ಸಿಂಧನೂರು: ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವುದಕ್ಕೆ 30.8 ಎಕರೆ ಭೂಮಿಯಿದ್ದರೂ ಪ್ರಗತಿಯಿಲ್ಲ. ಮತ್ತೆ ಜಮೀನು ಖರೀದಿಸುವ ಉತ್ಸಾಹ ಪ್ರದರ್ಶಿಸಿದ ಇಲ್ಲಿನ ನಗರಸಭೆಯ ಪ್ರಸ್ತಾವನೆಗೆ ರಾಜೀವ್ ಗಾಂಧಿ ವಸತಿ ನಿಗಮ ಪರೋಕ್ಷವಾಗಿ ಚಾಟಿ ಬೀಸಿದೆ. ನಗರದಲ್ಲಿ ವಸತಿ ಸೌಲಭ್ಯ ವಂಚಿತ 5 ಸಾವಿರಕ್ಕೂ ಹೆಚ್ಚು ಜಾಗಕ್ಕಾಗಿ ಅರ್ಜಿ ಸಲ್ಲಿಸಿ 5 ವರ್ಷ ಕಳೆದರೂ ಅವುಗಳಿಗೆ ಮೋಕ್ಷ ಕಲ್ಪಿಸುವಲ್ಲಿ ಆಡಳಿತ ಪಲ್ಟಿ ಹೊಡೆದಿದೆ.
ಈಗಾಗಲೇ ಲಭ್ಯ ಇರುವ ಜಮೀನು ಬಳಸಿಕೊಂಡು ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಜಿದಾರರಿಗೆ ಮಂಜೂರಿ ಮಾಡುವ ಪ್ರಯತ್ನ ಫಲ ನೀಡಿಲ್ಲ. ಫಲಾನುಭವಿಗಳ ಆಯ್ಕೆಗೆ ಸಂಬಂ ಧಿಸಿ ತೀರ್ಮಾನ ಕೈಗೊಳ್ಳುವುದಕ್ಕೂ ಕಾಳಜಿ ತೋರಿಲ್ಲ. ಇದ್ದ ಜಮೀನು ಬಳಸಿಕೊಳ್ಳದೇ ಮತ್ತೆ ಜಮೀನು ಬೇಕೆಂದು ಕೇಳಿದ್ದಕ್ಕೆ ರಾಜೀವ್ ಗಾಂಧಿ ವಸತಿ ನಿಗಮ ಚಾಟಿ ಬೀಸಿದೆ. 30 ಎಕರೆ ಲಭ್ಯ-ಪ್ರಗತಿ ಏನು?: ನಿವೇಶನ ಹಂಚಿಕೆ ಮಾಡುವ ಮುನ್ನ ಮೊದಲು ಸರಕಾರಿ ಭೂಮಿಗೆ ಆದ್ಯತೆ ನೀಡಬೇಕು.
ಹೀಗಿದ್ದಾಗಲೂ ನಗರಸಭೆ ವ್ಯಾಪ್ತಿಯಲ್ಲಿ 30.8 ಎಕರೆ ಭೂಮಿಯನ್ನು ಸರಕಾರದ ಹಣ ವ್ಯಯಿಸಿ ಖರೀದಿ ಮಾಡಲಾಗಿದೆ. ಸರ್ವೆ ನಂಬರ್ 626ರಲ್ಲಿ 11.30 ಎಕರೆ ಜಮೀನು ಪ್ರತಿ ಎಕರೆಗೆ 19 ಲಕ್ಷ ರೂ.ನಂತೆ ಹಣ ಪಾವತಿಸಿ ಪಡೆಯಲಾಗಿದೆ. ಸರ್ವೆ ನಂಬರ್ 44ರಲ್ಲಿ 18.12 ಎಕರೆ ಜಮೀನು ಪ್ರತಿ ಎಕರೆಗೆ 22.50 ಲಕ್ಷ ರೂ. ಪಾವತಿಸಿ ಸರಕಾರದಿಂದ ಖರೀದಿ ಮಾಡಲಾಗಿದೆ. ಈ ಜಮೀನಿನಲ್ಲಿ ನಿವೇಶನಗಳನ್ನು ಕಲ್ಪಿಸುವ ಬದಲು ಮತ್ತೆ 42 ಎಕರೆ ಭೂಮಿ ಖರೀದಿಸಲು ಬೇಡಿಕೆ ಇಟ್ಟಿದ್ದನ್ನು ನಿಗಮ ಪ್ರಶ್ನಿಸಿದೆ. ಖರೀದಿಸಿದ ಜಮೀನಿನಲ್ಲಿ ನಿವೇಶನ ಕಲ್ಪಿಸಿದ ಯಾವುದೇ ಮಾಹಿತಿ ಇಲ್ಲವಾದ್ದರಿಂದ ಆ ಬಗ್ಗೆ ಪ್ರಗತಿ ವಿವರ ನೀಡಿ ಎಂದು ರಾಜೀವ್ ಗಾಂಧಿ ವಸತಿ ನಿಗಮ ಕೇಳಿದೆ.
ಇತ್ಯರ್ಥ ಕಾಣದ ಹಳ್ಳ-ಕೊಳ್ಳ ತಗಾದೆ: ಬಡವರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ನಿವೇಶನ ಒದಗಿಸಿ, ಅಲ್ಲಿ ಆಶ್ರಯ ಮನೆ ಕಟ್ಟಲು ಖರೀದಿ ಮಾಡಲಾದ ಜಮೀನುಗಳ ಕುರಿತು ತಗಾದೆ ಎದ್ದಿವೆ. ಖರೀದಿ ಮಾಡಲಾದ 11.36 ಎಕರೆ ವಾಸಕ್ಕೆ ಯೋಗ್ಯವಾಗಿಲ್ಲ. 18.12 ಎಕರೆ ಖರೀದಿ ಮಾಡಿದ್ದರೂ ಹೋಗಲು ದಾರಿಯಿಲ್ಲ. ಇಂತಹ ವಿವಾದಗಳೇ ದೊಡ್ಡವಾಗಿದ್ದು, ಅವುಗಳಿಗೆ ಪರಿಹಾರ ಕಲ್ಪಿಸುವ ಇಲ್ಲವೇ ತಾರ್ಕಿಕ ಅಂತ್ಯಕ್ಕೆ ತಲುಪಿಸುವ ಪ್ರಯತ್ನಗಳು ನಡೆದಿಲ್ಲ. ಮಾಜಿ ಶಾಸಕರು ಹಾಗೂ ಹಾಲಿ ಶಾಸಕರ ಪೈಕಿ ಯಾರು ತಪ್ಪಿತಸ್ಥರು ಎಂಬ ಹುಡುಕಾಟವೇ ದೊಡ್ಡದಾಗಿದೆ. ಈ ನಡುವೆ ನಿವೇಶನ ಬಯಸಿದ ಬಡವರು ಬಡವಾಗುತ್ತಿದ್ದಾರೆ.