Advertisement
ಪ್ರಸ್ತುತ ಕೊಂಕಣ ರೈಲ್ವೇಯಲ್ಲಿ ಕಮಿಷನ್ ಆಧಾರದಲ್ಲಿ ಟಿಕೆಟ್ ಬುಕ್ಕಿಂಗ್ ಏಜೆನ್ಸಿಗಳ ನೇಮಕ, ಹೊರಗುತ್ತಿಗೆ ಆಧಾರ ದಲ್ಲಿ ಉದ್ಯೋಗಿಗಳ ನೇಮಕ ಎಲ್ಲವೂ ಸ್ಥಳೀಯರ ಅವಕಾಶವನ್ನು ಕಿತ್ತುಕೊಳ್ಳುತ್ತಿವೆ.
Related Articles
Advertisement
ಖಾಸಗಿ ಬುಕಿಂಗ್ ಏಜೆಂಟ್‌ಗಳನ್ನು ನೇಮಿಸಿ 2 ವರ್ಷಗಳಾಗಿವೆ. ದೇಶದ ಎಲ್ಲ ರೈಲ್ವೇ ವಲಯಗಳಲ್ಲಿ ಏಜೆಂಟ್‌ಗಳ ನೇಮಕವಾಗಿದೆ. ಕೆಲವೆಡೆ ಇನ್ನೂ ಕಾರ್ಯಾಚರಣೆ ಆರಂಭವಾಗಿಲ್ಲ ಎಂದು ಕೊಂಕಣ ರೈಲ್ವೇ ಮೂಲಗಳು ತಿಳಿಸಿವೆ. ಈಗ ಪ್ರಯಾಣಿಕ ರೈಲು ಇಲ್ಲದ ಕಾರಣ ಟಿಕೆಟ್ ಕೊಡುವ ಅವಕಾಶವೂ ಇಲ್ಲ.
ಕೊಂಕಣ ರೈಲ್ವೇ ಕೈಗೆತ್ತಿಕೊಂಡ ವಿವಿಧ ಯೋಜನೆಗಳಿಗೆ ಒಬ್ಬರು ಡಿಜಿಎಂ, ಇಬ್ಬರು ಸಹಾಯಕ ಲೆಕ್ಕಪತ್ರ ಅಧಿಕಾರಿ, ಸೆಕ್ಷನ್ ಅಧಿಕಾರಿ, ಏಳು ಮಂದಿ ಲೆಕ್ಕಪತ್ರ ಸಹಾಯಕರನ್ನು ನೇಮಿಸಿಕೊಳ್ಳಲು ಪ್ರಕಟನೆ ನೀಡಲಾಗಿದೆ. ಇಲ್ಲೂ ಸ್ಥಳೀಯರಿಗೆ ಅವಕಾಶಗಳು ಸಿಗುವ ಸಾಧ್ಯತೆಗಳಿಲ್ಲ. ಏಕೆಂದರೆ ಇದಕ್ಕೆ ತಜ್ಞರೇ ಬೇಕು. “ಇದು ಕೇವಲ ಗುತ್ತಿಗೆ ಆಧಾರಿತ. ಆರಂಭದಲ್ಲಿ ಎರಡು ವರ್ಷಗಳ ಒಪ್ಪಂದದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ಹೇಳುತ್ತಿವೆ.
ಕೊರೊನಾ ಅವಧಿಯ 2021ರ ಜೂ. 8ರಂದು ಹೊರಟ ಅಧಿಸೂಚನೆಯಲ್ಲಿ 58 ತಾಂತ್ರಿಕ ಐಐಐ / ಎಲೆಕ್ಟ್ರಿಕಲ್ ಸಿಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇವರ ಬಹುತೇಕರು ಮಹಾರಾಷ್ಟ್ರದವರು, ವಿಶೇಷವಾಗಿ ನಾಗ್ಪುರ, ನಾಸಿಕ್‌ನವರು. ಸ್ಥಳೀಯರಿಗೆ, ಭೂ ಸಂತ್ರಸ್ತರಿಗೆ ಅವಕಾಶ ಸಿಕ್ಕಿಲ್ಲ. ಇರುವ ಸಿಬಂದಿಗೆ ಭಡ್ತಿಯ ಅವಕಾಶವನ್ನೂ ಕೈಬಿಡಲಾಗಿದೆ ಎಂಬ ಆರೋಪವಿದೆ.
