Advertisement

ಗ್ರಾಪಂ ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲ

05:21 PM Feb 22, 2021 | Nagendra Trasi |

ಮುದ್ದೇಬಿಹಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಪಂಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳುವಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಸುಪ್ರೀಂ ಪಾವರ್‌ ಇದೆ. ಇದರಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಶಾಸಕರು ಸಲಹೆ ನೀಡಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಚೊಂಡಿ, ಇಂಗಳಗೇರಿ, ಅಬ್ಬಿಹಾಳ, ಬೈಲಕೂರ, ಬಳಬಟ್ಟಿ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ ಹಾಗೂ 2020-21ನೇ ಸಾಲಿನ ಪ್ರವಾಹ ಪರಿಹಾರ ಯೋಜನೆ ಅಡಿ ಹೊಲಗಳ ರಸ್ತೆ ದುರಸ್ತಿ ಕಾಮಗಾರಿಗಳಿಗೆ ರವಿವಾರ ಆಯಾ ಗ್ರಾಮಗಳಲ್ಲಿ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಆರ್ಥಿಕ ಹೊಡೆತದಿಂದಾಗಿ ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ಶೇ. 30-35 ಅನುದಾನ ಕಡಿತ ಸಂಭವ ಇದೆ. ಆದರೂ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಹೆಚ್ಚಿನ ಅನುದಾನ ತರಲು ಯೋಜನೆ ರೂಪಿಸಿದ್ದೇನೆ. ಈಗಾಗಲೇ ಕೋಟ್ಯಂತರ ರೂ. ಅನುದಾನ ತಂದು ಶೇ. 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಭಿವೃದ್ಧಿ, ಮೂಲಸೌಕರ್ಯ ಕಾಮಗಾರಿ ಪ್ರಾರಂಭಿಸಿದ್ದೇನೆ ಎಂದರು.

ತಾಲೂಕಿನಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಾಗಬೇಕಿದೆ. ನಮ್ಮ ಪ್ರತಿಸ್ಪರ್ಧಿಗಳ ಊರುಗಳು ಹೊಳೆದಂಡಿ ಭಾಗದಲ್ಲಿರುವುದರಿಂದ ಅಲ್ಲಿನ ಜನಕ್ಕೆ ಮಾತು ಕೊಟ್ಟಂತೆ ಮೊದಲನೇ ಹಂತದಲ್ಲಿ ಹೊಳೆದಂಡಿಯ 68 ಹಳ್ಳಿಗಳಿಗೆ ತಲಾ 2-3 ಕೋಟಿಯಂತೆ ಅನುದಾನ ತಂದು ಅಭಿವೃದ್ದಿ ಆರಂಭಿಸಿದ್ದೇನೆ. ಎರಡನೇ ಹಂತದಲ್ಲಿ ಮಸಾರಿ ಹಳ್ಳಿಗಳ ಅಭಿವೃದ್ಧಿ ಪ್ರಾರಂಭಿಸಿದ್ದೇನೆ.

ಮಸಾರಿ ಹಳ್ಳಿಗಳು ನನ್ನ ಊರುಗಳು ಅನ್ನೋ ಕಾರಣಕ್ಕೆ ಸ್ವಲ್ಪ ತಡ ಮಾಡಿದ್ದೇನೆ. ಇಂಗಳಗೇರಿ ಭಾಗದಲ್ಲಿ 2.41 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ  ಸೇರಿ ಹಲವು ಬೇಡಿಕೆಗಳು ಶೀಘ್ರ ಈಡೇರಲಿವೆ. ಎಲ್ಲಾ ಕಡೆ ಕುಡಿಯುವ ನೀರಿನ ಯೋಜನೆ ಸಮಸ್ಯೆ ಬಗೆಹರಿಸಲಾಗುತ್ತದೆ. ದೇವಸ್ಥಾನಗಳಿಗೂ ಅನುದಾನ ನೀಡಲಾಗುತ್ತದೆ ಎಂದರು.

