Advertisement
ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಚೌಡಹಳ್ಳಿ-ಹುಂಡೀಪುರ ಗ್ರಾಮಗಳ ನಡುವಿನ ಬೆಟ್ಟ ಗುಡ್ಡಗಳು ಮತ್ತು ಜಮೀನಿನಲ್ಲಿ ಆಗಾಗ ಕಾಣಿಸಿಕೊಂಡು ಭಯಭೀತಿಗೊಳಿಸುತ್ತಿರುವ ಹುಲಿಯ ಹುಡುಕಾಟಕ್ಕೆ ಅರಣ್ಯ ಇಲಾಖೆ ಆರು ಸಾಕಾನೆಗಳು ಮತ್ತು ಡ್ರೋಣ್ ಕ್ಯಾಮೆರಾ ಮತ್ತು ಅರವತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ಹುಲಿ ಸೆರೆ ಹಿಡಿಯಲು ಶ್ರಮಿಸುತ್ತಿದೆ.
Related Articles
Advertisement
ಜನರಲ್ಲಿ ನಿಲ್ಲದ ಆತಂಕ: ಈಗಾಗಲೇ ಕೇವಲ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿ ರೈತರಿಬ್ಬರನ್ನು ಬಲಿ ಪಡೆದಿದ್ದು, ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಕಾಯಲು ಜಮೀನಿಗೆ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ತಾತ್ಕಾಲಿಕ ಕ್ಯಾಂಪ್ ಹಾಕಿಕೊಂಡು 24 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದರೂ ಹಜುಲಿ ಗುರುತು ಸಹ ಪತ್ತೆಯಾಗಿಲ್ಲ. ಸುತ್ತಮುತ್ತಲ ಗ್ರಾಮಸ್ಥರಲ್ಲಿ ಮೂಡಿರುವ ಆತಂಕ ಇನ್ನೂ ದೂರವಾಗಿಲ್ಲ.
ಹುಲಿ ಸೆರೆ ಹಿಡಿಯುವ ವಿಶ್ವಾಸ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೂರು ತಂಡಗಳಲ್ಲಿ ಆರು ಸಾಕಾನೆಗಳನ್ನು ಬಳಸಿಕೊಂಡು ಅಕ್ಕ-ಪಕ್ಕ ಜಮೀನಿನಲ್ಲಿ ಮತ್ತು ಅರಣ್ಯದಂಚಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಹುಲಿ ಓಡಾಟದ ಸ್ಥಳದಲ್ಲಿರುವ ಮರಗಳಲ್ಲಿ ಕಟ್ಟಿದ್ದು, ಯಾವುದೇ ಹುಲಿಯ ಓಡಾಟದ ಚಿತ್ರಗಳು ಸೆರೆಯಾಗಿಲ್ಲ. ಆದರೆ ಗ್ರಾಮದಲ್ಲಿ ಜೀವ ಭಯದಲ್ಲಿರುವ ಗ್ರಾಮಸ್ಥರ ಒತ್ತಾಯಕ್ಕೆ ಬೆಲೆಕೊಟ್ಟಿರುವ ಅರಣ್ಯ ಇಲಾಖೆ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈಬಿಡದೇ ಹುಲಿಯನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.