Advertisement

ಎಸಿಬಿ ಎಡಿಜಿಪಿ ಬಗ್ಗೆ ದ್ವೇಷವಿಲ್ಲ; ಅನುಮಾನಕ್ಕೆ ಕಾರಣಗಳಿವೆ: ಹೈಕೋರ್ಟ್‌

04:02 PM Jul 08, 2022 | Team Udayavani |

ಬೆಂಗಳೂರು: “ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) 2016ರಿಂದ ಈವರೆಗೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲಾ ಬಿ ರಿಪೋರ್ಟ್ ಗಳ ವರ್ಷವಾರು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕಣದಲ್ಲಿ ಆರೋಪಿಯಾ ಗಿರುವ ಉಪ ತಹಶೀಲ್ದಾರ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಗುರುವಾರ ಈ ನಿರ್ದೇಶನ ನೀಡಿತು. ಅರ್ಜಿ ವಿಚಾರಣೆಗೆ ಬಂದಾಗ ಎಸಿಬಿ ಪರ ವಕೀಲರು, ಬಿ ರೀಪೋರ್ಟ್‌ಗಳ ಬಗ್ಗೆ ಮಾಹಿತಿ ಸಲ್ಲಿಸಿದರು. 2016ರಿಂದ 2022ರ ಜೂ.29ರವರೆಗೆ ಒಟ್ಟು 105 ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. 891 ಸರ್ಚ್‌ ವಾರಂಟ್‌ಗಳನ್ನು ಪಡೆಯಲಾಗಿತ್ತು. ಅದರಲ್ಲಿ 28 ಸರ್ಚ್‌ ವಾರಂಟ್‌ಗಳನ್ನು ಕಾರ್ಯಾಗತಗೊಳಿಸಲಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಬಿ ರಿಪೋರ್ಟ್‌ ಹಾಗೂ ಸರ್ಚ್‌ವಾರಂಟ್‌ಗಳ ಬಗ್ಗೆ ಎಸಿಬಿ ನೀಡಿರುವ ವರದಿ ಸಮರ್ಪಕವಾಗಿಲ್ಲ. 2020ರಲ್ಲಿ ಸಲ್ಲಿಸಲಾದ ಕೆಲ ಬಿ ರಿಪೋರ್ಟ್‌ಗಳ ಬಗ್ಗೆ ಮಾಹಿತಿ ನೀಡಿಲ್ಲ. 202ರಲ್ಲೂ ಕೆಲವು ಬಿ ರಿಪೋರ್ಟ್‌ಗಳನ್ನು ಸಲ್ಲಿಸಲಾಗಿದೆ. ಆದರೆ,
ವರದಿಯಲ್ಲಿ ಅದರ ಬಗ್ಗೆ ಹೇಳಿಲ್ಲ. ಹಾಗಾಗಿ, ಎಸಿಬಿ ಸಲ್ಲಿಸಿರುವ ವರದಿ ಸರಿಯಾಗಿಲ್ಲ ಎಂದ ನ್ಯಾಯಪೀಠ ವರದಿ ಒಪ್ಪಿಕೊಳ್ಳಲು ನಿರಾಕರಿಸಿತು.

ಅಲ್ಲದೇ, 2016ರಿಂದ ಇಲ್ಲಿವರೆಗೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಬಿ ರಿಪೋರ್ಟ್‌ ಗಳ  ಬಗ್ಗೆ ಮಾಹಿತಿ ಪಡೆದುಕೊಂಡು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿತು.