Advertisement

ಜುಲೈನಿಂದ ವಿದ್ಯಾರ್ಥಿಗಳಿಗೆ ನೋಟಬುಕ್‌ ಹಂಚಿಕೆ, ಸಾಮೂಹಿಕ ವಿವಾಹ ಪ್ರಾರಂಭಿಸುತ್ತೇನೆ. ಸಾಮೂಹಿಕ ವಿವಾಹಕ್ಕೆ ಸರ್ಕಾರದ ಸಪ್ತಪದಿ ಯೋಜನೆ ನೆರವಿಗೆ ಬರಲಿದ್ದು ಹೆಚ್ಚುವರಿ ಖರ್ಚನ್ನು ಭರಿಸುತ್ತೇನೆ. ಮೀನುಗಾರಿಕೆಗೆ ಆದ್ಯತೆ ನೀಡುತ್ತೇನೆ. ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೃಷಿ ಸಚಿವರ ಮನವೊಲಿಸುತ್ತೇನೆ.

ಬಸರಕೋಡದಲ್ಲಿ ಇಥೆನಾಲ್‌, ಅಲಾಯ್ಡ ಫುಡ್‌ ಫ್ಯಾಕ್ಟರಿ ಸ್ವಂತ ಹಣದಲ್ಲಿ ಪ್ರಾರಂಭಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ ಎಂದರು. ಕೊರೊನಾದಲ್ಲಿ ಎಷ್ಟು ಕಷ್ಟ ಇತ್ತು ಅನ್ನೋದು ಎಲ್ಲರಿಗೂ ಗೊತ್ತು. 3 ಕೋಟಿ ಸ್ವಂತ ಹಣ ಖರ್ಚು ಮಾಡಿ ಮುದ್ದೇಬಿಹಾಳ, ದೇವರಹಿಪ್ಪರಗಿ ಮತಕ್ಷೇತ್ರಗಳ ಬಡವರಿಗೆ ಆಹಾರ ಧಾನ್ಯ ಮತ್ತಿತರ ಸೌಲಭ್ಯ ನೀಡಿ ನೆರವಿಗೆ ನಿಂತಿದ್ದೇನೆ. ಈವತ್ತಿಗೂ ಬಡವರು ಅದನ್ನು ಮರೆತಿಲ್ಲ. ಜನಸಾಮಾನ್ಯನ ಮನೆಯಲ್ಲಿ ಹುಟ್ಟಿ ನಿಮ್ಮೆಲ್ಲರ ಆಶೀರ್ವಾದದಿಂದ ಜನಪ್ರತಿನಿಧಿ  ಯಾಗಿದ್ದೇನೆ. ಭಗವಂತ ನನಗೆ ಶ್ರೀಮಂತಿಗೆ ಜೊತೆಗೆ ಜನರನ್ನು ಪ್ರೀತಿಸುವ ಗುಣವನ್ನೂ ಕೊಟ್ಟಿದ್ದಾನೆ. ಹೀಗಾಗಿ ದುಡಿದ ಹಣದಲ್ಲಿ ಅರ್ಧ
ಸಮಾಜಕ್ಕೆ ನೀಡಿದ್ದೇನೆ. ಇದರ ಪ್ರತಿಫಲವಾಗಿ ಜನ ನನಗೆ ಪ್ರೀತಿ ಕೊಟ್ಟಿದ್ದಾರೆ. ಜನಪ್ರತಿನಿಧಿಯನ್ನಾಗಿ ಮಾಡಿದ್ದಾರೆ. ನಾನು ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ, ಗ್ರಾಪಂ ಸದಸ್ಯರಾದ ಶಾಂತಪ್ಪ ಕಂಬಳಿ, ಶಿವನಗೌಡ ತಾಳಿಕೋಟೆ, ಬಿಜೆಪಿ ಧುರೀಣರಾದ ಅಪ್ಪುಗೌಡ ಮೈಲೇಶ್ವರ, ಪರಶುರಾಮ ಮುರಾಳ, ಸಿಪಿಐ ಆನಂದ ವಾಘೊ¾àಡೆ, ಆಯಾ ಗ್ರಾಮಗಳ ಬಿಜೆಪಿ ಧುರೀಣರು, ಸ್ಥಳೀಯ ಗಣ್ಯರು, ಸಾರ್ವಜನಿಕರು, ಅಧಿಕಾರಿಗಳು ಇದ್ದರು.

