Advertisement

ನಗರದಲ್ಲಿ ಪ್ರತೀ ಬುಧವಾರ ‘ನೋ ಹಾರ್ನ್ ಡೇ’!

04:17 AM Jan 24, 2019 | |

ಮಹಾನಗರ: ಪ್ರಧಾನಿಯವರ ಸ್ವಚ್ಛ ಭಾರತ ಪರಿಕಲ್ಪನೆಯ ಮಾದರಿಯಲ್ಲೇ ನೋ ಹಾರ್ನ್ ವೆಡ್ನೆಸ್‌ಡೇ ಅಭಿಯಾನವೊಂದು ಮಂಗಳೂರಿನಲ್ಲಿ ಸದ್ದಿಲ್ಲದೆ ಆರಂಭವಾಗಿದೆ. ಆ ಮೂಲಕ ಶಬ್ದರಹಿತ ಕುಡ್ಲವನ್ನಾಗಿ ಪರಿವರ್ತಿಸುವ ಉದ್ದೇಶ ಈ ಅಭಿಯಾನದ್ದು.

Advertisement

ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ಮುಂದಾಳತ್ವದಲ್ಲಿ ಮೂರು ವಾರಗಳ ಹಿಂದೆಯಷ್ಟೇ ನೋ ಹಾರ್ನ್ ವೆಡ್ನೆಸ್‌ಡೇ ಅಭಿಯಾನ ಆರಂಭವಾಗಿದೆ. ಇದಕ್ಕಾಗಿ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಚಾರವೂ ನಡೆಯುತ್ತಿದೆ. ವಿಶೇಷವೆಂದರೆ ಈ ಅಭಿಯಾನವನ್ನು ಸಿಟಿ ಬಸ್‌ ಮಾಲಕರ ಸಂಘವೂ ಸ್ವಾಗತಿಸಿದ್ದು, ಅಭಿಯಾನದಲ್ಲಿ ಕೈಜೋಡಿಸುವುದಾಗಿ ಹೇಳಿದೆ.

ನಗರದಲ್ಲಿ ಶಬ್ದ ಮಾಲಿನ್ಯಕ್ಕೆ ಪ್ರಮುಖ ವಾಗಿ ಕಾರಣವಾಗುತ್ತಿರುವುದು ವಾಹನ ಗಳ ಕರ್ಕಶ ಹಾರ್ನ್. ಸಿಗ್ನಲ್‌ ಬಿದ್ದರೂ ಮುಂದಿನ ವಾಹನ ಸ್ವಲ್ಪ ನಿಧಾನಕ್ಕೆ ಚಲಿಸಿದರೂ ಹಿಂದಿನ ವಾಹನದ ಚಾಲಕರು ನಿರಂತರ ಹಾರ್ನ್ ಮಾಡುತ್ತಲೇ ಇರುತ್ತಾರೆ. ಇದರಿಂದ ಪಾದಚಾರಿಗಳು, ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಕಿರಿಕಿರಿ ಎನಿಸುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನವಾಗಿ ವಾರದ ಪ್ರತಿ ಬುಧವಾರವನ್ನು ನೋ ಹಾರ್ನ್ ಡೇಯನ್ನಾಗಿ ಆಚರಿಸಲು ಉದ್ದೇಶಿಸಲಾಗಿದೆ.

ಈಗಾಗಲೇ ಬುಧವಾರವನ್ನು ನೋ ಹಾರ್ನ್ ದಿನವನ್ನಾಗಿ ಆಚರಿಸಲು ಕೆಲವು ರಿಕ್ಷಾ, ಬಸ್‌ ಮಾಲಕರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ವಾರದೊಳಗೆ ವಿವಿಧ ಬಸ್‌, ರಿಕ್ಷಾ ಸಂಘಟನೆಗಳ ಪ್ರಮು ಖರ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ಶೇ. 100ರಷ್ಟು ಫಲಪ್ರದವಾಗದಿದ್ದರೂ ಒಂದಷ್ಟು ಮಂದಿ ಇದರಿಂದ ಪ್ರೇರಿತಗೊಂಡು ಸ್ವಯಂ ಬದಲಾವಣೆಗೊಂಡಲ್ಲಿ ಈ ಪ್ರಯತ್ನ ಸಾರ್ಥಕವಾಗಲಿದೆ ಎನ್ನುತ್ತಾರೆ ಶಾಸಕರು.

ಸಿಟಿ ಬಸ್‌ ಮಾಲಕರ ಬೆಂಬಲ
ನೋ ಹಾರ್ನ್ ಡೇ ಉತ್ತಮ ಅಭಿಯಾನ. ಬಸ್‌ ಮಾಲಕರ ಸಂಘದ ವತಿಯಿಂದ ಇದನ್ನು ಬೆಂಬಲಿ ಸಲಾಗುವುದು. ಸಂಘದಲ್ಲಿ ಈ ವಿಚಾರ ಪ್ರಸ್ತಾವ ಮಾಡುವುದರೊಂದಿಗೆ, ಪೂರಕ ವಾಗಿ ಸ್ಪಂದಿಸುವಂತೆ ಚಾಲಕರಿಗೂ ತಿಳಿಸಲಾಗುವುದು ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

Advertisement

ಸಾಮಾಜಿಕ ತಾಣದಲ್ಲಿ ಪ್ರಚಾರ
ಈಗಾಗಲೇ ವಾಟ್ಸಾಪ್‌, ಫೇಸ್ಬುಕ್‌ನಲ್ಲಿ ಈ ಸಂಬಂಧ ಮಾಹಿತಿಗಳನ್ನು ಶೇರ್‌ ಮಾಡಲಾಗಿದೆ. ನಗರದ ಹಲವರು ಈ ಪ್ರಯತ್ನವನ್ನು ಬೆಂಬಲಿಸಿದ್ದಾರೆ. ಆಸ್ಪತ್ರೆ, ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರಗಳ ಮುಂಭಾಗದಲ್ಲಿ ಅನಗತ್ಯ ಹಾರ್ನ್ ಮಾಡುವುದನ್ನೂ ಕೆಲವರು ವಿರೋಧಿಸಿದ್ದಾರೆ.

ಬೆಂಗಳೂರಿನಲ್ಲಿ ‘ನೋ ಹಾರ್ನ್ ಡೇ’ ಪ್ರಯತ್ನ
ಮಂಗಳೂರಿನಲ್ಲಿ ಶಬ್ದ ಮಾಲಿನ್ಯಕ್ಕೆ ಪ್ರಮುಖ ಕಾರಣವೇ ವಾಹನಗಳ ಕರ್ಕಶ ಹಾರ್ನ್. ಆದರೆ ಇದರ ಪ್ರಮಾಣ ಎಷ್ಟೆಂದು ಹೇಳಲಾಗುವುದಿಲ್ಲ. ಆರ್‌ಟಿಒ ಮತ್ತು ಪೊಲೀಸರು ಕರ್ಕಶ ಹಾರ್ನ್ ನಿಯಂತ್ರಣಕ್ಕಾಗಿ ಕ್ರಮ ವಹಿಸುತ್ತಿದ್ದಾರೆ. ಆದರೆ ಜನರೇ ಕರ್ಕಶ ಹಾರ್ನ್ ಹಾಕದೇ ಇರುವ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ಜಯಪ್ರಕಾಶ್‌ ನಾಯಕ್‌.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡ ಳಿಯು 2012ರಲ್ಲಿ ಬೆಂಗಳೂರಿನಲ್ಲಿ ನೋ ಹಾರ್ನ್ ಡೇಯನ್ನು ಆರಂಭಿಸಿತ್ತು. ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಮಂಡಳಿಯು ಇದನ್ನು ಪ್ರಾಯೋಗಿ ಕವಾಗಿ ಜಾರಿಗೊಳಿಸಿತ್ತು. ಆದರೆ ವಾಹನ ಚಾಲಕರು ಮಾತ್ರ ಯಥಾ ಪ್ರಕಾರ ಹಾರ್ನ್ ಮಾಡುವುದು ಮುಂದುವರಿದಿತ್ತು. ಮಂಗಳೂರಿನಲ್ಲಿ ಹೀಗಾಗದಿರಲು ವಾಹನ ಚಾಲಕರ ಕೊಡುಗೆ ಅಗತ್ಯವಾಗಿದೆ.

