ರಾಮನಗರ: ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಕೈಲಾಂಚ ಹೋಬಳಿಯ ಕೃಷ್ಣಾಪುರ ದೊಡ್ಡಿಯಲ್ಲಿ ಸರ್ಕಾರದ ರೇಷ್ಮೆ ಇಲಾಖೆ ಸ್ವಾಧೀನದ ಸರ್ಕಾರಿ ರೇಷ್ಮೆ ಫಾರಂ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆ ಎಂಬ ಮಾಹಿತಿ ಕೇಳಿ ರೇಷ್ಮೆ ಬೆಳೆಗಾರರುತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕಣ್ವ ಗ್ರಾಮದ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ತಮ್ಮ ವಿರೋಧ ವಿಲ್ಲ ಎಂದು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಕಣ್ವ ಜಲಾಶಯದ ಬಳಿ ರೇಷ್ಮೆ ಇಲಾಖೆಗೆ ಸೇರಿದ ವಿಶಾಲವಾದ ಭೂಮಿ ಗುರುತಿಸಲಾಗಿತ್ತು. ಆದರೆ ಸರ್ಕಾರ ಇದೀಗ ಕೃಷ್ಣಾಪುರ ದೊಡ್ಡಿಯ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಸರ್ಕಾರ ಮನಸ್ಸು ಮಾಡಿದೆ ಎಂಬಸುದ್ದಿಹರಡಿದೆ. ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡರು ಇದಕ್ಕೆ ಸಹಮತ ವ್ಯಕ್ತಪಡಿ ಸಿದ್ದಾರೆ ಎನ್ನಲಾಗಿದೆ. ರೇಷ್ಮೆಇಲಾಖೆ ಅಧಿಕಾರಿಗಳೂ ಸ್ಪಂದಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾದೊಡನೆ ಬೆಳೆಗಾರರು ವಿರೋಧಿಸಿದ್ದಾರೆ.
ವಿರೋಧವೇಕೆ?: ಕೃಷ್ಣಾಪುರ ದೊಡ್ಡಿಯಲ್ಲಿನ ರೇಷ್ಮೆ ಕೃಷಿ ಕ್ಷೇತ್ರ ಸದಾ ಚಟುವಟಿಕೆಯಿಂದಕೂಡಿರುವ ಸ್ಥಳ. ರೇಷ್ಮೆಗೂಡಿಗೆ ಸಂಬಂಧಿಸಿದಂತೆ ಇಲ್ಲಿ ವೈಜ್ಞಾನಿಕ ಚಟುವಟಿಕೆಗಳು ಸದಾ ನಡೆಯುತ್ತಿರುತ್ತದೆ. 1967ರಲ್ಲಿ ಸ್ಥಾಪನೆಯಾಗಿರುವ ಈ ಕ್ಷೇತ್ರದಲ್ಲಿ ಬಿಳಿಗೂಡು, ಹಳದಿಗೂಡು ಚಾಕಿ ಸಾಕಾಣಿಕೆ ಕೇಂದ್ರಗಳಿವೆ. ಒಟ್ಟು 26.30 ಎಕರೆ ಭೂಮಿ ಇದೆ. 8 ಎಕರೆ ಭೂಮಿಯಲ್ಲಿ ಹಿಪ್ಪು ನೇರಳೆ ತೋಟ ಬೆಳೆಸಲಾಗಿದೆ. ಮಿಶ್ರತಳಿ ಮೊಟ್ಟೆಮಾಡಲು ಉಪಯೋಗಿಸುವ ಸಿಎಸ್‌ಆರ್2ಬಿತ್ತನೆ ಬೆಳೆ ಮಾಡಿ ಗೂಡನ್ನು ಚಂದಾಪುರ ಬಿತ್ತನೆ ಕೋಠಿಗೆನೀಡಲಾಗುತ್ತಿದೆ. ದ್ವಿತಳಿ ಬಿತ್ತನೆಗೆ ಬೇಕಾದ ಮೊಟ್ಟೆಗಳೂ ಇಲ್ಲಿ ದೊರೆಯುತ್ತದೆ. ಇಲ್ಲಿನ ಗಂಡು ಚಿಟ್ಟೆಯೊಂದಿಗೆ ಮೈಸೂರು ಬಿತ್ತನೆ ತಳಿಯ ಹೆಣ್ಣು ಚಿಟ್ಟೆ ಕ್ರಾಸ್ ಮಾಡಿಸಿ ಮಿಶ್ರತಳಿ ಮೊಟ್ಟೆ ತಯಾರಿಸಿ ಬೆಳೆಗಾ ರರಿಗೆ ನೀಡಲಾಗುತ್ತಿದೆ. ಹೀಗೆ ರೇಷ್ಮೆಗೂಡು, ಹಿಪ್ಪುನೇರಳೆಗೆ ಸಂಬಂಧಿಸಿದಂತೆ ಇಲ್ಲಿ ವೈಜ್ಞಾನಿಕ ಚಿಂತನೆ ಗಳು ಮೊಳೆಯುತ್ತವೆ. ಹೀಗಾಗಿ ಈ ಕ್ಷೇತ್ರವನ್ನು ಉಳಿ ಸಿಕೊಳ್ಳಿ ಎಂದು ರೇಷ್ಮೆ ಬೆಳೆಗಾರರು ಆಗ್ರಹಿಸಿದ್ದಾರೆ.
