Advertisement
ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದ ಕಲ್ಮಕಾರು ಭಾಗಕ್ಕೆ ಸುಳ್ಯದಿಂದ ರಾತ್ರಿ ತಂಗುವ ಒಂದು ಬಸ್ ಬಿಟ್ಟರೆ ಈಗ ಯಾವುದೇ ಬಸ್ ಬರುತ್ತಿಲ್ಲ. ಮಧ್ಯಾಹ್ನ 11 ಗಂಟೆಗೆ ಒಂದು ಬಸ್ ಕೆಲ ವರ್ಷಗಳ ಹಿಂದೆ ಬರುತ್ತಿತ್ತು. ‘ಅಂಚೆ ಬಟವಾಡೆ ಬಸ್’ ಎನ್ನುವ ಹೆಸರೂ ಅದಕ್ಕಿತ್ತು. ನಾಲ್ಕು ಗಂಟೆಗೆ ಕೋಲ್ಚಾರ್‌ನಿಂದ ಸುಳ್ಯ ಮೂಲಕ ಇನ್ನೊಂದು ಬಸ್ ಬರುತ್ತಿತ್ತು. ಈ ಎರಡೂ ಬಸ್‌ಗಳು ಸುಳ್ಯದ ಮೂಲಕವೇ ಸಂಚರಿಸುತ್ತಿದ್ದವು. ಇವೂ ಐದು ವರ್ಷಗಳಿಂದ ಬರುತ್ತಿಲ್ಲ.
ಸುಳ್ಯ, ಸುಬ್ರಹ್ಮಣ್ಯ, ಗುತ್ತಿಗಾರು, ಪುತ್ತೂರು, ಮಂಗಳೂರು ಮೊದಲಾದ ಕಡೆಗೆ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ಸಿಲ್ಲದೆ ಕಷ್ಟವಾಗುತ್ತಿದೆ. ನಸುಕಿನಲ್ಲಿ ಎದ್ದು ಇರುವ ಏಕೈಕ ಬಸ್ ಹಿಡಿದು ಪ್ರಯಾಣಿಸಬೇಕು. ತಡವಾದಲ್ಲಿ ಮತ್ತೆ ವ್ಯಾನು, ಜೀಪುಗಳನ್ನು ಹತ್ತಿ ತೆರಳಬೇಕು. ನಿಗದಿತ ಸಮಯಕ್ಕೆ ತಲುಪುವಲ್ಲಿಗೆ ತಲುಪಲು ಶಾಲೆ ಮಕ್ಕಳಿಗೆ, ನಾಗರಿಕರಿಗೆ ಆಗುತ್ತಿಲ್ಲ. ಶಾಲಾ ಬಸ್ ಪಾಸ್ ಇಲ್ಲಿ ವ್ಯರ್ಥವಾಗಿದೆ.
Related Articles
ಹಿಂದೆ ಬರುತ್ತಿದ್ದ ಎರಡು ಸಾರಿಗೆ ಬಸ್ಸುಗಳನ್ನು ಪ್ರಯಾಣಿಕರ ಕೊರತೆ ಎನ್ನುವ ನೆಪವೊಡ್ಡಿ ಸಾರಿಗೆ ಸಂಸ್ಥೆ ನಿಲ್ಲಿಸಿದೆ. ಈ ಬಸ್‌ಗಳು ಸಮಯಕ್ಕೆ ಸರಿ ಬಸ್ಸು ಬರುತ್ತಿದ್ದರೆ, ನಿತ್ಯವೂ ಬಸ್ ಓಡಾಟ ನಡೆಸುತ್ತಿದ್ದರೆ ಬಸ್ಸಿಗೆ ಪ್ರಯಾಣಿಕರು ದೊರೆತು ಕರ ಸಂಗ್ರಹವಾಗುತ್ತಿತ್ತು. ಸುಳ್ಯದ ಕಾಯರ್ತೋಡಿಯಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ ಸಾರಿಗೆ ಡಿಪೋ ತೆರೆಯಲಾಗಿದೆ. ಘಟಕ ಕಾರ್ಯರಂಭ ಮಾಡಿದಾಗ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಣೆಯಾಗುತ್ತವೆ ಎನ್ನುವ ಭರವಸೆ ಇತ್ತು. ಬಳಿಕವೂ ಹೆಚ್ಚಿನ ಬದಲಾವಣೆಗಳು ಆಗಿಲ್ಲ.
