Advertisement

ಸಮೂಹ ಸಾರಿಗೆ ಸಹವಾಸವೇ ಬೇಡ

05:46 AM May 21, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಬಹುತೇಕ ತೆರವಾಗಿ ಎರಡು ದಿನಗಳಾಗಿವೆ. ಬಸ್‌ ಸಂಚಾರ ಕೂಡ ಆರಂಭವಾಗಿದೆ. ಆದರೆ, ಪ್ರಯಾಣಿಕರು ಈ ಬಸ್‌ಗಳತ್ತ ಮುಖಮಾಡಲು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಯಾಕೆಂದರೆ, ನಗರದ  ಅರ್ಧಕ್ಕರ್ಧ ಜನ ಮುಂದಿನ ಇನ್ನೂ ಮೂರು ತಿಂಗಳು ಈ ಬಸ್‌, ಮೆಟ್ರೋ ರೈಲು ಸಹವಾಸವೇ ಬೇಡ ಎಂಬ ಮನಃಸ್ಥಿತಿಯಲ್ಲಿದ್ದಾರೆ!

Advertisement

ಹೌದು, ಸ್ವತಃ ಜನರೇ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಬಿ.ಪ್ಯಾಕ್‌ (ಬೆಂಗಳೂರು ರಾಜಕೀಯ  ಕ್ರಿಯಾ ಸಮಿತಿ) ನಡೆಸಿದ ಆನ್‌ಲೈನ್‌ ಸಮೀಕ್ಷೆಯ ವರದಿಯಿಂದ ತಿಳಿದುಬಂದಿದೆ. ಹಾಗಾಗಿ, ಬಸ್‌ಗಳು ರಸ್ತೆಗಿಳಿದರೂ ಅವುಗಳಲ್ಲಿ ಪ್ರಯಾಣಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಒಂದರಿಂದ ಮೂರು ತಿಂಗಳು ಇದೇ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 50ರಷ್ಟು ಜನ ಮುಂದಿನ ಕನಿಷ್ಠ ಮೂರು ತಿಂಗಳು ಬಸ್‌, ನಮ್ಮ ಮೆಟ್ರೋ, ರೈಲು ಸೇರಿದಂತೆ ಸಮೂಹ ಸಾರಿಗೆ ಬಳಸದಿರಲು ನಿರ್ಧರಿಸಿದ್ದಾರೆ. ಈ ಪೈಕಿ ಶೇ.  36ರಷ್ಟು ಜನ ಸದ್ಯಕ್ಕಂತು ವೈಯಕ್ತಿಕ ಅಥವಾ ಖಾಸಗಿ ವಾಹನದಿಂದ ಸಮೂಹ ಸಾರಿಗೆಗೆ “ಶಿಫ್ಟ್’ ಆಗುವ ಯಾವುದೇ ಚಿಂತನೆ ಇಲ್ಲ ಎಂದು ತಿಳಿಸಿದ್ದು, ಕೆಲಸದ ಉದ್ದೇಶಕ್ಕಾಗಿ ರಸ್ತೆಗಿಳಿಯುವವರಲ್ಲಿ ಶೇ. 50ರಷ್ಟು ಜನ ಕನಿಷ್ಠ ಒಂದು  ತಿಂಗಳು ಸಮೂಹ ಸಾರಿಗೆ ಕಡೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

