ಬೆಂಗಳೂರು: ಸಿನಿಮಾ ಚಿತ್ರೀಕರಣ, ಬರವಣಿಗೆ ಎಂದು ಸದಾ ಬಿಝಿಯಾಗಿರುತ್ತಿದ್ದ ಸಿನಿಮಾ ಮಂದಿ ಈ ಲಾಕ್ ಡೌನ್ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೆಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಬರವಣಿಗೆ. ಅದರಲ್ಲೂ ನಟ ರಕ್ಷಿತ್ ಶೆಟ್ಟಿ ಈ ಲಾಕ್ ಡೌನ್ ಅನ್ನು ಬರವಣಿಗೆ ಹಾಗೂ ಸಿನಿಮಾ ನೋಡಲು ಬಳಸುತ್ತಿದ್ದಾರೆ. ಈ ಮೂಲಕ ಸಿಕ್ಕ ಸಮಯವನ್ನು ಸದುಪಯೋಗ ಪಡಿಸುತ್ತಿದ್ದಾರೆ ರಕ್ಷಿತ್.
ಈ ಬಗ್ಗೆ ಮಾತನಾಡುವ ರಕ್ಷಿತ್, ಲಾಕ್ ಡೌನ್ ನಲ್ಲಿ ನಾನು ಬರವಣಿಗೆ ಹಾಗೂ ಸಿನಿಮಾ ನೋಡುತ್ತಿದ್ದೇನೆ. ಪುಣ್ಯಕೋಟಿ ಚಿತ್ರದ ಸ್ಕ್ರಿಪ್ಟ್ ಮಾಡುತ್ತಿದ್ದೇನೆ. ಸಂಜೆ ಹೊತ್ತು ಆನ್ ಲೈನ್ ಗೆ ಬಂದು ನಮ್ಮ 7 ಓಡ್ಸ್ ತಂಡದೊಂದಿಗೆ ಸಿನಿಮಾ ಕೆಲಸಗಳ ಕುರಿತು ಚರ್ಚಿಸುತ್ತೇವೆ. ಇಲ್ಲೂ ನಾವು ಸಿನಿಮಾ ವಿಷಯಗಳ ಕುರಿತಾಗಿಯೂ ಚರ್ಚಿಸುತ್ತೇವೆ.
ನನ್ನ ತಂಡ ರಿಚ್ಚಿ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬಿಝಿ. ಹಿಂದೆಲ್ಲಾ ಚಿತ್ರೀಕರಣದ ಗ್ಯಾಪ್ ನಲ್ಲಿ ಬರವಣಿಗೆ ಮಾಡಬೇಕಿತ್ತು. ಆದರೆ ಈಗ ಚಿತ್ರೀಕರಣವಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೆಚ್ಚು ಯೋಚನೆ ಮಾಡಲು, ಹೊಸದಾಗಿ ಆಲೋಚಿಸಲು ಈಗ ಸಮಯ ಸಿಗುತ್ತದೆ’ ಎನ್ನುವುದು ರಕ್ಷಿತ್ ಶೆಟ್ಟಿ ಮಾತು.
ಹಾಗಂತ ಅವರು ಕೇವಲ ಬರವಣಿಗೆಗಷ್ಟೇ ಸೀಮಿತವಾಗಿಲ್ಲ. ತಮಗೆ ಇಷ್ಟವಾದ ಒಂದಷ್ಟು ಸಿನಿಮಾಗಳನ್ನು ಕೂಡಾ ನೋಡುತ್ತಿದ್ದಾರೆ. ಬರವಣಿಗೆ ಜೊತೆಗೆ ಸಿನಿಮಾ ಕೂಡಾ ನೋಡುತ್ತಿದ್ದೇನೆ. ಫಾರಿನ್, ಇಂಡಿಯನ್ … ಹೀಗೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದೇನೆ. ನನಗೆ ಈ ಲಾಕ್ ಡೌನ್ ಬೋರ್ ಆಗಿಲ್ಲ. ಸಿನಿಮಾದ ಕೆಲಸ ಕಾರ್ಯಗಳಲ್ಲಿ ಮನೆಯಲ್ಲೇ ಬಿಝಿಯಾಗಿದ್ದೇವೆ ಎನ್ನುತ್ತಾರೆ ರಕ್ಷಿತ್.
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ವರ್ಷದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.
ಕಳೆದ ಬಾರಿ ರಕ್ಷಿತ್ ನಟನೆಯ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಕೂಡಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಚಿತ್ರ ಮಾತ್ರ ಅಂದುಕೊಂಡ ಮಟ್ಟದಲ್ಲಿ ಜನರನ್ನು ತಲುಪಲಿಲ್ಲ. ಈ ಬೇಸರ ರಕ್ಷಿತ್ ಶೆಟ್ಟಿಯವರಿಗೂ ಇದೆ.