Advertisement
ಎಲ್ಲೋ ಒಂದು ಮೂಲೆಯಲ್ಲಿ ಅಜ್ಜಿ- ತಾತನ ನೋಡುವ, ಊರಿಗೆ ತೆರಳುವ ಶೆಡ್ನೂಲ್ ಸಿದ್ಧವಾಗಿರುತ್ತದಷ್ಟೆ. ನಮಗೆಲ್ಲ ಅಜ್ಜಿಮನೆಗೆ ತೆರಳ್ಳೋದಂದ್ರೆ ಅಮಿತಾನಂದ! ಅದೂ ಅಜ್ಜಿಮನೆ ಬಹಳಷ್ಟು ದೂರದಲ್ಲಿ ಇದ್ದರಂತೂ ನಮ್ಮ ಪ್ರಯಾಣಕ್ಕೆ ಮತ್ತಷ್ಟು ಹುರುಪು- ಉತ್ಸಾಹ ತಂದಿರುತ್ತದೆ. ಸುದೀರ್ಘ ಬಸ್ ಪರ್ಯಟನೆಯಲ್ಲಿ ಸಿಗೋ ಹತ್ತಾರು ಊರುಗಳು, ಹಸಿರ ಸಿರಿ, ಎಲ್ಲವೂ ತನ್ಮಯತೆಯ ಧನ್ಯತಾಭಾವ ಮೂಡಿಸುತ್ತಿತ್ತು.
Related Articles
Advertisement
ಅಜ್ಜಿಮನೆ ದಾರಿಯಲ್ಲಿ: ಅಂಕು ಡೊಂಕು ರಸ್ತೆಯಲ್ಲಿ, ಗುಡ್ಡ ದಿಬ್ಬಗಳ ಮೇಲೆ ಬಳುಕುತ್ತ ಬಾಗುತ್ತ ಒಂಚೂರು ಬಸವಳಿಯದೆ ತೆರಳುವ ಬಸ್ ಯಾನ ಅವಿಸ್ಮರಣೀಯ. ಅಲ್ಲಲ್ಲಿ ಸಿಗುವ ದೇಗುಲಗಳು, ಅದರ ದ್ವಾರಗಳು, ಮೈಲುಗಲ್ಲುಗಳು ಬಸ್ಸಿಗೆ ಅಭಿಮುಖವಾಗಿ ಬೀಸೋ ಗಾಳಿಯೊಡನೆ ಮಾತಾಡುತ್ತಿರುವಂತೆ ಭಾಸವಾಗುತ್ತಿತ್ತು. ವಿಟ್ಲ ಸ್ಟಾಪ್ ತಲುಪಿದಾಗ ಬಸ್ಸಿನ ಒಳಗಿದ್ದವರಿಗೆ ಲಾಲಿ, ಬಾದಾಮ್ ಎಂಬ ಕೂಗು. ಬಿಸಿಲಿನ ಬೇಗೆ ತಂಪೆರೆಯಲು ಶೀತಲ ಐಸ್ ಸ್ಟಿಕ್ಸ್!
ಬಸ್ ಸದಾ ರಶ್ ಇರೋ ಕಾರಣ ನಮ್ಮಂಥ ಚಿಳ್ಳೆ- ಪಿಳ್ಳೆಗಳಿಗೆ ಡ್ರೈವರ್ ಅಣ್ಣನ ಹತ್ತಿರದ ಗೇರ್ ಬಾಕ್ಸ್ ಹತ್ತಿರ ಕೂರುವ ಭಾಗ್ಯ. ಆಗಾಗ್ಗೆ ಬಿಸಿ ಅನುಭವ ಕೊಡುತ್ತಿದ್ದರೂ ಏಳುವಂತಿಲ್ಲ, ಹೇಳುವಂತಿಲ್ಲ ! ಭೀಮ ಗಾತ್ರದ ಬಸ್ ಆಳಕ್ಕಿಳಿದು, ಏರಿದಾಗ ನಮ್ಮ ಸ್ಟಾಪ್ ಬಂತೆಂದು ಅರ್ಥವಾಗುತ್ತಿತ್ತು. ಮನೆಗೆ ಬಂದಾಗ ಅಜ್ಜಿ “ನೀವು ಯಾವ ಬಸ್ಸಲ್ಲಿ ಬಂದಿದ್ದು? ರಶ್ ಇತ್ತಾ? ಇವನೇನು ಸಣಕಲಾಗಿದ್ದಾನೆ?’ ಎಂದೆಲ್ಲ ಹೇಳಿ ಶರಬತ್ ಕೈಗಿಡುವಾಗ ಅದಕ್ಕೊಂದು ವಿಶಿಷ್ಟ ರುಚಿ ಬಂದಿರುತ್ತದೆ.
ನಮ್ದೇ ಹಾವಳಿ: ಇನ್ನೇನು, ಅಜ್ಜಿಮನೆಗೆ ಬಂದಾಯ್ತಲ್ಲ ನಮ್ಮದೇ ಜಗತ್ತು ಇದು ಎನ್ನುವ ಭಾವನೆ. ಬೆಳಗ್ಗೆ ಪಕ್ಕದ ಗುಡ್ಡಕ್ಕೆ ಸವಾರಿ. ಅಲ್ಲಿದ್ದ ಕರಂಡೆಕಾಯಿ, ಮುಳ್ಳುಕಾಯಿ, ಪುನರ್ಪುಳಿ, ಪುಚ್ಚೆಕಾಯಿ, ಅಬುಕ, ನೇರಳೆ ಹೀಗೆ ಕಾಡುಹಣ್ಣುಗಳ ಆಪೋಷನಕ್ಕೆ ನಮ್ಮ (ವಾ)ನರ ಸೈನ್ಯ ದಾಂಗುಡಿ ಇಡುತ್ತಿತ್ತು. ಗೇರು ಬೀಜ ಸಿಕ್ಕಿದರೆ ಸ್ವಲ್ಪ ಸುಟ್ಟು ತಿಂದರೆ ಉಳಿದಿದ್ದು ದುಗ್ಗಣ್ಣನ ಅಂಗಡಿಯ ದುಗ್ಗಾಣಿಗೆ ಸೀಮಿತ!
ಇನ್ನು ಹುಣಸೆ ಸಿಕ್ಕಿದರೆ ಅದನ್ನು ತಿಂದು ಬೀಜ ಸುಟ್ಟು ಪುಳಿಕಟ್ಟೆ ಅಂತ ಹೆಸರಿಟ್ಟು ಕಟ-ಚಟ್ ಜಗಿಯುವಾಗ ಹಲ್ಲಿಲ್ಲದ ಅಜ್ಜಿಗೆ ಎಲ್ಲಿಲ್ಲದ ಮತ್ಸರ! “ಬಿಸಿಲಿಗೆ ಹೊರಹೋಗ್ಬೇಡ್ರೋ, ಏನಾದ್ರೂ ಗಾಳಿ-ಗೀಳಿ ಸೋಕಿದ್ರೆ ಕಷ್ಟ’ ಅನ್ನುವ ಮಾತು ಒಂದೆರಡು ದಿನಕ್ಕಷ್ಟೇ ವೇದವಾಕ್ಯವಾಗಿರುತ್ತಿತ್ತು. ಮನೆಯ ಹಿತ್ತಲಲ್ಲಿ ಕಟ್ಟಿದ ಉಯ್ನಾಲೆಯಲ್ಲಿ ಜೋರಾಗಿ ಜೀಕಾಡುವಾಗಲೂ ಅಷ್ಟೆ.
ಬಾಲ್ಯ ಅತಿಮಧುರ ಎನ್ನುವ ಪರಿಕಲ್ಪನೆ ಮೂಡಿರಲಿಕ್ಕಿಲ್ಲ. ಇನ್ನು ಊರಿನಲ್ಲಿ ಏನಾದರೂ ಕಾರ್ಯಕ್ರಮ ಇದ್ದರಂತೂ ಈ ಮಕ್ಕಳ ಸೈನ್ಯ, ಊಟಕ್ಕೆ ಹಾಜರ್. ಅಜ್ಜಿಮನೆಯಿಂದ ತೆರಳುವಾಗ ಅಳುವಿನ ಜತೆ, ಅಜ್ಜಿ ತಲೆ ನೇವರಿಸಿ ತಮ್ಮ ಕೈಯ ಗಂಟಲ್ಲಿದ್ದ ನಾಲ್ಕು ಚಿಲ್ಲರೆ ಕಾಸು ಕೈಗಿತ್ತಾಗ ನಮಗಾಗೋ ಭಾವಪರವಶತೆಗೆ ಎಣೆಯಿಲ್ಲ.
4ಜಿ ದುನಿಯಾದಲ್ಲಿ ಅಜ್ಜಿ: ಈಗ ಅಜ್ಜಿಮನೆ ಎನ್ನುವ ವಿಚಾರ ಸ್ವಲ್ಪ ಮಟ್ಟಿಗೆ outdated. ಅಜ್ಜಿಮನೆಯಲ್ಲಿ ಅಜ್ಜಿ ಇಲ್ಲದಿದ್ದರೂ ಪರವಾಗಿಲ್ಲ , 4ಜಿ ನೆಟ್‌ವರ್ಕ್ ಇರಲೇಬೇಕು ಎನ್ನುವ ಠರಾವು ಈಗಿನ ಜನಾಂಗದ್ದು. ಅಜ್ಜಿಮನೆಯಲ್ಲಿ ವರ್ಷಕೊಮ್ಮೆ ನಡೆಯುವ ಯಾವುದೇ ಸಮಾರಂಭಕ್ಕೆ ತೆರಳುವುದೂ ಒಂದು ಹೊರೆಯಂತೆ ಕಾಣಿಸುತ್ತಿರುವುದು ವಿಷಾದನೀಯ.
ಅದಲ್ಲದೆ ತಂದೆ- ತಾಯಿ ಕೂಡ ಯಾಂತ್ರಿಕ ಬದುಕಿನಲ್ಲಿ ಮುದುಡಿ, ಮಕ್ಕಳನ್ನೂ ಅದೇ ವಾತಾವರಣದಲ್ಲಿ ಬೆಳೆಸಿದಾಗ ಅವರಲ್ಲೂ ಜಡತ್ವ ಅಂಟಿಕೊಂಡಿರುತ್ತದೆ. ಆಧುನಿಕತೆಯ ಕಾಲದ ಅಲೆಯಲ್ಲಿ ಅಜ್ಜಿಯ ಪ್ರೀತಿ ತುಂಬಿದ ಮಾತುಗಳ ಸಂಚಿ ಸದ್ದಿಲ್ಲದೆ ಕೊಚ್ಚಿಹೋಗುತ್ತಿರುವುದು ಖೇದ ಸಂಗತಿ. ಯೋಚಿಸಬೇಕಾದ್ದು ಬಹಳಷ್ಟಿದೆ ಅಲ್ವಾ?
* ಸುಭಾಶ್ ಮಂಗಳೂರು