ಬೆಂಗಳೂರು: ‘ಅಪಘಾತಗಳಿಂದ ಉಂಟಾಗುವ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಸಂಚಾರ ಪೊಲೀಸರು ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದ್ದಾರೆ.
ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಉಂಟಾಗುತ್ತಿರುವ ಜೀವ ಹಾನಿ, ಗಂಭೀರ ಗಾಯಗಳಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ನಿಯಮ ಪಾಲನೆಯಾಗಲು ‘ ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿಗೆ ಪೊಲೀಸರು ಮುಂದಾಗಿದ್ದಾರೆ. ಈ ಕುರಿತ ಪ್ರಕ್ರಿಯೆಗಳನ್ನು ಸಂಚಾರ ಪೊಲೀಸ್ ವಿಭಾಗ ಸದ್ದಿಲ್ಲದೆ ಆರಂಭಿಸಿದೆ.
ಒಂದು ವೇಳೆ ನಿಯಮ ಜಾರಿಯಾದರೆ ದೆಹಲಿಯ ನೋಯ್ಡಾ ಹಾಗೂ ಉತ್ತರಪ್ರದೇಶದ ಆಲಿಘರ್ ನಗರಗಳ ಬಳಿಕ ಈ ನಿಯಮ ಜಾರಿಗೊಳಿಸಿದ ಮೂರನೇ ನಗರ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಗಲಿದೆ.
ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ನೀಡದಂತೆ ಬೆಂಗಳೂರು ನಗರದ ಪೆಟ್ರೋಲ್ ಬಂಕ್‌ಗಳ ಮಾಲೀಕರ ಬಳಿ ಸಭೆ ನಡೆಸಬೇಕಿದೆ. ಅವರ ಸಹಕಾರವೂ ಇದಕ್ಕೆ ಮುಖ್ಯವಾಗಲಿದೆ. ಈ ಕುರಿತು ಸಭೆಗಳನ್ನು ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಇದೇ ವರ್ಷ ಜನವರಿ 1ರಿಂದ ಜೂನ್ ಅಂತ್ಯಕ್ಕೆ ನಗರದಲ್ಲಿ ಉಂಟಾದ ಬೈಕ್ ಅಪಘಾತಗಳಲ್ಲಿ 105 ಮಂದಿ ಬೈಕ್ ಸವಾರರು ಮೃತಪಟ್ಟಿದ್ದಾರೆ. 667 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಕಡ್ಡಾಯ ಮೋಟಾರು ವಾಹನ ಕಾಯಿದೆಯಲ್ಲಿ ಕಡ್ಡಾಯವಾಗಿದೆ. ಆದರೂ, ಕೆಲವರು ನಿಯಮ ಉಲ್ಲಂಘಿಸಿ ದಂಡ ಪಾವತಿಸುತ್ತಾರೆ. ಹೀಗಾಗಿ ‘ ನೋ ಹೆಲ್ಮೆಟ್ ನೋ ಪೆಟ್ರೋಲ್ ‘ ನಿಯಮ ಸಹಕಾರಿಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ಹೇಳಿದರು.
ನಿಯಮ ಜಾರಿ ಬಗ್ಗೆ ‘ಉದಯವಾಣಿ ‘ ಜತೆ ಮಾತನಾಡಿದ ಸಂಚಾರ ಪೊಲೀಸ್ ಆಯುಕ್ತ ಪಿ. ಹರಿಶೇಖರನ್, ‘ ನೋ ಹೆಲ್ಮೆಟ್ – ನೋ ಪೆಟ್ರೋಲ್’ ನಿಯಮ ಸಾಮಾಜಿಕ ಬದ್ಧತೆಯ ನಿಯಮದ ಅಡಿಯಲ್ಲಿ ರೂಪಿತಗೊಳ್ಳುವಂತಹದ್ದು. ಬೈಕ್ ಅಪಘಾತಗಳಿಂದ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ನಿಯಮ ಮಹತ್ವದ್ದಾಗಿದೆ. ನಿಯಮದ ರೂಪುರೇಷೆ ಬಗ್ಗೆ ಪೆಟ್ರೋಲ್ ಬಂಕ್‌ಗಳ ಮಾಲೀಕರ ಜತೆ ಚರ್ಚೆ ನಡೆಸಬೇಕಿದೆ. ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಬಿ. ಆರ್ ರವೀಂದ್ರನಾಥ್ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿ ಬಗ್ಗೆ ಸಂಚಾರ ಪೊಲೀಸರು ಅಧಿಕೃತವಾಗಿ ಸಭೆ ಕರೆದಿಲ್ಲ. ಸಭೆ ಬಳಿಕ ಅದರ ಜಾರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಉದಯವಾಣಿಗೆ ಅಭಿಪ್ರಾಯ ತಿಳಿಸಿದರು.