ಬೆಂಗಳೂರು: ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ, ಹೋಂಗಾರ್ಡ್ಸ್, ಅಗ್ನಿಶಾಮಕ ಹಾಗೂ ಕಾರಾಗೃಹ ಸಿಬಂದಿ, ಪೌರಕಾರ್ಮಿಕರು ಮುಂತಾದವರಿಗೆ ಘೋಷಿಸಲಾಗಿರುವ 30 ಲ.ರೂ. ಪರಿಹಾರವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿದೆ.
ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಕುರಿತಾಗಿ ಸಲ್ಲಿಸ ಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ|ಎ.ಎಸ್. ಓಕ್ ಹಾಗೂ ನ್ಯಾ| ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಈ ಮಾಹಿತಿ ನೀಡಿದೆ.
ವಿಚಾರಣೆ ವೇಳೆ, ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಎನ್. ರವಿಚಂದ್ರ ಅವರ ಆ.17ರ ಲಿಖೀತ ಹೇಳಿಕೆಯನ್ನು ಸರಕಾರದ ಪರ ನ್ಯಾಯವಾದಿ ವಿಕ್ರಂ ಹುಯಿಲಗೋಳ ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು.
ಕೋವಿಡ್-19 ಸೋಂಕಿತರನ್ನು ನೇರವಾಗಿ ನಿರ್ವಹಿಸುವ ಮುಂಚೂಣಿ ಆರೋಗ್ಯ ಕಾರ್ಯ ಕರ್ತರಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲ.ರೂ. ವಿಮೆ ಘೋಷಿಲಾಗಿದೆ. ಇದು ರಾಜ್ಯದ ಮುಂಚೂಣಿ ಆರೋಗ್ಯ ಕಾರ್ಯ ಕರ್ತರಿಗೂ ಅನ್ವಯವಾಗುತ್ತದೆ. ಆದರೆ, ಕೋವಿಡ್-19 ರೋಗಿಗಳನ್ನು ನೇರವಾಗಿ ನಿರ್ವಹಿಸದ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸಿಬಂದಿಗೆ 30 ಲ.ರೂ. ಪರಿಹಾರ ನಿಗದಿಪಡಿಸಿ 2020ರ ಮೇ 2ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸದ್ಯ ಸರಕಾರದ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ 30 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಲಿಖೀತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ದಾಖಲಿಸಿಕೊಂಡ
ನ್ಯಾಯ ಪೀಠ, ಕೇಂದ್ರ ಸರಕಾರದ 50 ಲ. ರೂ. ವಿಮೆ ವ್ಯಾಪ್ತಿಗೆ ಒಳಪಡುವವರು ಮತ್ತು ರಾಜ್ಯ ಸರಕಾರದ 30 ಲ.ರೂ. ಪರಿಹಾರದ ವ್ಯಾಪ್ತಿಯಲ್ಲಿ ಬರುವವರ ಕೆಲಸದಲ್ಲಿ ವ್ಯತ್ಯಾಸವಿಲ್ಲ. ಆ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ 50 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಪರಿಹಾರ ಹೆಚ್ಚಳ ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆ. ಆದ್ದರಿಂದ ಈ ನಿಲುವು ತಾಳಿರುವುದಕ್ಕೆ ಸಕಾರಣ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನುಮುಂದೂಡಿತು.