ನಂಜನಗೂಡು: ಸೋಮಾರಿ ಅಧಿಕಾರಿಗಳು ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡಿದರೆ ಒಳಿತು, ಇಲ್ಲವಾದಲ್ಲಿ ನಾವೇ ಅಂಥವರನ್ನು ಇಲ್ಲಿಂದ ಹೊರ ಕಳಿಸಬೇಕಾಗುತ್ತದೆ ಎಂದು ಸಂಸದ ಧ್ರುವನಾರಾಯಣ ಗುಡುಗಿದರು.
ವರುಣಾ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರರ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಅನುಪಸ್ಥಿತಿಯನ್ನು ಕಂಡು ಕೆಂಡಾಮಂಡಲವಾದ ಸಂಸದರು, ಬೇಜವಾಬ್ದಾರಿ ಅಧಿಕಾರಿಗಳು ನಮಗೆ ಬೇಕಿಲ್ಲ. ಅಂಥವರನ್ನು ನಾವು ಕಳಿಸುವ ಮೊದಲೇ ಇಲ್ಲಿಂದ ಜಾಗ ಖಾಲಿ ಮಾಡುವುದು ಒಳಿತು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ತಾಕೀತು ಮಾಡಿದರು.
ಶಿಸ್ತು, ಸಮಯ ಪ್ರಜ್ಞೆ ಇಲ್ಲದ ನೀವು ಮಕ್ಕಳಿಗೆ ಏನು ಕಲಿಸಲು ಸಾಧ್ಯ. ಸಮಯ ಪ್ರಜ್ಞೆ ಇಲ್ಲದ ನೀವು ಶಿಕ್ಷಣಧಿಕಾರಿ. ನಿಮ್ಮಂತವರಿಂದ ಮಕ್ಕಳು ಕಲಿಯುವುದೇನಿದೆ ಎಂದು ತಡವಾಗಿ ಸಭೆಗೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣವರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕ ಡಾ.ಯತೀಂದ್ರ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ವರುಣಾ ವಿಧಾನಸಭೆ ವ್ಯಾಪ್ತಿಯ ತಾಲೂಕಿನ ಎಲ್ಲಾ ಪ್ರದೇಶಗಳಲ್ಲಿ ಆಗಬೇಕಾದ ಅಭಿವೃದ್ಧಿಗಳ ಪಟ್ಟಿ ನೀಡುವಂತೆ ಸೂಚಿಸಿ, ಕ್ಷೇತ್ರದ ಪ್ರಗತಿಗೆ ಕೈಜೋಡಿಸಬೇಕೆಂದು ಕೋರಿದರು.
ಸಭೆಯಲ್ಲಿ ಜಿಪಂ ಸದಸ್ಯೆ ಲತಾ, ಸದಾನಂದ, ತಾಪಂ ಸದಸ್ಯ ಮಹದೇವಯ್ಯ, ತಾಪಂ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜು, ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ ಮುಂತಾದವರು ಶಾಸಕ ಡಾ.ಯತೀಂದ್ರರನ್ನು ಸ್ವಾಗತಿಸಿದರು.