Advertisement

ಹಿಂಗಾರಿನಲ್ಲಿ ಈರುಳ್ಳಿ-ಶೇಂಗಾ ಬೆಳೆಯಲು ಹಿಂದೇಟು

04:08 PM Dec 09, 2019 | Suhan S |

ಕುಮಟಾ: ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಈರುಳ್ಳಿ ಹಾಗೂ ಶೇಂಗಾ ಬೆಳೆಗಾರರು ಬೆಳೆ ಬೆಳೆಯಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ.

Advertisement

ತಾಲೂಕಿನ ಅಳ್ವೆಕೋಡಿ, ಹಂದಿಗೋಣ ಮತ್ತು ವನ್ನಳ್ಳಿ ಭಾಗದ ರೈತರು ಪ್ರತಿವರ್ಷ ಭತ್ತದ ಬೆಳೆ ಕಟಾವು ಮಾಡಿದ ನಂತರ ಎಕರೆಗಟ್ಟಲೆ ಪ್ರದೇಶದಲ್ಲಿ ಈರುಳ್ಳಿ ಮತ್ತು ಶೇಂಗಾ ಬೆಳೆ ಬೆಳೆಯಲು ಅಣಿಯಾಗುತ್ತಿದ್ದರು. ಆದರೆ ಈ ವರ್ಷ ನವೆಂಬರ್‌ ತಿಂಗಳವರೆಗೆ ಸುರಿದ ಮಳೆ ಮತ್ತು ಈಗಲೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೇಸಿಗೆಯಲ್ಲಿ ಬೆಳೆಯಬೇಕಾದ ಈರುಳ್ಳಿ ಹಾಗೂ ಶೇಂಗಾ ಬೆಳೆಯ ಬಿತ್ತನೆಗೆರೈತರು ಮುಂದಾಗುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗಳು ಮಳೆಯಿಂದ ನಾಶ ಹೊಂದಬಹುದೇ ಎಂಬ ಭಯ ರೈತರನ್ನು ಕಾಡುತ್ತಿದೆ. ಅಳ್ವೆಕೋಡಿಯ ಚೆಂಡು ಈರುಳ್ಳಿ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ.

ಇಲ್ಲಿನ ಈರುಳ್ಳಿ ಕೊಂಡೊಯ್ಯಲು ಬೇರೆ ಬೇರೆ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ. ಆದರೆ ಈ ಬಾರಿ ಬೆಳೆ ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿರುವ ಕಾರಣದಿಂದ ಬೆಳೆಯಲ್ಲಿ ಕುಂಠಿತವಾಗಿ, ಬೆಲೆಯೂ ದುಬಾರಿಯಾಗುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಈರುಳ್ಳಿ ದರವೂ ಅಧಿಕಗೊಳ್ಳುತ್ತಿದ್ದು, ಇದರಿಂದ ಕುಮಟಾದ ಈರುಳ್ಳಿ ಬೆಳೆಗಾರರಿಗೂ ಆರ್ಥಿಕವಾಗಿ ಅನುಕೂಲವಾಗುತ್ತಿತ್ತು. ಆದರೆ ಹವಾಮಾನವೈಪರಿತ್ಯದಿಂದ ಈರುಳ್ಳಿ ಬೆಳೆಯಲು ರೈತ ಆಸಕ್ತಿ ತೋರುತ್ತಿಲ್ಲ. ಅಕಾಲಿಕವಾಗಿ ಮಳೆ ಸುರಿದರೆ ಬೆಳೆದ ಬೆಳೆಗಳೆಲ್ಲ ನಾಶವಾಗುತ್ತದೆ ಎಂಬ ಆತಂಕ ರೈತಾಪಿ ವರ್ಗದಲ್ಲಿ ಮನೆಮಾಡಿದೆ.

ಭತ್ತದ ಕೊಯ್ಲಿನ ಸಮಯದಲ್ಲಿ ಮಳೆಯಿಂದ ಸಾಕಷ್ಟು ಬೆಳೆಗಳು ನಾಶವಾಗಿದ್ದವು. ಅದೇ ರೀತಿ ಈರುಳ್ಳಿ ಮತ್ತು ಶೇಂಗಾ ಬೆಳೆ ಬೆಳೆದ ಸಂದರ್ಭದಲ್ಲಿಯೂ ಮತ್ತೆ ಮಳೆಯಾದರೆ ಬೆಳೆಗಳೆಲ್ಲ ನೀರುಪಾಲಾಗುತ್ತಿದೆ ಎಂಬ ಭಯ ಕಾಡುತ್ತಿದೆ. ಈ ಕಾರಣದಿಂದ ಶೇಂಗಾ ಮತ್ತು ಈರುಳ್ಳಿ ಬಿತ್ತನೆಗೆ ವಿಳಂಬ ಮಾಡಲಾಗುತ್ತಿದೆ ಎನ್ನುತ್ತಾರೆ ಅಳ್ವೆಕೋಡಿಯ ಕೃಷಿಕರು.

 

Advertisement

-ಕೆ. ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next