ಮಲ್ಪೆ: ಮಲ್ಪೆ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಕಳೆದ 7 ವರ್ಷದಿಂದ ವೈದ್ಯರಿಲ್ಲದೆ ರೈತರು ಜಾನುವಾರುಗಳ ಚಿಕಿತ್ಸೆಗೆ ಪರದಾಡುವಂತಾಗಿದೆ.
ಮಲ್ಪೆ ಸುತ್ತಮುತ್ತಲಿನ ಮತ್ತು ನೆರೆಯ ಗ್ರಾಮದ ರೈತರು ಪಶುಚಿಕಿತ್ಸೆಗಾಗಿ ಮಲ್ಪೆ ಪಶು ಚಿಕಿತ್ಸಾ ಕೇಂದ್ರಕ್ಕೆ ಒಳಪಟ್ಟಿದ್ದಾರೆ. ವೈದ್ಯರು ಸೇರಿ ಇಲ್ಲಿ ಖಾಯಂ ಸಿಬಂದಿ ಕೊರತೆ ಇದೆ. ಇಲ್ಲಿ ಹೊರಗುತ್ತಿಗೆಯ ಓರ್ವ ಸಿಬಂದಿಯನ್ನು ಬಿಟ್ಟರೆ ಉಳಿದವರೆಲ್ಲರೂ ಹೊರಗಿನಿಂದಲೇ ಬರಬೇಕು. ಈ ಭಾಗದ ಜನತೆ ತಮ್ಮ ರಾಸುಗಳಿಗೆ ಸೇರಿದಂತೆ ಸಾಕು ಪ್ರಾಣಿಗಳು ಕಾಯಿಲೆಯಿಂದ ಬಳಲಿದರೆ ಇಲ್ಲಿನ ಕಂಪೌಂಡರ್‌ನ್ನೇ ನೆಚ್ಚಿಕೊಂಡು ಚಿಕಿತ್ಸೆಗೆ ಬರಬೇಕಾಗಿದೆ. ಇಲ್ಲವೇ ವೈದ್ಯರಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ.
ಸುಮಾರು 8 ವರ್ಷಗಳ ಹಿಂದೆ ಇದ್ದ ಖಾಯಂ ವೈದ್ಯರು ವರ್ಗಾಣೆಗೊಂಡ ಬಳಿಕ ಇಲ್ಲಿ ಪೂರ್ಣಕಾಲಿಕ ವೈದ್ಯರ ನೇಮಕಾತಿ ಆಗಿಲ್ಲ. ಕಡೆಕಾರು ಕೇಂದ್ರದ ವೈದ್ಯಾಧಿಕಾರಿ ಇಲ್ಲಿನ ಹೊಣೆ ಹೊರುವಂತಾಗಿದೆ. ಪ್ರಸ್ತುತ ಮಲ್ಪೆ ಚಿಕಿತ್ಸಾ ಕೇಂದ್ರದಲ್ಲಿ ವಾರದಲ್ಲಿ ