ಪಣಜಿ: ಗೋವಾ ವಾಸ್ಕೊ ದಾಬೋಲಿಂ ವಿಮಾನ ನಿಲ್ದಾಣ ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗೋವಾ ವಿಧಾನಸಭೆಯ ಮಳೆಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಅಧಿವೇಶನ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಸಂಕಲ್ಪ ಅಮೋಣಕರ್ ರವರು, ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ದಾಬೋಲಿಂ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಉತ್ತರಿಸಿದ ಮುಖ್ಯಮಂತ್ರಿ ಸಾವಂತ್, ಗೋವಾದಲ್ಲಿ ಮೋಪಾ ನಿಲ್ದಾಣ ಆರಂಭಗೊಂಡ ನಂತರವೂ ದಾಬೋಲಿಂ ವಿಮಾನ ನಿಲ್ದಾಣ ಆರಂಭದಲ್ಲಿರಲಿದೆ. ಮೋಪಾ ನಿಲ್ದಾಣದಲ್ಲಿ ಪ್ರತಿದಿನ 150 ವಿಮಾನಗಳು ಬಂದಿಳಿಯುವ ಸಾಮರ್ಥ್ಯವಿದೆ. ಮೋಪಾ ವಿಮಾನ ನಿಲ್ದಾಣ ಆರಂಭಗೊಂಡ ನತರವೂ ದಾಬೋಲಿಂ ವಿಮಾನ ನಿಲ್ದಾಣ ಬಂದ್ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು.
ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ
ಕಲಾಪದ ನಂತರ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಾವಂತ್, ನನ್ನನ್ನು ಭೇಟಿ ಮಾಡಲು ಎಲ್ಲ ಶಾಸಕರು ಬರುತ್ತಿರುತ್ತಾರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಮ್ಮ ಸರ್ಕಾರ 25 ಶಾಸಕರ ಪೂರ್ಣ ಬಹುಮತದ ಸರ್ಕಾರ. ಇದರಿಂದಾಗಿ ಮತ್ತೆ ನಮಗೆ ಯಾವುದೇ ಶಾಸಕರ ಬೆಂಬಲ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ರವರನ್ನು ಕಾಂಗ್ರೆಸ್ ಪಕ್ಷ ಅನರ್ಹಗೊಳಿಸುತ್ತಿದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಈ ಯಾವುದೇ ವಿಷಯದ ಬಗ್ಗೆ ಮಾಹಿತಿ ಇಲ್ಲ ಎಂದರು.