ಇಂಗಳಗೇರಿ ಗ್ರಾಮಸ್ಥರಿಗೆ ಬುದ್ದಿವಾದ
ಇಂಗಳಗೇರಿಯಲ್ಲಿ ಜನರು ಸಲ್ಲಿಸಿದ ಬೇಡಿಕೆಗಳ ಮನವಿ ಕುರಿತು ಚರ್ಚಿಸಿದ ಶಾಸಕರು, ಇಂಗಳಗೇರಿ ಕೆರೆ ತುಂಬಿದ ಮೇಲೆ ಕಾಲುವೆಯ ಗೇಟ್‌ ತೆರೆದು ಮುಂದಿನವರಿಗೆ ಬಿಡಿ. ಕೆರೆ ತುಂಬಿಸಿದ್ದು ಕುಡಿಯುವ ನೀರಿಗಾಗಿ. ಮೊದಲು ಕುಡಿಯುವ ನೀರಿಗೆ ಅವಕಾಶ ಕೊಡಿ. ನೀರಿನ ವಿಷಯದಲ್ಲಿ ಜಬರದಸ್ತ್ ಮಾಡಬೇಡಿ. ಇದು ಸೂಕ್ಷ್ಮ ವಿಚಾರವಾಗಿದೆ. ಇಂಗಳಗೇರಿಯವರು ಹೊಂದಾಣಿಕೆ ಮನೋಭಾವ ಹೊಂದಿರಬೇಕು. ನೀರಿಗಾಗಿ ಹೊಡೆದಾಡಬಾರದು. ಸುತ್ತಲಿನ
ಗ್ರಾಮಸ್ಥರ ಆರೋಪಕ್ಕೆ ಆಸ್ಪದ ಕೊಡಬಾರದು. ಇಂಗಳಗೇರಿ ಕೆರೆ ತುಂಬಿದ ನಂತರ ಪಡೇಕನೂರ ಕೆರೆಗೆ ನೀರು ಬಿಡಿ. ಪೊಲೀಸರ ಮಧ್ಯಪ್ರವೇಶಕ್ಕೆ ಆಸ್ಪದ ಕೊಡಬೇಡಿ ಎಂದು ಬುದ್ಧಿವಾದ ಹೇಳಿದರು.

ನನ್ನ ತಂದೆಗೆ 7 ಮಕ್ಕಳು, 5 ಎಕರೆ ಜಮೀನು. ಸಣ್ಣವನಿದ್ದಾಗ ಮಟ್ಟಿ ಹೊಡೆಯುತ್ತಿದ್ದೆ. ಬೆಳಗ್ಗೆ 6ಕ್ಕೇ ಎದ್ದು, ಕಾಯಿಪಲ್ಯೆ ಕಿತ್ತಿ, ಶಾಲೆಗೆ ಹೋಗಿಬಂದು ಮತ್ತೇ ತೋಟಕ್ಕೆ ಹೋಗುತ್ತಿದ್ದೆ. ಜೋಳ, ಗೋಧಿ ಕೊಯ್ಯೋದು, ಸೂಡು ತಿರುವೋದು, ರಾಶಿ ಮಾಡೋದು, ಕೂರಿಗಿ, ನೇಗಿಲು, ಮಡಿಕೆ ಹೊಡೆಯೋದು, ಕುಂಟಿ ಹೂಡೋದು, ಹೊಲ ಹರಗೋದೂ ಎಲ್ಲ ಮಾಡಿದ್ದೇನೆ. ರೈತನ ಕಷ್ಟ ಗೊತ್ತಿರುವುದರಿಂದಲೇ ಆತನಿಗೆ ಪ್ರತಿ ವರ್ಷ 25 ಲಕ್ಷ ಆದಾಯ, ಆತನ ಮನೆಯ ಮುಂದೊಂದು ಕಾರು ನಿಲ್ಲಿಸುವಂಥ ಯೋಜನೆ ತರುವುದು ನನ್ನ ಗುರಿಯಾಗಿದೆ.
ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next