Advertisement

‘ನೋ ಹಾರ್ನ್ ಡೇ’ಅಭಿಯಾನಕ್ಕೆ ವರ್ಷ ; ಸಾರ್ವಜನಿಕರಿಂದ ಬೆಂಬಲ

10:02 AM Dec 11, 2019 | Hari Prasad |

ಮಹಾನಗರ: ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ಮುಂದಾಳತ್ವದಲ್ಲಿ ಆರಂಭವಾದ ಬುಧವಾರ ‘ನೋ ಹಾರ್ನ್ ಡೇ’ ಅಭಿಯಾನಕ್ಕೆ ವರ್ಷವಾಗಿದ್ದು, ಶಾಸಕರ ಜಾಗೃತಿ ಹಾಗೂ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ತಪಾಸಣೆಯಿಂದಾಗಿ ನಗರದಲ್ಲಿಯೂ ಶಬ್ದ ಮಾಲಿನ್ಯಕ್ಕೆ ಈಗ ಭಾಗಶಃ ಕಡಿವಾಣ ಬಿದ್ದಿದೆ.

Advertisement

‘ನೋ ಹಾರ್ನ್ ಡೇ’ ಅಭಿಯಾನದ ಆರಂಭಿಕ ಹಂತದಲ್ಲೇ ಕೈಜೋಡಿಸಿದ್ದ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು, ತಮ್ಮ ಮಾಲಕತ್ವದ 27 ನಂಬ್ರರಿನ ಮಂಗಳಾದೇವಿ – ಸ್ಟೇಟ್‌ ಬ್ಯಾಂಕ್‌ ಸಂಚರಿಸುವ ಬಸ್‌ ನಲ್ಲಿ ಪ್ರತಿ ಬುಧವಾರ ಹಾರ್ನ್ ಸಂಪರ್ಕ ತೆಗೆದು ಬಸ್‌ ಓಡಿಸುವಂತೆ ಚಾಲಕರಿಗೆ ತಿಳಿಸಿದ್ದರು. ಈ ಕ್ರಮವು ಕಳೆದೊಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ.

ಇನ್ನುಳಿದಂತೆ ಕೆಲವು ಆಟೋ, ಖಾಸಗಿ ವಾಹನಗಳಲ್ಲಿ ‘ನೋ ಹಾರ್ನ್ ಡೇ’ ಸ್ಟಿಕ್ಕರ್‌ ಅಳವಡಿಕೆಯಾಗಿದ್ದು, ಚಾಲಕರು ಬುಧವಾರ ಹಾರ್ನ್ ಹಾಕದೇ ವಾಹನ ಚಲಾಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಕೆಲ ವಿದ್ಯಾರ್ಥಿಗಳೂ ತಮ್ಮ ಬೈಕ್‌ಗಳಲ್ಲಿ ಸ್ಟಿಕ್ಕರ್‌ ಅಂಟಿಸಿ, ನಿರಂತರ ಪಾಲನೆ ಮಾಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ ಎನ್ನುತ್ತಾರೆ ಶಾಸಕರು.

‘ನಗರದಲ್ಲಿ ವಾಹನಗಳ ಹಾರ್ನ್ ಶಬ್ದದಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕಳೆದ ವರ್ಷದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಕುರಿತು ಪ್ರಚಾರ ನೀಡುತ್ತಾ ಸಾಧ್ಯವಾಗುವ ಮಟ್ಟಿಗೆ ಶಬ್ದ ಮಾಲಿನ್ಯ ತಡೆಗಟ್ಟಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಭಿನ್ನವಿಸಿದ್ದೇವೆ. ಸಾರ್ವಜನಿಕ ವಲಯದಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆಯಾದರೂ ಮತ್ತಷ್ಟು ಪ್ರಚಾರದ ಅವಶ್ಯಕತೆಯಿದೆ’ ಎಂದು ಕಾಮತ್‌ ಹೇಳಿದ್ದಾರೆ.

‘ಈ ಹಿಂದೆ ಕಲೆಕ್ಟರ್‌ ಗೇಟ್‌ನಿಂದ ಹಂಪನಕಟ್ಟೆಯವರೆಗೆ ನೋ ಹಾರ್ನ್ ಝೋನ್‌ ಕುರಿತು ಸಂಚಾರಿ ಪೋಲಿಸ್‌ ಇಲಾಖೆಯಿಂದ ಆದೇಶವಿದ್ದರೂ ಕೂಡ ಸಾರ್ವಜನಿಕರ ಬೆಂಬಲದ ಹೊರತಾಗಿ ಅದು ಅನುಷ್ಟಾನಕ್ಕೆ ಸಾಧ್ಯವಾಗಿಲ್ಲ. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಇಂತಹ ಪ್ರಕೃತಿಯ ಮೇಲಿನ ಕೆಡುಕುಗಳು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಬೇಕು ಎನ್ನುವ ಆಶಯ ಜನ ಸಮೂಹದ ಮನಸ್ಸಿನಲ್ಲಿ ಚಿಗುರೊಡೆಯಬೇಕು. ಆಗ ಮಾತ್ರ ಸ್ವಚ್ಛ – ಸುಂದರ- ಸ್ವಸ್ಥ ನಗರ ನಿರ್ಮಾಣ ಸಾಧ್ಯ.

Advertisement

ನೋ ಹಾರ್ನ್ ಡೇ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ಬೇಕಿದೆ. ಸಾರ್ವಜನಿಕರು ಈ ಅಭಿಯಾನವನ್ನು ನಗರದ ಹಿತದೃಷ್ಠಿಯಲ್ಲಿ ತಮ್ಮ ತಮ್ಮ ದಿನಚರಿಯ ಭಾಗವಾಗಿ ಬೆಳೆಸಿಕೊಂಡರೆ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು’ ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next