ಪಿರಿಯಾಪಟ್ಟಣ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ತಿಳಿಸಿದರು.
ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಬರುವ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೂತ್ ವಿಜಯ, ಸಂಕಲ್ಪ ಅಭಿಯಾನದ ಮೂಲಕ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಿರುವ 123 ಬಿಜೆಪಿ ಶಾಸಕರ ಕ್ಷೇತ್ರಗಳೊಂದಿಗೆ ಈ ಹಿಂದೆ ಬಿಜೆಪಿ ಗೆದ್ದಿದ್ದ 50 ಕ್ಷೇತ್ರಗಳನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಪಕ್ಷ ಸಂಘಟಿಸಲಾಗುತ್ತಿದ್ದು. ಈ ಬಾರಿ ಪಕ್ಷ ಯಾರೊಂದಿಗೂ ಆಂತರಿಕ ಮತ್ತು ಬಾಹ್ಯವಾಗಿ ಒಪ್ಪಂದ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಹದೇಶ್ವರ ಬೆಟ್ಟದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದು, ಮಾ.03 ರಂದು ಕಿತ್ತೂರು ಮಾರ್ಗವಾಗಿ ಬೆಟ್ಟದಪುರ ಬಂದು ನಂತರ 12:30ಕ್ಕೆ ಪಿರಿಯಾಪಟ್ಟಣಕ್ಕೆ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು ಪಟ್ಟಣದ ಎಪಿಎಂಸಿ ಆವರಣದಿಂದ ಬಿಎಂ ರಸ್ತೆಯ ಮೂಲಕ ಕನಕ ಭವನದ ವರೆಗೆ ಬೈಕ್ ರ್ಯಾಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ವಿ.ಸೋಮಣ್ಣ, ಆರ್.ಅಶೋಕ್, ಕೆ.ಸಿ.ನಾರಾಯಣಗೌಡ, ಗೋಪಾಲಯ್ಯ, ಅರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ, ಎಸ್.ಎಸ್.ಅಂಗಾರ, ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ, ಎನ್.ಮಹೇಶ್ ನಿರ್ಮಲ್ ಕುಮಾರ್ ಸುರಾನಾ, ರಾಜೇಂದ್ರ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದು, ಪಿರಿಯಾಪಟ್ಟಣ ತಾಲೂಕಿನಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್.ಸಿ.ಬಸವರಾಜು, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ, ಮಾಜಿ ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು, ವಕೀಲ ರಾಜೇಗೌಡ, ಮುಖಂಡರಾದ ಆರ್.ಟಿ.ಸತೀಶ್, ಕೌಲನಹಳ್ಳಿ ಸೋಮಶೇಖರ್, ರಮೇಶ್, ರವಿಕುಮಾರ್, ಲೋಕಪಾಲಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.