ಮಾವು ಸಂಸ್ಕರಣವೂ ಬೇಕು!: ರಾಮನಗರ ಜಿಲ್ಲೆ ಮಾವು, ರೇಷ್ಮೆ ಮತ್ತು ಹೈನೋದ್ಯಮಕ್ಕೆ ಖ್ಯಾತಿ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರತಿ ವರ್ಷ ಪ್ರಥಮವಾಗಿಮಾವು ಬೆಳೆ ಸಿಗುವುದೇ ಈ ಜಿಲ್ಲೆಯಲ್ಲಿ. ರಾಮನಗರದ ಮಾವಿಗೆ ಇಡೀ ದೇಶದಲ್ಲಿ ಬೇಡಿಕೆ ಇದೆ. ಸಾಕಷ್ಟುಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾವು ಬೆಳೆಗಾರರನ್ನು ಇನ್ನಷ್ಟು ಪ್ರೋತ್ಸಾಹಿಸಲು ಮಾವು ಸಂಸ್ಕರಣಾ ಘಟಕವೂ ಅಗತ್ಯವಿದೆ ಎಂದು ಕಳೆದೆರಡು ದಶ ಕಗಳಿಂದ ರೈತರು ಬೇಡಿಕೆ ಇಡುತ್ತಲೇ ಇದ್ದಾರೆ. ಕಣ್ಣ ಬಳಿ ಪಾಳು ಬಿದ್ದಿರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಚಿಂತನೆ ನಡೆದಿತ್ತು. ಆದರೆ ಸರ್ಕಾರ ದಿಢೀರನೇ ಈ ನಿರ್ಧಾರ ಬದಲಾಯಿಸಲು ಮುಂದಾಗಿದೆ. ಮಾವು ಸಂಸ್ಕರಣಾ ಘಟಕವನ್ನು ಅಲ್ಲೇ ಸ್ಥಾಪಿಸಿ ಎಂದು ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.
ಕೆ.ಪಿ.ದೊಡ್ಡಿ ಗ್ರಾಮದ ರೇಷ್ಮೆಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾಗಿದೆ. ರೇಷ್ಮೆ ಅಭಿವೃದ್ಧಿಗೆ ಪೂರಕ ಚಟುವಟಿಕೆ ಇಲ್ಲಿ ನಡೆಯುತ್ತಿವೆ. ಈ ಚಟುವಟಿಕೆಗಳನ್ನು ಚಿವುಟಿ ಹಾಕುವುದು ಸರಿಯಲ್ಲ. ಮಾವು ಸಂಸ್ಕರಣಾಘಟಕವೂ ಬೇಕು, ಕಣ್ವ ಬಳಿ ಗುರುತಿಸಲಾಗಿದ್ದ ಸ್ಥಳದಲ್ಲಿ ಸ್ಥಾಪನೆಯಾಗಲಿ.
–ರವಿ, ರೇಷ್ಮೆ ಬೆಳೆಗಾರ, ರಾಮನಗರ
ಕೆ.ಪಿ.ದೊಡ್ಡಿಯಲ್ಲಿರುವ ರೇಷ್ಮೆಕ್ಷೇತ್ರ ತುಂಬಾ ಮಹತ್ವವಾದ ಸ್ಥಳ. ಇಷ್ಟು ವರ್ಷ ಇಲ್ಲಿ ಸೃಷ್ಟಿಯಾಗಿರುವ ವಾತಾವರಣವನ್ನು ಬೇರೆಡೆ ಮತ್ತೆ ಸೃಷ್ಟಿಸುವುದು ಅಸಾಧ್ಯ. ಬಿತ್ತನೆ ಸರಣಿಯಲ್ಲಿ ಈ ಕ್ಷೇತ್ರ ಪಿ 2 ಹಂತ. ಇದು ತಪ್ಪಿದರೆ ಬಿತ್ತನೆ ಸರಣಿ ತಪ್ಪಿದಂತಾಗುತ್ತದೆ. ಸರ್ಕಾರ ಈ ಅಂಶವನ್ನು ಪರಿಗಣಿಸಬೇಕು. –
ಕುಮಾರ್ ಸುಬ್ರಹ್ಮಣ್ಯ, ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ
ರೇಷ್ಮೆ-ಮಾವು ಬೆಳೆಗಾರರು ಇಬ್ಬರೂ ರೈತರೇ. ಸರ್ಕಾರಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ರೈತರೊಂದಿಗೆ ಮೊದಲು ಚರ್ಚಿಸಬೇಕು.
–ಸಿದ್ದರಾಜು, ಮಾಜಿ ಅಧ್ಯಕ್ಷ ಮಾವು ಬೆಳೆಗಾರರ ಸಂಘ, ರಾಮನಗರ