ಕಲಬುರಗಿ: ಕಳೆದ ಒಂದುವರೆ ತಿಂಗಳಿನಿಂದ ಬಂದಾಗಿದ್ದ ಮದ್ಯ ಮಾರಾಟ ಸೋಮವಾರ ಇಂದು ಬೆಳಿಗ್ಗೆ 9 ರಿಂದ ಆರಂಭವಾಗುತ್ತದೆ ಎಂಬುದಾಗಿ ತಿಳಿದುಕೊಂಡಿದ್ದ ಮದ್ಯಪ್ರೀಯರಿಗೆ ಜಿಲ್ಲಾಡಳಿತ ಶಾಕ್ ನೀಡಿದೆ.
ಬೆಳಿಗ್ಗೆ 9ರಿಂದ ಮದ್ಯ ಮಾರಾಟ ಆರಂಭಕ್ಕೆ ಅಬಕಾರಿ ಅಧಿಕಾರಿಗಳು ಹಾಗೂ ವೈನ್ಸ್ ಅಂಗಡಿ ಮಾಲೀಕರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಕೋವಿಡ್-19 ಗೆ ದೇಶದಲ್ಲೇ ಮೊದಲ ಸಾವು ಸಂಭವಿಸಿದ್ದಲ್ಲದೇ ಐವರು ಸಾವನ್ನಪ್ಪಿದ್ದರಿಂದ ಮದ್ಯ ಮಾರಾಟ ಆರಂಭ ಮಾಡಬೇಕೋ ಇಲ್ಲವೇ ಇನ್ನಷ್ಟು ದಿನ ಮಾರಾಟ ನಿಷೇಧ ಮುಂದುವರೆಸಬೇಕು ಎಂಬುದನ್ನು ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಸ್ಪಷ್ಟವಾಗಿ ಭಾನುವಾರ ರಾತ್ರಿ ಹೇಳಿದ್ದರಿಂದ ಸೋಮವಾರ ಬೆಳಿಗ್ಗೆ ಮದ್ಯದಂಗಡಿ ತೆರೆಯಲಿಲ್ಲ. ಹೀಗಾಗಿ ಮದ್ಯವ್ಯಸನಿಗಳು ನಿರಾಸೆಯಿಂದ ಮರಳಿದರು.
ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ, ಅಬಕಾರಿ ಇಲಾಖಾಧಿಕಾರಿಗಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶರತ್ ಬಿ ಅವರು ಸಭೆ ನಡೆಸಿದ ನಂತರವೇ ಮುಂದಿನ ತೀರ್ಮಾನವಾಗಲಿದೆ.
ಅದೇ ರೀತಿ ಇತರ ಕಾರ್ಯ ಚಟುಚಟಿಕೆಗಳ ಆರಂಭದ ಕುರಿತಾಗಿಯೂ ಇದೇ ಸಭೆಯಲ್ಲಿ ನಿರ್ಧಾರವಾಗಲಿದೆ.