Advertisement
ಗ್ರಾಮಾಂತರ ಪ್ರದೇಶಗಳಿಗೆ ಅವರ ಬೇಡಿಕೆಗೆ ತಕ್ಕಂತೆ ಬಸ್ ಸೌಲಭ್ಯ ಒದಗಿಸಿಲ್ಲ. ತಾಲೂಕಿನ ಗಡಿಗ್ರಾಮಗಳಾದ ಕೊಲ್ಲಮೊಗ್ರ, ಕಲ್ಮಕಾರು, ಬಾಳುಗೋಡು, ಮಡಪ್ಪಾಡಿ ಮಾತ್ರವಲ್ಲ ಮಂಡೆಕೋಲು, ಮರ್ಕಂಜ, ಆಲೆಟ್ಟಿ, ಕುಕ್ಕುಜಡ್ಕ, ಚೊಕ್ಕಾಡಿ ಭಾಗದ ಜನತೆ ತಮ್ಮ ಪ್ರಯಾಣಕ್ಕಾಗಿ ಖಾಸಗಿ ವಾಹನಗಳಾದ ಟೆಂಪೋ, ಜೀಪ್‌ಗ್ಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಹೆಚ್ಚಿದ್ದು ಕೇವಲ 28 ಬಸ್ಡಿಪೋ ಆಗುವ ಮೊದಲು ಸುಳ್ಯ ನಿಲ್ದಾಣಕ್ಕೆ ದಿನವೊಂದಕ್ಕೆ 290 ಬಸ್‌ಗಳು ಬಂದು ಹೋಗುತ್ತಿದ್ದವು. ಡಿಪೋ ಆದ ಬಳಿಕ 28 ಬಸ್‌ಗಳು ಮಾತ್ರ ಸೇರ್ಪಡೆಯಾಗಿವೆ. ಈಗ 315 ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಈ ಪೈಕಿ ಹುಬ್ಬಳ್ಳಿ, ಗೋಕರ್ಣ, ಕಾರವಾರ, ಶಿವಮೊಗ್ಗ, ಚಳ್ಳಕೆರೆ, ಬಿಸಿಲೆ-ಮೈಸೂರು, ಬಿಸಿಲೆ-ಬೆಂಗಳೂರು ಮಾರ್ಗಗಳಲ್ಲಿ ಬಸ್ ಓಡಾಟ ಹೆಚ್ಚಳವಾಗಿದೆ. ಇದು ಬಿಟ್ಟರೆ ಹೆಚ್ಚುವರಿ ಎಂದು ಸುಬ್ರಹ್ಮಣ್ಯ-5, ಉಬರಡ್ಕ-1 ಮಂಡೆಕೋಲು-1, ಮಡಪ್ಪಾಡಿ- 1 ಬಸ್ ಓಡಾಟ ವ್ಯವಸ್ಥೆಯಷ್ಟೆ ಆಗಿದೆ. ಸೂರ್ಯ ಮುಳುಗುತ್ತಲೇ ಸ್ಥಗಿತ!
ಗುತ್ತಿಗಾರು- ಬಳ್ಳಕ- ಪಂಜ, ಚೊಕ್ಕಾಡಿ- ಪಾಜೆಪಳ್ಳ- ಬೆಳ್ಳಾರೆ, ಸುಬ್ರಹ್ಮಣ್ಯ- ಐನೆಕಿದು- ಹರಿಹರ, ಗುತ್ತಿಗಾರು- ಕಂದ್ರಪ್ಪಾಡಿ- ಮಡಪ್ಪಾಡಿ, ಅರಂತೋಡು- ಮರ್ಕಂಜ ರಸ್ತೆಗಳಲ್ಲಿ ಕೆಲ ಅವಧಿಗೆ ಸೀಮಿತವಾಗಿ ಬಸ್‌ಗಳು ಸಂಚರಿಸುತ್ತವೆ. ಈ ಭಾಗದಲ್ಲಿ ಇಂದಿಗೂ ಜೀಪು, ವ್ಯಾನುಗಳಲ್ಲಿ ನೇತಾಡುತ್ತಾ ಜನ ಹೋಗುತ್ತಾರೆ. ರಾತ್ರಿ ವೇಳೆ 7ರಿಂದ 8ಗಂಟೆ ಒಳಗಡೆ ಸುಳ್ಯ ನಿಲ್ದಾಣದಿಂದ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ. ಸ್ಪಂದನೆ ಸಿಗುತಿಲ್ಲ
ನಮ್ಮ ಭಾಗಕ್ಕೆ ಸಾರಿಗೆ ಬಸ್ ವ್ಯವಸ್ಥೆ ಒದಗಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಸರಕಾರಿ ಬಸ್‌ನ ವ್ಯವಸ್ಥೆ ಇದ್ದಲ್ಲಿ ನಾಗರಿಕರು ಅದನ್ನೇ ಆಶ್ರಯಿಸಿ ಪ್ರಯಾಣಿಸುತ್ತಾರೆ. ಅದು ಇಲ್ಲದೆ ಇರುವುದರಿಂದ ಖಾಸಗಿ ವಾಹನಗಳ ಪ್ರಯೋಜನ ಪಡೆಯುತ್ತಾರೆ. ಬಸ್ ಒದಗಿಸುವಂತೆ ಸಚಿವರು ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಸ್ಪಂದನೆ ಸಿಕ್ಕಿಲ್ಲ.
– ಸತೀಶ ಕೊಮ್ಮೆಮನೆ ಕಲ್ಮಕಾರು ನಿವಾಸಿ ಬೇಡಿಕೆ ಪತ್ರ ಬಂದಿಲ್ಲ
ಜನವಸತಿ ಹಾಗೂ ಅಧಿಕ ಜನಸಾಂದ್ರತೆ ಇರುವ ಪ್ರದೇಶಗಳಿಗೆ ಸಾರಿಗೆ ಬಸ್ ಒದಗಿಸುವ ಅವಕಾಶ ಇಲಾಖೆಯಲ್ಲಿ ಇದೆ. ಬಸ್ ಸೌಕರ್ಯ ಒದಗಿಸುವ ಸಂದರ್ಭ ರಸ್ತೆ, ಇನ್ನಿತರ ಸೌಕರ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಲ್ಮಕಾರು ಭಾಗದಲ್ಲಿ ಈಗಾಗಲೇ ಎರಡು ಬಸ್‌ಗಳು ಸಂಚರಿಸುತ್ತಿವೆ. ಹೆಚ್ಚುವರಿ ಬಸ್ ಬೇಡಿಕೆ ಸಂಬಂಧ ಸ್ಥಳೀಯರಿಂದ ನಮ್ಮ ಸುಳ್ಯ ಕಚೇರಿಗೆ ಇದುವರಿಗೆ ಯಾವುದೇ ಮನವಿ ಪತ್ರ ಬಂದಿಲ್ಲ.
– ಸುಂದರ ರಾಜ್ ಸುಳ್ಯ ಡಿಪೋ ಮ್ಯಾನೇಜರ್
ಬಾಲಕೃಷ್ಣ ಭೀಮಗುಳಿ