ಎಡಿಜಿಪಿಗೆ ಆಸಕ್ತಿ ಇಲ್ಲ: ವಿಚಾರಣೆ ವೇಳೆ ಎಸಿಬಿ ಎಡಿಜಿಪಿ ನಡೆಯನ್ನು ಮತ್ತೆ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಎಡಿಜಿಪಿ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಅವರ ಬಗ್ಗೆ ಅನುಮಾನಗಳು ಬರಲು ಕಾರಣಗಳಿವೆ. ಎಡಿಜಿಪಿ ಕರ್ತವ್ಯ ನಿರ್ವಹಣೆಯಲ್ಲಿ ವಿಫ‌ಲರಾಗಿದ್ದಾರೆ. ಎಸಿಬಿ ಸಂಸ್ಥೆ ಹಿತ ಮತ್ತು ಘನತೆ ಕಾಪಾಡುವ ಆಸಕ್ತಿ ಅವರಿಗಿಲ್ಲ. ಎಡಿಜಿಪಿಗೆ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ ಎಂದು ಎಸಿಬಿ ಪರ ವಕೀಲರಿಗೆ ಚಾಟಿ ಬೀಸಿದ ನ್ಯಾಯಪೀಠ, ಸ್ವತಃ ನ್ಯಾಯಾಲಯವೇ ಇಷ್ಟೊಂದು ನಿದರ್ಶನಗಳು ಕೊಟ್ಟ ಮೇಲೂ ಎಸಿಬಿ ಪರ ವಕೀಲರು ಮತ್ತೇ ಎಡಿಜಿಪಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಾದೃಷ್ಟಕರ
ಎಂದು ಹೇಳಿತು.

Advertisement

ಅಕ್ರಮ ಗಣಿ ಪ್ರಕರಣದ ವರದಿಯೂ ಕೇಳಿದ ಹೈಕೋರ್ಟ್‌
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2013ರ ಏ.5ರಂದು ಆಗ ಬಳ್ಳಾರಿ ಜಿಲ್ಲಾ ಎಸ್ಪಿ ಆಗಿದ್ದ ಈಗಿನ ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಎಸ್ಪಿ ತಮ್ಮ ಅಧೀನ ಅಧಿಕಾರಿಗಳಿಂದ ಗಣಿ ಕಂಪೆನಿ ಮಾಲೀಕರಿಂದ ಮಾಮೂಲು ವಸೂಲಿ ಮಾಡಿಸುತ್ತಿದ್ದರು. ಸ್ವಸ್ತಿಕ್‌ ನಾಗರಾಜ್‌ ಅವರಿಂದ 3 ಲಕ್ಷ ರೂ. ಹಣ ಪಡೆದಿದ್ದರು ಎಂಬ ಆರೋಪವಿದೆ. ಈ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಸೀಮಂತ್‌ ಕುಮಾರ್‌ ಸಿಂಗ್‌ ವಿರುದ್ಧ ಸಿಬಿಐ ಯಾವುದೇ ಕ್ರಮವನ್ನೂ ಸೂಚಿಸಿಲ್ಲ ಎಂದು ಹೇಳಿದ ನ್ಯಾಯಪೀಠ, ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಇದೇ ವೇಳೆ ನಿರ್ದೇಶನ ನೀಡಿತು.

ಜಡ್ಜ್ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಎಡಿಜಿಪಿ
ಬೆಂಗಳೂರು: ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರು ನ್ಯಾಯಮೂರ್ತಿ ಎಚ್‌.ಪಿ ಸಂದೇಶ್‌ ಅವರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲಂಚದ ಬೇಡಿಕೆ ಪ್ರಕರಣದ ಅಸಮರ್ಪಕ ತನಿಖೆಯ ಕಾರಣ ನೀಡಿ, ತಮ್ಮ ಸೇವಾ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಆದೇಶ ರದ್ದುಪಡಿಸಬೇಕು ಮತ್ತು ಪ್ರಕರಣದ ವಿಚಾರಣೆ ವೇಳೆ ಜೂ.29 ಹಾಗೂ ಜುಲೈ ರಂದು ತಮ್ಮ ವಿರುದ್ಧ
ಮೌಖಿಕವಾಗಿ ಮಾಡಿರುವ ಟೀಕೆಗಳನ್ನು ಕೈಬಿಡಲು ನ್ಯಾಯಮೂರ್ತಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸೀಮಂತ್‌ ಕುಮಾರ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆ ವೇಳೆ ತಮ್ಮ ಸೇವಾ ದಾಖಲೆ ಪರಿಗಣಿಸದಂತೆ ಮತ್ತು ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ನ್ಯಾಯಮೂರ್ತಿಗಳಿಗೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಸೀಮಂತ್‌ ಕುಮಾರ್‌ ಸಿಂಗ್‌ ಮಧ್ಯಂತರ ಮನವಿ ಮಾಡಿದ್ದಾರೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next