Advertisement

ಲಾಭದಲ್ಲಿರುವ ಸಹಕಾರಿ ಬ್ಯಾಂಕ್‌ಗಳಿಗೆ ಕೇಂದ್ರ ಗುದ್ದು

06:00 AM Dec 30, 2017 | Team Udayavani |

ನವದೆಹಲಿ: ಸಹಕಾರಿ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ವಿನಾಯ್ತಿ ನೀಡಲು ಸಾಧ್ಯವಾಗದು ಎಂದಿದೆ ಕೇಂದ್ರ ಸರ್ಕಾರ.
“”ಇತರ ವಾಣಿಜ್ಯ ಬ್ಯಾಂಕ್‌ಗಳಂತೆಯೇ ಅವುಗಳು ಹಣಕಾಸು ನಿರ್ವಹಣೆ ಮಾಡುವುದರಿಂದ ಲಾಭದಲ್ಲಿರುವ ಬ್ಯಾಂಕ್‌ಗಳಿಗೆ ತೆರಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನೂ ಇತರ ಬ್ಯಾಂಕ್‌ಗಳಂತೆಯೇ ಸಮಾನವಾಗಿ ಕಾಣಲಾಗುತ್ತದೆ” ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ಲೋಕಸಭೆಗೆ ತಿಳಿಸಿದರು. 

Advertisement

ಸಹಕಾರ ಕ್ಷೇತ್ರದಲ್ಲಿ ಇಲ್ಲದೇ ಇರುವವರಿಗೆ (ಸದಸ್ಯರಲ್ಲದವರಿಗೆ) ಕೂಡ ಕೆಲವೊಂದು ಸಂದರ್ಭದಲ್ಲಿ ಬ್ಯಾಂಕ್‌ಗಳ ಸೇವೆ ಲಭ್ಯವಾಗುತ್ತದೆ ಎಂದೂ ಹೇಳಿದ್ದಾರೆ.

ಹೆಚ್ಚಿನ ಎಲ್ಲಾ ಬ್ಯಾಂಕ್‌ಗಳು ಕೂಡ ಬಿಲ್‌ ಡಿಸ್ಕೌಂಟ್‌ ಮತ್ತು ಕಲೆಕ್ಷನ್‌, ನಿಗದಿತ ಠೇವಣಿ, ಲಾಕರ್‌ಗಳನ್ನು ಒದಗಿಸುತ್ತಿವೆ ಎಂದು ಹೇಳಿರುವ ಅವರು,  “”ಆದಾಯ ತೆರಿಗೆ ಎನ್ನುವುದು ಲಾಭದ ಮೇಲೆ ತೆರಿಗೆ ವಿಧಿಸುವಂಥ ಪ್ರಕ್ರಿಯೆ. ಹೀಗಾಗಿ ಲಾಭದಲ್ಲಿರುವ ಸಹಕಾರ ಬ್ಯಾಂಕ್‌ಗಳಿಗೆ ಅದರಿಂದ ವಿನಾಯಿತಿ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.

