ದೊಡ್ಡಬಳ್ಳಾಪುರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಜು.14ರ ರಾತ್ರಿ 8 ಗಂಟೆಯಿಂದ ಜು.22ರ ಬೆಳಗ್ಗೆ 5ರವರೆಗೆ ಬೆಂ.ನಗರ ಸೇರಿದಂತೆ ಗ್ರಾಮಾಂತರ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಜನತೆ ಒಲ್ಲದ ಮನಸ್ಸಿನಿಂದ ಸಿದ್ಧರಾಗುತ್ತಿರುವಂತೆ ಕಂಡು ಬಂದಿದೆ.
ಬುಧವಾರದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ನಿತ್ಯ 2 ಗಂಟೆ ನಂತರ ಮಾಡಲಾಗುತ್ತಿದ್ದ ಲಾಕ್‌ಡೌನ್‌ಗೆ ವಿನಾಯ್ತಿ ನೀಡಿ ಸೋಮವಾರ ಬಹಳಷ್ಟು ವಾಣಿಜ್ಯ ಮಳಿಗೆಗಳು ತೆರೆದಿದ್ದವು. ನಗರದ ವಿವಿಧ ಬ್ಯಾಂಕ್, ಸರ್ಕಾರಿ ಕಚೇರಿಗಳಲ್ಲಿ ತಮ್ಮ ಬಾಕಿ ಇರುವ ಕೆಲಸ ಮಾಡಿಕೊಳ್ಳಲು ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಚೇರಿಗಳ ಸಿಬ್ಬಂದಿ ಸಾರ್ವಜನಿ ಕರಿಗೆ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದರು.
ಕೋವಿಡ್ ತಂದ ಸಂಕಷ್ಟ: ಮೇ ನಲ್ಲಿ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಇನ್ನೂ ಬಹಳಷ್ಟು ವಾಣಿಜ್ಯ ವಹಿವಾಟು, ಕೈಗಾರಿಕೆಗಳು ಸಹಜ ಸ್ಥಿತಿಗೆ ಬಂದಿಲ್ಲ. ನಗರದ ಜೀವನಾಡಿಯಾದ ನೇಕಾರಿಕೆಯೂ ತೀವ್ರ ಕುಸಿತ ಕಂಡಿದ್ದು, ನೇಕಾರರಿಗಂತೂ ತೀವ್ರ ಆರ್ಥಿಕ ಹೊಡೆತ ನೀಡಿದೆ. ಇನ್ನು ಬಹಳಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಕೂರುವ ಸ್ಥಿತಿ ನಿರ್ಮಾಣವಾಗಿತ್ತು. ಕೈಗಾರಿಕಾ ಪ್ರದೇಶದ ಬಹಳಷ್ಟು ಕಾರ್ಖಾನೆಗಳಲ್ಲಿ ಕೆಲಸ ಹೆಚ್ಚು ಸಂಬಳ ಕಡಿಮೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಕಾರ್ಖಾನೆಗಳಲ್ಲಿ ಕೆಲಸಕ್ಕಾಗಿ ಜನ ಗೋಗರೆಯುತ್ತಿದ್ದಾರೆ. ಅಂಗಡಿ ಮುಂಗ್ಗಟ್ಟುಗಳಲ್ಲಿ, ಹೋಟೆಲ್‌ಗಳಲ್ಲಿಯೂ ಈ ಮುಂಚೆ ಇದ್ದ ವ್ಯಾಪಾರ ಇಲ್ಲವಾಗಿವೆ.
ಈ ಹಿಂದೆ ಹಲವಾರು ದಾನಿಗಳು ಹಾಗೂ ಸಂಘ ಸಂಸ್ಥೆಗಳು ದಿನಸಿ ಕಿಟ್ ನೀಡಿ ನೆರವಾಗಿದ್ದವು. ಆದರೆ ಈಗಿಲ್ಲ.ಈಗ ಅದೇ ರೀತಿ ಯಾರು ನೀಡುತ್ತಾರೆ ಎನ್ನುವುದು ಅನುಮಾನವಾಗಿದೆ. ಕೆಲಸವಿಲ್ಲದೇ ಖರ್ಚು ನಿಭಾಯಿಸುವುದಾದರೂ ಹೇಗೆ ಎನ್ನುವುದು ಬಡ ಹಾಗೂ ಮಧ್ಯಮ ವರ್ಗದವರ ಚಿಂತೆಯಾಗಿದೆ.