Advertisement

ವೈದ್ಯ ಕೋರ್ಸ್‌ ಶುಲ್ಕ ಹೆಚ್ಚಳವಿಲ್ಲ: ವೈದ್ಯಕೀಯ ಶಿಕ್ಷಣ ಇಲಾಖೆ ಸ್ಪಷ್ಟನೆ 

08:34 PM Jan 31, 2022 | Team Udayavani |

ಬೆಂಗಳೂರು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ 2022-23ನೇ ಸಾಲಿನ ಪ್ರವೇಶಕ್ಕೆ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Advertisement

ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರು ಹಲವು ಬಾರಿ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದಿದ್ದರು. ಆದರೂ ಕೊರೊನಾದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಕೊನೆಯ ಕ್ಷಣದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡಕ್ಕೆ ಮಣಿದು ಶುಲ್ಕ ಹೆಚ್ಚಳ ಮಾಡಬಹುದು ಎಂಬ ಗೊಂದಲವಿತ್ತು. ಈ ಗೊಂದಲಕ್ಕೆ ತೆರೆ ಎಳೆದಿದ್ದು, ಶುಲ್ಕದ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ 1,28,746 ರೂ. ಮತ್ತು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ 83,358 ರೂ., ಸರಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ 59,800 ರೂ. ನಿಗದಿ ಮಾಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಕೇಸ್: ಇಂದು 56 ಸಾವು

ಶೇ. 30ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ
ಕಳೆದ ವರ್ಷ ಕೂಡ ಶುಲ್ಕ ಹೆಚ್ಚಳ ಮಾಡಿಲ್ಲ. ಆದ್ದರಿಂದ ಶೇ. 30ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ವೈದ್ಯಕೀಯ ಕಾಲೇಜುಗಳು ಬೇಡಿಕೆ ಮಂಡಿಸಿದ್ದವು. ಕೊರೊನಾದಿಂದ ಎಲ್ಲ ವರ್ಗಗಳಿಗೂ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಹೀಗಾಗಿ ಹಿಂದಿನ ವರ್ಷದ ಶುಲ್ಕವೇ ಮುಂದುವರಿಸುವಂತೆ ಸರಕಾರ ಮನವೊಲಿಸಿದೆ ಎಂದು ತಿಳಿದು ಬಂದಿದೆ.

Advertisement

ಖಾಸಗಿ ಕಾಲೇಜುಗಳಿಗೆ ನಿಗದಿ ಮಾಡಿರುವ ಶುಲ್ಕವೇ ಡೀಮ್ಡ್ ವಿ.ವಿ.ಗಳಿಗೂ ಅನ್ವಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎ. ಶ್ರೀನಿಧಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next