ಸ್ವಚ್ಛ ಭಾರತ ಮಾದರಿ
ಸ್ವಚ್ಛ ಭಾರತ ಅಭಿಯಾನ ಆರಂಭವಾಗುವುದಕ್ಕಿಂತ ಮುಂಚೆ ಜನ ಅಲ್ಲಲ್ಲಿ ಕಸ ಬಿಸಾಡುತ್ತಿದ್ದರು. ಆದರೆ ಈಗ ಪುಟಾಣಿ ಮಕ್ಕಳು ಕೂಡ ಕಸವನ್ನು ಪಾಕೆಟ್‌ನಲ್ಲೋ, ಕವರ್‌ನಲ್ಲೋ ಕಟ್ಟಿ ಡಸ್ಟ್‌ಬಿನ್‌ಗೆ ಬಿಸಾಡುವುದನ್ನು ನೋಡುತ್ತೇವೆ. ಆ ಅಭಿಯಾನ ನಿಧಾನವಾಗಿ ಹೇಗೆ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮನಃಪರಿವರ್ತನೆಗೆ ಕಾರಣವಾಯಿತೋ, ಅತಿಯಾಗುತ್ತಿರುವ ಶಬ್ದ ಮಾಲಿನ್ಯದಿಂದ ಜನರಿಗಾಗುವ ತೊಂದರೆ ತಪ್ಪಿಸಲು ನೋ ಹಾರ್ನ್ ಡೇ ಆಚರಿಸಲೂ ಜನ ಮನಃ ಪರಿವರ್ತನೆ ಮಾಡಿಕೊಳ್ಳುವರೆಂಬ ಆಶಯದೊಂದಿಗೆ ಶಾಸಕ ವೇದವ್ಯಾಸ ಕಾಮತ್‌ ಅವರು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಪ್ರಯತ್ನಕ್ಕೆ ಮಂಗಳೂರು ನಗರ ಪೊಲೀಸ್‌ ಆಯುಕ್ತರೂ ಸಹಕಾರ ನೀಡಿದ್ದಾರೆ.

ಇದೊಂದು ಸಣ್ಣ ಪ್ರಯತ್ನ
ಸ್ವಚ್ಛ ಭಾರತ ಅಭಿಯಾನದಲ್ಲಿ ಜನ ಹೇಗೆ ತೊಡಗಿಸಿಕೊಂಡರೋ, ಅದೇ ರೀತಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಹಾರ್ನ್ ಮುಕ್ತ ಮಂಗಳೂರು ಅಭಿಯಾನಕ್ಕೂ ಕೈ ಜೋಡಿಸಬೇಕು. ಇದೊಂದು ಸಣ್ಣ ಪ್ರಯತ್ನ. ಪ್ರತೀ ಬುಧವಾರ ಹಾರ್ನ್ ಹಾಕದೆ ವಾಹನ ಚಲಾಯಿಸಿದರೆ, ಮುಂದೊಂದು ದಿನ ಇದೇ ನಾವು ಮಾಲಿನ್ಯ ನಿಯಂತ್ರಣಕ್ಕೆ ನೀಡಬಹುದಾದ ದೊಡ್ಡ ಕೊಡುಗೆ.
– ಡಿ. ವೇದವ್ಯಾಸ ಕಾಮತ್‌, ಶಾಸಕರು

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next