ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್‌ನ ಇತರ ನಾಯಕರು ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಕರಣದಲ್ಲಿ ಬಿಎಸ್‌ವೈ ಅವರಿಗೆ ಜಾಮೀನು ಲಭಿಸಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಕಾನೂನು ರೀತ್ಯಾ ಕೆಲಸ ಮಾಡುತ್ತೇವೆ. ಕೋರ್ಟ್ ಆದೇಶಕ್ಕೆ ತಲೆಬಾಗು ತ್ತೇವೆ ಎಂದ ಸಿಎಂ, ವಿಪಕ್ಷಗಳ ಎಲ್ಲ ಆರೋಪಗಳಿಗೆ ಉತ್ತರ ಕೊಡಬೇಕೆಂದೇನಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಬಿಎಸ್‌ವೈ ವಿರುದ್ಧ ನಾವ್ಯಾಕೆ ದ್ವೇಷದ ರಾಜಕಾರಣ ಮಾಡಬೇಕು? ಅದರ ಅಗತ್ಯ ನಮಗೇನಿದೆ? ನಾನು ಇದರಲ್ಲೆಲ್ಲ ಮೂಗು ತೂರಿಸುವುದಿಲ್ಲ’ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, “ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಸರಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಅವರು ತಪ್ಪಿತಸ್ಥರು ಹೌದೋ, ಅಲ್ಲವೋ ಅನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದರು.