ಚಿಕ್ಕಬಳ್ಳಾಪುರ: ಕೋವಿಡ್ ಕಾರಣದಿಂದ 3 ವರ್ಷಗಳ ಹಿಂದೆ ಎಪಿಎಂಸಿ ಮಾರುಕಟ್ಟೆಯಿಂದ ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ ಸಮೀಪಕ್ಕೆ ಸ್ಥಳಾಂತರಗೊಂಡಿದ್ದ ಹೂ ಮಾರುಕಟ್ಟೆಯನ್ನು ಮತ್ತೆ ಎಪಿಎಂಸಿಗೆ ತರುವ ಪ್ರಯತ್ನ ನಡೆಯುತ್ತಿದ್ದು ಜಿಲ್ಲಾ ಕೇಂದ್ರದಲ್ಲಿ ಪುಷ್ಪೋದ್ಯಮಕ್ಕೆ ಶಾಶ್ವತವಾದ ಸುಸಜ್ಜಿತವಾದ ಮಾರುಕಟ್ಟೆ ಬಲ ಸಿಗದೇ ಹೂ ಬೆಳೆಗಾರರು ಒಂದು ರೀತಿ ಅಡಕತ್ತರಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.
ಹೌದು, ಇಡೀ ಜಿಲ್ಲೆಯು ಹಾಲು, ರೇಷ್ಮೆ, ತರಕಾರಿ ಬೆಳೆಯುವುದರಲ್ಲಿ ಮುಂಚೂಣಿ ಯಲ್ಲಿರುವಂತೆ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕು ಷ್ಪೋದ್ಯಮಕ್ಕೆ ಹೆಸರಾಗಿದ್ದು ದೇಶ, ವಿದೇಶಗಳಿಗೆ ರಫ್ತು ಮಾಡುವ ಹೂ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದರೂ ಇಂದಿಗೂ ಮಾರುಕಟ್ಟೆ ಕಲ್ಪಿಸುವಲ್ಲಿ ಸಾಧ್ಯವಾಗಿಲ್ಲ.
ಕೋವಿಡ್‌ನಿಂದ ಸ್ಥಳಾಂತರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂ ವಹಿವಾಟು ನಡೆಯುತ್ತಿತ್ತು. ಆದರೆ ಕೋವಿಡ್ ಕಾರಣಕ್ಕೆ ಮಾರುಕಟ್ಟೆಯನ್ನು ತಾತ್ಕಲಿಕವಾಗಿ ಸಿವಿವಿ ಕ್ಯಾಂಪಸ್ ಬಳಿ ಇರುವ ಖಾಸಗಿ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು. ಕೋವಿಡ್ ನಿಯಂತ್ರಣದ ಬಳಿಕ ಕೆಲ ಹೂ ವರ್ತಕರು ಮತ್ತೆ ಎಪಿಎಂಸಿಗೆ ಹೂ ವಹಿವಾಟು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದರು. ಆದರೆ, ಅದು ಸಾಧ್ಯವಾಗದೇ ಅಲ್ಲಿಯೆ ಮುಂದುವರೆಯಿತು. ಈ ವಿಚಾರ ಹೈಕೋರ್ಟ್ ಮೆಟ್ಟಿಲು ಸಹ ಏರಿತ್ತು. ಆದರೆ ಎಪಿಎಂಸಿಗೆ ಹೂ ವಹಿವಾಟು ಸ್ಥಳಾಂತರ ಆಗಲೇ ಇಲ್ಲ.
ಒಟ್ಟಿನಲ್ಲಿ ಹೂ ಬೆಳೆಯುವುದರಲ್ಲಿ ರಾಜ್ಯದ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ವಾರ್ಷಿಕ ಕೋಟ್ಯಾಂತರ ರೂ. ವಹಿವಾಟನ್ನು ಬರೀ ಹೂನಿಂದ ಮಾಡುತ್ತದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಹೂ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಇಂದಿಗೂ ಜಿಲ್ಲಾಡಳಿತಕ್ಕೆ, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳಿಗೆ ಸಾಧ್ಯವಾಗದೇ ಇರುವುದು ವಿಪರ್ಯಾಸವೇ ಸರಿ ಎನ್ನಬಹುದು.
ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣ ನನೆಗುದಿಗೆ: ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಮಾರುಕಟ್ಟೆಗೆ ಅಗಲಗುರ್ಕಿ ಬಳಿ ಸ.ನಂ.122 ರಲ್ಲಿ 9.05 ಎಕರೆ ಜಾಗವನ್ನು ಮಂಜೂರು ಮಾಡಿಸಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣಕ್ಕೆ 100 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಣೆ ಮಾಡಿಸಿದ್ದರು. ಆದರೆ, ಎಪಿಎಂಸಿ ಹೆಸರಿಗೆ ಜಮೀನು ವರ್ಗಾವಣೆ ಆಗಿದ್ದು ಬಿಟ್ಟರೆ ಮಾರುಕಟ್ಟೆ ಅಭಿವೃದ್ಧಿಗೆ ಹಣಕಾಸಿನ ಸೌಲಭ್ಯ ಸರ್ಕಾರದಿಂದ ಸಿಗಲಿಲ್ಲ. ಹೀಗಾಗಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣದ ಯೋಜನೆ ಈಗ ನೆನಗುದಿಗೆ ಬಿದ್ದಂತಾಗಿದೆ. ಈಗಿನ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರುವುದು ಎದ್ದು ಕಾಣುತ್ತಿದೆ.
ಕುತೂಹಲ ಕೆರಳಿಸಿರುವ ಎಪಿಎಂಸಿ ಹಿಂಬರಹ!: ಸಿವಿವಿ ಕ್ಯಾಂಪಸ್ ಬಳಿ ನಡೆಯುತ್ತಿರುವ ಹೂ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಿ ಅದನ್ನೇ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸುವಂತೆ ಹೂ ಬೆಳೆಗಾರರು ಕೋರಿರುವ ಮನವಿಗೆ ಎಪಿಎಂಸಿ ಹಿಂಬರಹ ನೀಡಿದ್ದು, ಈಗಾಗಲೇ ಎಪಿಎಂಸಿ ಪ್ರಾಗಂಣದಲ್ಲಿ ನಿವೇಶನ ಹೊಂದಿ ಅಂಗಡಿ ನಿರ್ಮಿಸಿ ವರ್ತಕರು ಎಪಿಎಂಸಿಯಲ್ಲಿ ವಹಿವಾಟು ನಡೆಬೇಕು. ಇಲ್ಲದೇ ಹೋದರೆ ನಿಮಗೆ ವಿತರಿಸಿರುವ ಪರವಾನಿಗೆ ರದ್ದುಗೊಳಿಸುವುದಾಗಿ ವರ್ತಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಸಿವಿವಿ ಕ್ಯಾಂಪಸ್ ಬಳಿ ತಾತ್ಕಲಿಕವಾಗಿ ನಡೆಯುತ್ತಿರುವ ಹೂ ಮಾರುಕಟ್ಟೆಯನ್ನು ಮತ್ತೆ ಎಪಿಎಂಸಿಗೆ ಸ್ಥಳಾಂತರ ಮಾಡುವ ಸುಳಿವು ಎಪಿಎಂಸಿ ನೀಡಿದ್ದು, ಇದಕ್ಕೆ ಹೂ ಮಂಡಿ ವರ್ತಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.
ಜಿಲ್ಲಾ ಕೇಂದ್ರದಲ್ಲಿ ಹೂ ಮಾರುಕಟ್ಟೆಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕಿದೆ. ಸದ್ಯ ತಾತ್ಕಲಿಕವಾಗಿ ನಡೆಯುತ್ತಿರುವ ಹೂ ಮಾರುಕಟ್ಟೆ ಹಾಗೂ ಎಪಿಎಂಸಿ ಮಾರುಕಟ್ಟೆಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಹೂ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
–ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
– ಕಾಗತಿ ನಾಗರಾಜಪ್ಪ