ಚೆನ್ನೈ : ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ತಡೆಗಟ್ಟುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ವರೆಗೆ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ನಡೆಸಕೂಡದು ಎಂದು ಆಗ್ರಹಿಸಿ ಇಲ್ಲಿನ ಹಿರಿಯ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಚೆನ್ನೈನ ಓರ್ವ ತನಿಖಾಧಿಕಾರಿಯಾಗಿ ತಾನು 2013ರಲ್ಲಿ ಐಪಿಎಲ್ ಬೆಟ್ಟಿಂಗ್ ಹಗರಣವನ್ನು ಬಯಲುಗೊಳಿಸಿದ್ದೇನೆ ಎಂದು ಸಂಪತ್ ಹೇಳಿಕೊಂಡಿದ್ದಾರೆ.
ವಿಚಿತ್ರವೆಂದರೆ 2013ರ ಐಪಿಎಲ್ ಬೆಟ್ಟಿಂಗ್ ಹಗರಣದ ವೇಳೆ ಆರೋಪಿ ಬುಕ್ಕಿಗಳಿಂದ ಲಂಚ ಪಡೆದಿದ್ದರೆಂಬ ಆರೋಪದ ಮೇಲೆ ಸಂಪತ್ ಕುಮಾರ್ ನಾಲ್ಕು ವರ್ಷಗಳ ಅವಧಿಗೆ ಅಮಾನತು ಗೊಂಡಿದ್ದರು. ಆಗ ಅವರು ತಮಿಳು ನಾಡು ಪೊಲೀಸ್ ದಳದ ಕ್ಯೂ ಬ್ರ್ಯಾಂಚಿನ ಪೊಲೀಸ್ ಸುಪರಿಂಟೆಂಡೆಂಟ್ ಆಗಿದ್ದರು. ಅನಂತರದಲ್ಲಿ ಅವರ ಮೇಲಿನ ಆರೋಪಗಳು ವಜಾಗೊಂಡು 2018ರ ಮಾರ್ಚ್‌ನಲ್ಲಿ ಅವರನ್ನು ಹುದ್ದೆಯಲ್ಲಿ ಪುನರ್ ಸ್ಥಾಪಿಸಲಾಯಿತು.
ಅಂದಿನ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆಯಲ್ಲಿ ಹಲವು ಪ್ರಮುಖ ಕ್ರಿಕೆಟರ್‌ಗಳ ಹೆಸರು ಬಹಿರಂಗವಾಗಿದ್ದವು.
ಐಪಿಎಲ್ ಮೇಲೆ ನಿಷೇಧ ಹೇರಬೇಕೆಂದು ನಾನೇನೂ ಕೇಳಿಕೊಳ್ಳುತ್ತಿಲ್ಲ; ಬದಲು ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಿಯಂತ್ರಣಕ್ಕೆ ಪರಿಣಾಮಕಾರಿ ವ್ಯವಸ್ಥೆ ಜಾರಿಯಾಗಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಸಂಪತ್ ಹೇಳಿದ್ದಾರೆ.
ಸಂಪತ್ ಕುಮಾರ್ ಅವರು ತಮ್ಮ ಪಿಐಎಲ್ ಅರ್ಜಿಯಲ್ಲಿ ಎಲ್ಲ 8 ಐಪಿಎಲ್ ತಂಡಗಳನ್ನು ಉತ್ತರದಾಯಿಗಳನ್ನಾಗಿ ಹೆಸರಿಸಿದ್ದಾರೆ. 8 ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಎರಡು ವರ್ಷಗಳ ನಿಷೇಧದ ಬಳಿಕ ಈ ಬಾರಿ ಐಪಿಎಲ್ ಪುನರ್ ಪ್ರವೇಶ ಮಾಡಿವೆ.