Advertisement

ನಮ್ಮ ಪಾಲಿಗೆ ಯಾವ ಸರ್ಕಾರವೂ ಬದುಕಿಲ್ಲ!

09:53 AM Jul 15, 2019 | Team Udayavani |

ಬಾಗಲಕೋಟೆ: ನಮ್ಮ ಪಾಲಿಕೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾರೂ ಬದುಕಿಲ್ಲ. ನಾವು ಬದುಕಿರುವ ಬಗ್ಗೆ ಅವರಿಗೆ ಗೊತ್ತೂ ಇಲ್ಲ. ಐದು ವರ್ಷಕ್ಕೊಮ್ಮೆ ಗೋಳು ಕೇಳುತ್ತಾರೆ. ಶೀಘ್ರ ಬಂದು ನಿಮಗೆ ಸೂರು ಕೊಡಿಸುವುದಾಗಿ ಹೇಳುತ್ತಾರೆ. ಮತ್ತೆ ಐದು ವರ್ಷದವರೆಗೆ ನಮ್ಮತ್ತ ಬರುವುದಿಲ್ಲ. ಹೀಗಾಗಿ ನಾವು ಅವರ ಪಾಲಿಗೆ ಮತ ಹಾಕಲು ಮಾತ್ರ ಬದುಕಿದ್ದೇವೆ. ನಮ್ಮ ಪಾಲಿಗೆ ಅವರು ಬದುಕಿಲ್ಲ…

Advertisement

ಹೌದು, ಹೀಗೆ ಆಕ್ರೋಶ, ಅಸಹನೆ, ಬೇಸರ ಹಾಗೂ ದುಃಖಭರಿತ ಮಾತು ಹೇಳುವವರು ನಗರದ ಹಳೆಯ ಎಪಿಎಂಸಿ ಹತ್ತಿರದ ಜಾಗೆಯಲ್ಲಿ 20 ವರ್ಷಗಳಿಂದ ಜೋಪಡಿಯಲ್ಲಿ ಬದುಕು ನಡೆಸುತ್ತಿರುವ ಸುಡಗಾಡ ಸಿದ್ಧರು.

ಬದುಕುವ ಹಕ್ಕಿದೆ: ಸುಡಗಾಡ ಸಿದ್ದರಿಗಾಗಿಯೇ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಿದೆ. ಅಲೆಮಾರಿ ಹಾಗೂ ಸುಡಗಾಡ ಸಿದ್ಧರು ಎಂಬ ಹೆಸರಿನಲ್ಲಿ ಕರೆಸಿಕೊಳ್ಳಿವ ಇವರಿಗೆ ಸ್ವಂತ ಮನೆ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ನಿಯಮ ಜಾರಿಗಳಿಸಿದೆ. ಆದರೆ, ಬಾಗಲಕೋಟೆಯ ಈ ಸುಡಗಾಡ ಸಿದ್ಧರಿಗೆ ಸ್ವಂತ ಸೂರು ಸಿಕ್ಕಿಲ್ಲ. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಕ್ಕಿಲ್ಲ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷ ಕಳೆದರೂ, ಭಾರತೀಯರಿಗೆ ಸಿಗಬೇಕಾದ ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದೇ ಅವರು ಬದುಕುತ್ತಿದ್ದಾರೆ.

ಸಂವಿಧಾನದ ಆಶಯದ ಪ್ರಕಾರ, ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಸ್ವಂತ ಸೂರು, ಕುಡಿಯಲು ಶುದ್ಧ ನೀರು, ಸಂಚರಿಸಲು ರಸ್ತೆ, ಜೀವಿಸಲು ಆಹಾರ ಕೊಡಲೇಬೇಕಾದ ಜವಾಬ್ದಾರಿ ಸರ್ಕಾರದ್ದು. ಇಂತಹ ಸಲಭ್ಯವಿಲ್ಲದ ಜನರನ್ನು ಗುರುತಿಸಿ, ಅವರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ, ಇಲ್ಲಿನ ಜನರಿಗೆ ಕಾನೂನು ಗೊತ್ತಿಲ್ಲ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯೂ ಇಲ್ಲ. ಇನ್ನು ಇವರ ಪಾಲಿಗೆ ಸಂವಿಧಾನದ ಆಶಯ ಈಡೇರಿಲ್ಲ ಎಂಬುದು ಸ್ವತಃ ಇವರಿಗೂ ಗೊತ್ತಿಲ್ಲ.

