ್ಲಿ ಗೊಂದಲವಿದ್ದರೂ ಎಪಿಎಂಸಿ ಚುನಾವಣೆಯಲ್ಲಿ ಒಟ್ಟಾರೆ 1553 ಸ್ಥಾನಗಳ ಪೈಕಿ 611 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ 656ರಲ್ಲಿ, ಜೆಡಿಎಸ್‌ 205 ಸ್ಥಾನಗಳಲ್ಲಿ ಜಯ ಗಳಿಸಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಕಾಂಗ್ರೆಸ್‌ಗಿಂತ ಅತಿ ಹೆಚ್ಚಿನ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಾವುದೇ ಸಂಶಯವಿರಲಿಲ್ಲ’ ಎಂದು ಹೇಳಿದರು.

“2018ರ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಿಷನ್‌ 150 ತಲುಪಿ ಆಡಳಿತ ಹಿಡಿಯಲು ಸಾಧ್ಯವಾಗುತ್ತದೆ. ಇದನ್ನೆಲ್ಲ ಮನಗಾಣಲೇಬೇಕಾಗಿದೆ. ಕೆಲವು ಕ್ಷೇತ್ರಗಳಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದರೂ ಎಲ್ಲರೂ ಕೂಡಿಕೊಂಡು ಕೆಲಸ ಮಾಡಿ. ಜನತೆ ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಾರೆಯೋ ಅವರಿಗೆ ಸ್ಪರ್ಧೆಯ ಅವಕಾಶ ಕೊಟ್ಟರಾಯಿತು. ಕಾರ್ಯಕರ್ತರು ಎದೆಗುಂದುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ಜನಪರ ಬಿಜೆಪಿ ಸರ್ಕಾರ ರಚನೆಯಾಗುವತ್ತ ಎಲ್ಲರ ಲಕ್ಷéವಿರಬೇಕು’ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ತೆರೆ
– ಬ್ರಿಗೇಡ್‌ ಬಗ್ಗೆಯೇ ನಡೆದ ಚರ್ಚೆ
ಕಲಬುರಗಿ:
ಬಿಸಿಲು ನಾಡು ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಭಾನುವಾರ ತೆರೆ ಬಿತ್ತು. ಆದರೆ, ಪಕ್ಷದ ಸಂಘಟನೆ ಹಾಗೂ ರಾಜ್ಯ ಸರ್ಕಾರದ ಆಡಳಿತ ಕಾರ್ಯವೈಖರಿ ವಿರುದ್ಧ ಪ್ರಮುಖವಾಗಿ ಚರ್ಚೆ ನಡೆಯಲೇ ಇಲ್ಲ. ಬದಲಾಗಿ, ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌ ವಿಷಯವೇ ಕೇಂದ್ರೀಕೃತವಾಗಿತ್ತು.

Advertisement

ಎರಡು ದಿನಗಳ ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಎಲ್ಲ ನಾಯಕರ ಹಾಗೂ ಕಾರ್ಯಕರ್ತರ ಬಾಯಲ್ಲಿ, ಇಬ್ಬರು ನಾಯಕರ ವಾಕ್ಸಮರ ಎಲ್ಲಿಯವರೆಗೆ ಹೋಗುತ್ತದೋ? ಯಾವಾಗ ಮುಕ್ತಾಯವಾಗುತ್ತದೋ ಎನ್ನುವ ಪ್ರಶ್ನೆ, ಆತಂಕ ಕಂಡು ಬಂತು. ಪಕ್ಷದಲ್ಲಿ ಭಿನ್ನಮತವಿದೆ ಎಂದು ಪಕ್ಷದ ರಾಜ್ಯಮಟ್ಟದ ಎಲ್ಲ ನಾಯಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗನೆ, ಇದನ್ನು ಇತ್ಯರ್ಥಪಡಿಸುವಂತೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎನ್ನುತ್ತಿರುವುದನ್ನು ಗಮನಿಸಿದರೆ ಬಿಎಸ್‌ವೈ-ಈಶ್ವರಪ್ಪ ಭಿನ್ನಮತ ನಿವಾರಣೆಯ ಚೆಂಡು ಪಕ್ಷದ ವರಿಷ್ಠರ ಅಂಗಳಕ್ಕೆ ತಲುಪಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಪ್ರಮುಖ ನಿರ್ಣಯಗಳು:
– ರಾಜ್ಯದ ಬರ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿನ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡುವುದು.
– 371ನೇ ವಿಧಿಯ ಪರಿಣಾಮಕಾರಿ ಜಾರಿಗೆ ಹೋರಾಟ ನಡೆಸುವುದು.
– ನೋಟು ಅಪನಗದೀಕರಣಗೊಳಿಸಿದ್ದಕ್ಕೆ ಪ್ರಧಾನಿಗೆ ಅಭಿನಂದನೆ.
–  ಮುಂದಿನ ಕಾರ್ಯಕಾರಿಣಿ ಸಭೆಯನ್ನು ಏ.6 ಮತ್ತು 7ರಂದು ಮೈಸೂರಲ್ಲಿ ನಡೆಸುವುದು.

ಬ್ರಿಗೇಡ್‌ಗೆ ಪಕ್ಷದ ರಾಷ್ಟ್ರೀಯ ನಾಯಕರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಜ.26ರಂದು ಕೂಡಲ ಸಂಗಮದ ಬ್ರಿಗೇಡ್‌ ಸಮಾವೇಶದಲ್ಲಿ ಪಾಲ್ಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬ್ರಿಗೇಡ್‌ ಸಮಾವೇಶ ನಿಲ್ಲೋದಿಲ್ಲ.
– ಕೆ.ಎಸ್‌.ಈಶ್ವರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ.

ಈ ಜನ್ಮದಲ್ಲಿ ಬ್ರಿಗೇಡ್‌ ಪಕ್ಷದ ಸಂಘಟನೆ ಎಂದು ನಾನು ಒಪ್ಪುವುದಿಲ್ಲ. ಬ್ರಿಗೇಡ್‌ ಹೆಸರಲ್ಲಿ ಪಕ್ಷ ಸಂಘಟನೆಗೆ ಧಕ್ಕೆಯಾಗುತ್ತಿದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next