ಪ್ರತ್ಯೇಕ ಕೋಟಾ ನಿಗದಿಪಡಿಸಿ :
ಕೊಂಕಣ ರೈಲ್ವೇಯಲ್ಲಿ ಭಡ್ತಿ, ನೇಮಕಾತಿ ಆಗಬೇಕಾದರೆ ಲಿಖೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆದರೆ ಮೂರು ಬಾರಿ ಪರೀಕ್ಷೆಯನ್ನು ಎದುರಿಸಲು ಅವಕಾಶಗಳಿದ್ದರೂ ಅವಕಾಶ ಕೊಟ್ಟಿಲ್ಲ ಎಂಬುದು ಸಿಬಂದಿಗಳ ಆರೋಪ. ರೈಲ್ವೇ ಹಳಿ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕಾದರೆ ಪ್ರತ್ಯೇಕ ಕೋಟಾ ನಿಗದಿಪಡಿಸಿ ಆಯ್ಕೆ ಮಾಡಬೇಕೇ ವಿನಾ ಇತರರ ಜತೆ ನೇಮಕಾತಿ ಸರಿಯಲ್ಲ ಎಂಬುದು ಸಂತ್ರಸ್ತರ ಆಗ್ರಹ.
ಭಾರತೀಯ ರೈಲ್ವೇ ನಿರ್ದೇಶನದಂತೆ ಕೊಂಕಣ ರೈಲ್ವೇ ನೇಮಕಾತಿ ಮಾಡಿಕೊಳ್ಳುತ್ತದೆ. ಯಾವುದೇ ನೇಮಕಾತಿಗೂ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಬೇಕು. ಕೊಂಕಣ ರೈಲ್ವೆಯು ಜಮ್ಮು ಕಾಶ್ಮೀರದಂತಹ ಕಡೆಯ ಪ್ರಾಜೆಕ್ಟ್ಗಳಿಗೆ ಡಿಜಿಎಂ ಮೊದಲಾದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತಿದೆ. ದೇಶಾದ್ಯಂತ ಟಿಕೆಟ್ ಬುಕ್ಕಿಂಗ್ ಏಜೆಂಟ ರನ್ನು ನೇಮಿಸಿದಂತೆ ಇಲ್ಲಿಯೂ ನೇಮಿಸ ಲಾಗುವುದು. ಸ್ಥಳೀಯ ಭೂಸಂತ್ರಸ್ತರಿಗೆ ಆದ್ಯತೆ ಇದ್ದು, ನೇಮಕ ಸಂದರ್ಭ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಿಂದಲೂ ಮಾಹಿತಿ ಪಡೆಯುತ್ತೇವೆ. – ಸುಧಾ ಕೃಷ್ಣಮೂರ್ತಿ, ಪಿಆರ್‌ಒ, ಕೊಂಕಣ ರೈಲ್ವೇ, ಮಂಗಳೂರು
ಸಿಬಂದಿ ನೇಮಿಸುವಾಗ ಕೊಂಕಣ ರೈಲ್ವೇ ಭೂಸಂತ್ರಸ್ತರಿಗೂ ಪ್ರತ್ಯೇಕ ಕೋಟಾ ನಿಗದಿಪಡಿಸಬೇಕು. ಕೊಂಕಣ ರೈಲ್ವೇಯಲ್ಲಿ ಭೂಸಂತ್ರಸ್ತರಿಗೆ ಆದ್ಯತೆ ಸಿಗಬೇಕು ಎಂದು ಆಗ್ರಹಿಸಿ ಕಾರ್ಯಕ್ರಮ ರೂಪಿಸುವವರಿದ್ದೆವು, ಕೊರೊನಾದಿಂದ ತುಸು ಹಿನ್ನಡೆಯಾಯಿತು. ಸಮಸ್ತ ಭೂಸಂತ್ರಸ್ತರನ್ನು ಸೇರಿಸಿ ತುತ್ತತುದಿಯ ಆಡಳಿತಕ್ಕೆ ಸಂದೇಶ ತಲುಪಿಸುವುದು ನಮ್ಮ ಉದ್ದೇಶ. ಇದನ್ನು ಸದ್ಯದಲ್ಲಿಯೇ ನಡೆಸಲಿದ್ದೇವೆ.– ನಾರಾಯಣ ಶೇರಿಗಾರ್ ಚಿಟ್ಪಾಡಿ, ಉಡುಪಿ
-ಮಟಪಾಡಿ ಕುಮಾರಸ್ವಾಮಿ