30ಕ್ಕೂ ಹೆಚ್ಚು ಕುಟುಂಬ: ಹಳೆಯ ಎಪಿಎಂಸಿ ಬಳಿ ಖಾಲಿ ಜಾಗೆಯಲ್ಲಿ ಇವರು ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಇವರಿಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಮುಖ್ಯವಾಗಿ ಮತದಾರರ ಗುರುತಿನ ಚೀಟಿ ಇವೆ. ಪ್ರತಿ ನಗರಸಭೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೊಮ್ಮೆ ಇವರು ಮತವನ್ನೂ ದಾನ ಮಾಡುತ್ತಾರೆ. ಇವರ ಮತ ದಾನಕ್ಕೆ ಈ ವರೆಗೆ ಪ್ರತಿಫಲ ಸಿಕ್ಕಿಲ್ಲ. ಅದನ್ನು ಕೇಳಲು ಹೋದರೆ ಭರವಸೆ ಸಿಕ್ಕಿವೆ ಹೊರತು, ಸೌಲಭ್ಯ ಸಿಕ್ಕಿಲ್ಲ. ಇಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳಿವೆ. ಗುರುತಿಸಲು ಬೇಕಾದ ಎಲ್ಲ ಅರ್ಹತೆ ವಾಸಸ್ಥಳ, ಗುರುತಿನ ಚೀಟಿಯನ್ನು ಸರ್ಕಾರವೇ ಕೊಟ್ಟವರೂ ಇವರಿಗೊಂದು ಸ್ವಂತ ಸೂರು ಕೊಟ್ಟಿಲ್ಲ. ಇಂದಿಗೂ ಜೋಪಡಿಯಲ್ಲಿ ಸಣ್ಣ ಸಣ್ಣ ಹಸುಳೆಗಳನ್ನು ಸೊಂಟಕ್ಕೆ ಕಂಟಿಕೊಂಡು ಜೀವನ ನಡೆಸುತ್ತಿದ್ದಾರೆ.
ಭರವಸೆಗಳಿಗೆ ಲೆಕ್ಕವಿಲ್ಲ: ಇಲ್ಲಿನ ಜನರು ಕಳೆದ 20 ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದರೂ ಇವರಿಗೆ ಭಾರತೀಯ ನಾಗರಿಕರ ಸ್ಥಾನಮಾನ ಸಿಕ್ಕಿದೆ (ಹುಟ್ಟಿ ಬೆಳೆದಿದ್ದು ಇಲ್ಲಿಯೇ) ಹೊರತು ಸೌಲಭ್ಯಗಳು ಸಿಕ್ಕಿಲ್ಲ. ಇದಕ್ಕೆ ಕಾರಣ, ಇವರಲ್ಲಿನ ಸಂಘಟನೆಯ ಕೊರತೆ ಒಂದೆಡೆಯಾದರೆ, ಅಸುಶಿಕ್ಷಿತ ಕಾರಣ ಮತ್ತೂಂದು. ಪ್ರತಿ ಬಾರಿ ನಗರಸಭೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಯಾರೇ ಮತ ಹಾಕಿ ಎಂದು ಕೇಳಲು ಬಂದರೂ (ಜಿಲ್ಲಾಡಳಿತ ಮತದಾನ ಜಾಗೃತಿಗೆ ಬಂದಾಗಲೂ ಇವರು ಕೈ ಮುಗಿದು ಸೂರು ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ) ಸ್ವಂತ ನೆಲೆಗಾಗಿ ಬೇಡಿಕೆಕೊಂಡಿದ್ದಾರೆ. ನಗರಸಭೆ, ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಬರುವ ಅಭ್ಯರ್ಥಿಗಳು, ಅವರ ಬೆಂಬಲಿಗರು ಇವರಿಗೆ ನೀಡಿದ ಭರವಸೆಗಳಿಗೆ ಲೆಕ್ಕವಿಲ್ಲ. ನಮಗೆ ಆಶೀರ್ವಾದ ಮಾಡಿ, ನಿಮಗೆ ಸ್ವಂತ ಮನೆ ಕಟ್ಟಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಚುನಾವಣೆ ಮುಗಿದಾಗ, ಗೆದ್ದವರ ಮನೆಗೆ ಹೋದರೂ, ಸ್ವಲ್ಪ ದಿನ ಕಾಯಿರಿ. ನಾನೂ ಅದನ್ನೇ ಮಾಡುತ್ತಿದ್ದೇನೆ ಎಂಬ ಮಾತು ಹೇಳಿ ಕಳುಹಿಸಿದ್ದಾರೆ ಹೊರತು, ಇವರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ನಾವು ಇದೇ ಜಾಗದಲ್ಲಿ 20 ವರ್ಷದಿಂದ ಇದ್ದೇವೆ. ಮಳೆ-ಗಾಳಿಗೆ ಜೋಪಡಿ ಹಾರಿದರೆ, ಪುನಃ ಅಲ್ಲೇ ಹೊಸ ಜೋಪಡಿ ಹಾಕಿಕೊಂಡು ಜೀವನ ನಡೆಸಿದ್ದೇವೆ. ಚುನಾವಣೆಗೊಮ್ಮೆ ಎಲ್ಲ ಪಕ್ಷದವರೂ ಬರುತ್ತಾರೆ. ಮನೆ ಕಟ್ಟಿಕೊಡುವ ಭರವಸೆ ಕೊಡುತ್ತಾರೆ. ಆ ಮೇಲೆ ಕೇಳಲು ಹೋದರೆ, ತಿಂಗಳು ಬಿಟ್ಟು ಬರಲು ಹೇಳುತ್ತಾರೆ. ನಾವು ಜೋಪಡಿಯಲ್ಲಿ ನಿತ್ಯ ಗೋಳಾಡುವುದು ಅಥವಾ ನಾವು ಬದುಕಿದ್ದೇವೆಂಬುದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿದೆಯೋ ಇಲ್ಲೋ.•ವಿಶ್ವನಾಥ, ಈರಮ್ಮ ಹಾಗೂ ರಾಮಕ್ಕ, ಜೋಪಡಿ ನಿವಾಸಿಗಳು

Advertisement

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next