ಸಹಕಾರ ತೆರಿಗೆ ವಿನಾಯಿತಿ ಕಾನೂನು ಜಿಜ್ಞಾಸೆ!
ಲಾಭದಲ್ಲಿರುವ ಸಹಕಾರ ಸಂಘಗಳಿಗೆ ಆದಾಯ ತೆರಿಗೆ ವಿನಾಯಿತಿ ಸಿಗುವುದಿಲ್ಲವೆನ್ನುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ ಬೆನ್ನಲ್ಲೇ, ಸಹಕಾರ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ವಿನಾಯಿತಿ ಸಂಬಂಧದ ತೆರಿಗೆ ಇಲಾಖೆ ಸೆಕ್ಷನ್‌ ಹಾಗೂ ಆಯಾರಾಜ್ಯಗಳ ಸಹಕಾರಿ ಸಂಸ್ಥೆಗಳ ಕಾಯಿದೆಗಳ ನಿಯಮಗಳೇ ಕಾನೂನು ಜಿಜ್ಞಾಸೆಗೆ ಒಳಪಡುವ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಹಕಾರ ಸಂಸ್ಥೆಗಳು ಷೇರುದಾರರಲ್ಲದವರ ಜೊತೆಯೂ ಹಣಕಾಸು ವಹಿವಾಟು ನಡೆಸಿ ಲಾಭಗಳಿಸಿರುವುದರಿಂದ  ಕೇಂದ್ರಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಆದರೆ,  ರಾಜ್ಯಸಹಕಾರಿ ಕಾಯಿದೆಯೂ ಸೇರಿದಂತೆ ಬಹುತೇಕ ರಾಜ್ಯಗಳ ಸಹಕಾರ ಸಂಸ್ಥೆಗಳ ಕಾಯಿದೆಗಳಲ್ಲಿ, ಷೇರುದಾರರಲ್ಲದೆ ಇತರರ ಜೊತೆ ವಹಿವಾಟು ನಡೆಸಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಸಹಕಾರ ಸಂಸ್ಥೆಗಳು ನಾಮಕೇವಾಸ್ತೆ  ಸದಸ್ಯರನ್ನಾಗಿ ಸದಸ್ಯತ್ವ ನೀಡಿ ಅವರಿಂದ ಹಣ ಠೇವಣಿ ಇಟ್ಟುಕೊಂಡು ವ್ಯವಹಾರ ನಡೆಸಿವೆ. ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಹಕಾರ ಕ್ಷೇತ್ರಕ್ಕೆ  ಹೆಚ್ಚು ಪೆಟ್ಟು ಬೀಳುವ  ಸಾಧ್ಯತೆಯಿದೆ  ಎಂದು ಹೈಕೋರ್ಟ್‌ ವಕೀಲ ಪಿ.ಪಿ ಹೆಗಡೆ ತಿಳಿಸಿದರು.

Advertisement

ಇನ್ನು ಆದಾಯ ತೆರಿಗೆ ಇಲಾಖೆ ಕಾಯಿದೆ ಸೆಕ್ಷನ್‌ 80 (ಪಿ) ಪ್ರಕಾರ ಸಹಕಾರ ಸಂಸ್ಥೆಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಸಹಕಾರ ಸಂಸ್ಥೆಗಳ ಕಾಯಿದೆಯಲ್ಲೂ ಷೇರುದಾರರಲ್ಲದವರ ಜೊತೆ ವಹಿವಾಟು ನಡೆಸಲು ನಿರ್ಬಂಧವಿಲ್ಲ. ಇದೀಗ ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂಬುದರ ಬಗ್ಗೆ ಕೇಂದ್ರಸರ್ಕಾರ ಆದಾಯ ತೆರಿಗೆ ಇಲಾಖೆ ಕಾಯಿದೆ ತಿದ್ದುಪಡಿ ಮಾಡಬೇಕು, ಇಲ್ಲವೇ ರಾಜ್ಯಗಳು ಕಾಯಿದೆಗಳನ್ನು ತಿದ್ದುಪಡಿಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್‌ ಏನು ಹೇಳಿದೆ?
ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಕೇರಳದ ಸಿಟಿಜನ್ಸ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಅರ್ಜಿದಾರ ಸಂಸ್ಥೆಯ ಷೇರುದಾರರಲ್ಲದೆ , ಇತರರೊಂದಿಗೆ ಹಣಕಾಸು ವಹಿವಾಟು ನಡೆಸಿದೆ. ಹೆಚ್ಚು ಲಾಭವೂ ಗಳಿಸಿದೆ. ಆದಾಯ ತೆರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ತೀರ್ಪು ಆಗಸ್ಟ್‌ 16ರಂದು ನೀಡಿತ್ತು. ಸುಪ್ರೀಂಕೋರ್ಟ್‌  ತೀರ್ಪಿನ ಬೆನ್ನಲ್ಲೇ ಹೆಚ್ಚು ಲಾಭ ಗಳಿಸಿದ ಸಹಕಾರ ಸಂಸ್ಥೆಗಳಿಗೆ ತೆರಿಗೆ  ವಿನಾಯಿತಿ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next