Advertisement
ಎಲ್ಲ ಜಿಲ್ಲೆಗಳ ಎಸ್‌ಪಿಗಳು ಹಾಗೂ ಇತರೆ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಪ್ರಧಾನಕಚೇರಿಯಿಂದ ಈ ಆದೇಶದ ಸುತ್ತೋಲೆ ಕಳುಹಿಸಲಾಗಿದೆ. ಸದ್ಯದಲ್ಲೇ ಮಿಲಾದ್ ಉನ್ ನೆಬಿ, ಗುರುನಾನಕ್ ಜಯಂತಿಯಂಥ ಹಬ್ಬಗಳು ಬರಲಿದ್ದು, ಅದರ ಜೊತೆಗೇ ಸುಪ್ರೀಂ ಕೋರ್ಟ್ ಅಯೋಧ್ಯೆಯ ತೀರ್ಪು ಪ್ರಕಟಿಸಲಿದ್ದು, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖೀಸಲಾಗಿದೆ.
ನ.4ರಿಂದ 10 ದಿನಗಳ ಕೆಲಸದ ದಿನಗಳಲ್ಲಿ ಯಾವಾಗ ಬೇಕಿದ್ದರೂ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠವು ಅಯೋಧ್ಯೆ ಸೇರಿದಂತೆ ನಾಲ್ಕು ಪ್ರಮುಖ ಪ್ರಕರಣಗಳ ತೀರ್ಪು ಪ್ರಕಟಿಸಲಿದ್ದಾರೆ. ದೇಶದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ದೀರ್ಘಾವಧಿಯ ಪರಿಣಾಮ ಬೀರುವಂಥ ತೀರ್ಪುಗಳು ಇವಾಗಿವೆ. ಅಯೋಧ್ಯೆ ಮಾತ್ರವಲ್ಲದೆ, ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ನೀಡಲಾಗಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿ, ರಫೇಲ್ ಡೀಲ್‌ಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ, ಸಿಜೆಐ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕೆಂದು ಕೋರಿರುವ ಅರ್ಜಿಗೆ ಸಂಬಂಧಿಸಿದ ತೀರ್ಪು ಕೂಡ 10 ದಿನಗಳೊಳಗೆ ಹೊರಬೀಳಲಿವೆ.