Advertisement

ಪರಿಹಾರಕ್ಕಿಲ್ಲ ಅನುದಾನ ಕೊರತೆ

12:39 PM Aug 11, 2019 | Team Udayavani |

ಹಾವೇರಿ: ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆ ಹಾವಳಿ ಪರಿಹಾರಕ್ಕೆ ಯಾವುದೇ ಅನುದಾನ ಕೊರತೆ ಇಲ್ಲ. ಜಿಲ್ಲಾ ವಿಪತ್ತು ನಿಧಿಯಲ್ಲಿ 16 ಕೋಟಿ ರೂ. ಹಣವಿದೆ. ತಾಲೂಕಾಡಳಿತ ಬಳಿ 15 ರಿಂದ 20 ಲಕ್ಷ ರೂ. ಹಣವಿದೆ. ಸಂತ್ರಸ್ತರ ನೆರವಿಗೆ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ನೆರೆ ಹಾಗೂ ಅತಿವೃಷ್ಠಿ ಬಾಧಿತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದರು.

Advertisement

ಶನಿವಾರ ತಮ್ಮ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದರು. ನೆರೆ ಸಂತ್ರಸ್ತರಿಗಾಗಿ ಜಿಲ್ಲೆಯಲ್ಲಿ 76 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಮಳೆ ಹಾಗೂ ನೆರೆಯ ಸಂಕಷ್ಟದಲ್ಲಿರುವವರು ಪರಿಹಾರ ಕೇಂದ್ರಕ್ಕೆ ಆಗಮಿಸಿ ಆಶ್ರಯಪಡೆಯಬೇಕು ಎಂದು ಅವರು ಕೋರಿದರು.

ಆಗಸ್ಟ್‌ 8 ಮತ್ತು 9 ರಂದು 591.7 ಎಂಎಂ ಹಾಗೂ 9 ರಿಂದ 10 ರಂದು 224.3 ಎಂ.ಎಂ. ಮಳೆಯಾಗಿದೆ. ತುಂಗಭದ್ರಾ ನದಿಯಿಂದ 1.15 ಲಕ್ಷ ಕ್ಯೂಸೆಕ್‌ ನೀರನ್ನು ಹರಿಬಿಡಲಾಗಿದೆ. ವರದಾ ನದಿಯಿಂದ 32 ಕ್ಯೂಸೆಕ್‌ ಮತ್ತು ಧರ್ಮಾ ನದಿಯಿಂದ ಐದುಸಾವಿರ ಕ್ಯೂಸೆಕ್‌ ನೀರು ಹರಿದುಬಂದಿರುವುದರಿಂದ ನದಿಪಾತ್ರದ ಗ್ರಾಮಗಳಿಗೆ ನೆರೆ ಬಂದು ಹಾನಿಯಾಗಿದೆ. ಹಾನಗಲ್ ತಾಲೂಕಿನ ನಾಲ್ಕು ಗ್ರಾಮಗಳು, ಸವಣೂರ ತಾಲೂಕಿನ ನಾಲ್ಕು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಉಳಿದಂತೆ ಗ್ರಾಮಗಳಲ್ಲಿ ಭಾಗಶಃ ನೀರು ತುಂಬಿ ಹಾನಿ ಸಂಭವಿಸಿದೆ. ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪರಿಹಾರ ಕೇಂದ್ರ: ಜಿಲ್ಲೆಯಲ್ಲಿ 76 ಗ್ರಾಮಗಳು ಬಾಧಿತವಾಗಿದ್ದು, 6493 ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಹಾವೇರಿಯಲ್ಲಿ 53, ರಾಣಿಬೆನ್ನೂರಿನಲ್ಲಿ ಎರಡು, ಬ್ಯಾಡಗಿಯಲ್ಲಿ ಎರಡು, ಸವಣೂರಿನಲ್ಲಿ ನಾಲ್ಕು, ಶಿಗ್ಗಾವಿಯಲ್ಲಿ ನಾಲ್ಕು ಹಾಗೂ ಹಾನಗಲ್ನಲ್ಲಿ 11 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಹಾಗೂ ಹೊದಿಕೆಗಳನ್ನು ನೀಡಲಾಗಿದೆ. ಅಗತ್ಯ ವೈದ್ಯೋಪಚಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರವಾಹದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಹೋಗಿದ್ದು, ಈ ವರೆಗೆ ಪತ್ತೆಯಾಗಿಲ್ಲ ಹಾಗೂ ಐದು ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಜಿಪಂ ಸಿಇಒ ಕೆ.ಲೀಲಾವತಿ, ಎಸ್ಪಿ ಕೆ.ಜಿ. ದೇವರಾಜು, ಎಡಿಸಿ ಎನ್‌.ತಿಪ್ಪೇಸ್ವಾಮಿ ಇದ್ದರು.

84ಮಿಮೀ ಮಳೆ ದಾಖಲು:

ಕಳೆದ 24 ತಾಸುಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 32ಮಿಮೀ ಮಳೆಯಾಗಿದೆ. ಹಾವೇರಿ 25ಮಿ.ಮೀ., ರಾಣಿಬೆನ್ನೂರಿನಲ್ಲಿ 14.4ಮಿ.ಮೀ., ಬ್ಯಾಡಗಿಯಲ್ಲಿ 14.4ಮಿ.ಮೀ., ಹಿರೇಕೆರೂರಿನಲ್ಲಿ 35.8ಮಿ.ಮೀ., ಸವಣೂರಿನಲ್ಲಿ 39.5ಮಿ.ಮೀ., ಶಿಗ್ಗಾವಿಯಲ್ಲಿ 57ಮಿ.ಮೀ., ಹಾನಗಲ್ಲನಲ್ಲಿ 38.2ಮಿ.ಮೀ. ಮಳೆ ದಾಖಲಾಗಿದೆ.
ನೆರೆ ಸಂತ್ರಸ್ತರಿಗಾಗಿ ಜಿಲ್ಲೆಯಲ್ಲಿ 127 ಪರಿಹಾರ ಕೇಂದ್ರ ತೆರೆಯಲಾಗಿದೆ. 55 ಗ್ರಾಮಗಳ ಸಂಪರ್ಕ ರಸ್ತೆ¿ಲ್ಲಿ ನೀರು ನುಗ್ಗಿ ಸಂಪರ್ಕ ಸ್ಥಗಿತಗೊಂಡಿವೆ. ಕೆರೆ ದಡ, ಕಾಲುವೆ ಒಡೆದು, ರಸ್ತೆ ಕುಸಿದು 95.50ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next