Advertisement

ರಾಜ್ಯ ಕಾಂಗ್ರೆಸ್‌ನಲ್ಲಿ ಒಳ ಜಗಳವಿಲ್ಲ: ಖರ್ಗೆ

09:25 AM Mar 18, 2022 | Team Udayavani |

ಕಲಬುರಗಿ: ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಒಳ ಜಗಳವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದು ಪಕ್ಷ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನವದೆಹಲಿಯಿಂದ ವಿಮಾನದ ಮೂಲಕ ಸಂಜೆ ನಗರಕ್ಕಾಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಒಳಜಗಳ ಕಾರಣ. ಅಲ್ಲದೇ ಈ ಹಿಂದೆ ನಮಗೆ ಅಧಿಕಾರ ಸಿಕ್ಕ ರಾಜ್ಯದಲ್ಲಿ ಸರ್ಕಾರ ಅಸ್ಥಿರ ಮಾಡಿದ ಬಿಜೆಪಿಯವರು ಪ್ರಜಾಪ್ರಭುತ್ವ ಕೊಲೆ ಮಾಡಿದ್ದಾರೆ. ಯಾವ ಪ್ರಧಾನಿಯೂ ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡುವುದಿಲ್ಲ. ಆದರೆ ಮೋದಿ ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡುತ್ತಾ ಹೋದ್ರೆ ಪ್ರಜಾಪ್ರಭುತ್ವ ಉಳಿಯಲ್ಲ. ಧರ್ಮ, ಹಣ, ವ್ಯಕ್ತಿ ಪೂಜೆ ಮಾಡುವವರಿಂದ ನಿಷ್ಪಕ್ಷಪಾತ ಚುನಾವಣೆ ನೋಡಲು ಸಾಧ್ಯವಿಲ್ಲ. ಸಂವಿಧಾನ ಉಳಿಸಲು ಜನರು ಜಾಗೃತರಾಗಬೇಕಿದೆ ಎಂದರು.

ದಿ ಕಾಶ್ಮೀರಿ ಫೈಲ್ಸ್‌ ಚಿತ್ರ ಚೆನ್ನಾಗಿದ್ದರೆ ಜನ ನೋಡ್ತಾರೆ. ಆದರೆ ಪ್ರಧಾನಿ ಪ್ರಮೋಟ್‌ ಮಾಡೋದನ್ನು ನೋಡಿದರೆ ಇದರ ಮರ್ಮ ಗೊತ್ತಾಗುತ್ತದೆ. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಚಿತ್ರ ತೆಗೆದಿದ್ದಾರೆ. ಜನ ತಾವಾಗಿಯೇ ನೋಡಿದ್ರೆ ಯಾರದ್ದೂ ಅಭ್ಯಂತರವಿಲ್ಲ. ಬಿಜೆಪಿಯವರು ತಮ್ಮ ಪಕ್ಷದ ಮೀಟಿಂಗ್‌ನಲ್ಲಿ ಪ್ರಮೋಟ್‌ ಮಾಡ್ತಿದ್ದಾರೆ. ಪ್ರಮುಖವಾಗಿ ದೇಶದಲ್ಲಿ ಬೆಂಕಿ ಹಚ್ಚುವುದು, ದೇಶ ವಿಭಜನೆ ಮಾಡೋ ಕೆಲಸ ಮಾಡುತ್ತಿದ್ದಾರೆ ಎಂದರು.

ದೇಶಕ್ಕಾಗಿ ಬಲಿದಾನ ಮಾಡಿದವರ ಚಿತ್ರ ತೆಗೆದು ತೋರಿಸಲಿ. ಆದರೆ ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕೆ ಯಾರೂ ಬಲಿದಾನ ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾದ್ರೆ ಅವರಿಗೆ ನ್ಯಾಯ ಒದಗಿಸಿ. ಇದೀಗ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆವರೆಗೆ ಮತ್ತೆ ಈ ರೀತಿಯ ಚಿತ್ರಗಳು ಬರುತ್ತವೆ. ಮೋದಿ ತಮಗೆ ಚಿತ್ರ ತೋರಿಸಿಲ್ಲ, ತಮಗೆ ನೋಡು ಅಂತಲೂ ಹೇಳಿಲ್ಲ ಎಂದರು.

ಹೊಗಳುತ್ತಿದ್ದವರೇ ಈಗ ತೆಗಳುತ್ತಿದ್ದಾರೆ!

Advertisement

ಮೊನ್ನೆವರೆಗೂ ಸೋನಿಯಾ ಗಾಂಧಿ ಅವರನ್ನು ಹೊಗಳುತ್ತಿದ್ದರು. ಗೆದ್ದಾಗ ಇದೇ ನಾಯಕರು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಹೊಗಳಿದ್ದರು. ಕೆಲ ಜನರಿಗೆ ಅಧಿಕಾರಬೇಕು. ಆದರೆ ಅವರು ಅಷ್ಟು ಶಾಸಕರನ್ನೇ ಗೆಲ್ಲಿಸಿಲ್ಲ. ಇದೇ ನಾಯಕರೇ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ಕರೆತಂದಿದ್ದು. ಇದೀಗ ಅವರೇ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ ಗಾಂಧಿ ಗುಂಡಿಗೆ ಬಲಿಯಾಗಿದ್ದಾರೆ. ಇವರು ಯಾರಾದರೂ ದೇಶಕ್ಕಾಗಿ ಜೀವ ಕೊಟ್ಟಿದ್ದಾರಾ? ಪಕ್ಷದ ಮೇಲೆ ಅಭಿಮಾನ ಇರೋರು ಈ ರೀತಿ ಮಾತನಾಡುವುದು ಸರಿಯಲ್ಲ. ಸಿಡಬ್ಲ್ಯುಸಿ ಸಭೆಯಲ್ಲಿ ಇವರ್ಯಾರು ಮಾತನಾಡಲ್ಲ. ಹೊರಗಡೆ ಮಾತ್ರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಒಳ್ಳೆಯದಾಯ್ತು ಅಂದ್ರೆ ನಂದು, ಕೆಟ್ಟದಾಯ್ತು ಅಂದ್ರೆ ನಿಂದು ಅನ್ನೋರಿದ್ದಾರೆ ಎಂದು ಡಾ| ಖರ್ಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next