1,072 ಜನ ಸಮೀಕ್ಷೆಯಲ್ಲಿ ಭಾಗಿ: “ಕೋವಿಡ್‌-19 ಲಾಕ್‌ಡೌನ್‌ ನಂತರ ಸುರಕ್ಷಿತ ಸಮೂಹ ಸಾರಿಗೆ ವ್ಯವಸ್ಥೆಗಳು’ ಶೀರ್ಷಿಕೆ ಅಡಿ ಬಿ.ಪ್ಯಾಕ್‌ ಈಚೆಗೆ ಆನ್‌ಲೈನ್‌ ಸಮೀಕ್ಷೆ ನಡೆಸಿತ್ತು. ಅದರಲ್ಲಿ 1,072 ಜನ ಭಾಗವಹಿಸಿದ್ದರು. ಶೇ. 58ರಷ್ಟು  ಜನ 5 ಕಿ.ಮೀ.ಗೂ ಕಡಿಮೆ ಪ್ರಯಾಣ ಮಾಡಿದರೆ. ಶೇ. 49ರಷ್ಟು ಜನ 5 ಕಿ. ಮೀ.ಗಿಂತ ಹೆಚ್ಚು ಪ್ರಯಾಣ ಮಾಡುವವರಾಗಿದ್ದಾರೆ.

ಇದರಲ್ಲಿ ಶೇ. 65ರಷ್ಟು ಜನ ಸಾರ್ವಜನಿಕ ಸಾರಿಗೆಯನ್ನು ತಿಂಗಳ ನಂತರ ಅಥವಾ ತಿಂಗಳ ಕೊನೆಯಲ್ಲಿ ಬಳಸಲು ನಿರ್ಧರಿಸಿದ್ದಾರೆ. ಇನ್ನು ಭಾಗವಹಿಸಿದವರಲ್ಲಿ ಶೇ. 41 ಜನ ನಿತ್ಯ ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರಾಗಿದ್ದಾರೆ. ಮೂರು ತಿಂಗಳ ನಂತರ ಸಮೂಹ ಸಾರಿಗೆಗೆ ಮುಖಮಾಡುವವರಲ್ಲಿ ಶೇ. 55 ಜನ 30 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅದೇ ರೀತಿ, ತಿಂಗಳ ನಂತರ  ಬಸ್‌ ಕಡೆಗೆ ಮುಖಮಾಡುವವರು 18-30 ವರ್ಷದ ಒಳಗಿನವರಾಗಿದ್ದಾರೆ.

Advertisement

ನಗರ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ  ನೈರುತ್ಯ ರೈಲ್ವೆಯು ಸಾರಿಗೆ ಸೇವೆ ಪ್ರಾರಂಭಿಸುವ ಮುನ್ನ ಸುರಕ್ಷತೆ ಸೇರಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಕಾರ್ಯತಂತ್ರಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು  ಬಿ.ಪ್ಯಾಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್‌ ತಿಳಿಸುತ್ತಾರೆ.

ಕಾರ್ಯತಂತ್ರ ಅಗತ್ಯ: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಕೆದಾರರಿಗಿಂತ ಖಾಸಗಿ ವಾಹನ ಬಳಕೆದಾರರ ಪ್ರಮಾಣ ಶೇ.3ರಷ್ಟು ಹೆಚ್ಚಿದೆ (ಖಾಸಗಿ ವಾಹನ ಬಳಕೆದಾರರು ಶೇ. 51ಮತ್ತು ಸಮೂಹ ಸಾರಿಗೆ ಬಳಕೆದಾರರ  ಪ್ರಮಾಣ ಶೇ. 48). ಇದರ ನಿರ್ವಹಣೆ ಮೊದಲಿನಿಂದಲೂ ಸವಾಲಾಗಿದೆ. ಕೊರೊನಾ ತಡೆಗೆ ಸಾಮಾಜಿಕ ಅಂತರ ಅಗತ್ಯವಾಗಿದ್ದು, ಈಗ ಈ ಅಂತರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂದೆ ನಿರ್ವಹಣೆ ಕಷ್ಟವಾಗಲಿದೆ. ಈ ಬಿಕ್ಕಟ್ಟಿನ  ಸಮಯದಲ್ಲಿ ಕಾರ್ಯತಂತ್ರ ರೂಪಿಸಿವುದು ಅಗತ್ಯ ಎನ್ನುತ್ತದೆ ಬಿ-ಪ್ಯಾಕ್‌.

Advertisement

Udayavani is now on Telegram. Click here to join our channel and stay updated with the latest news.

Next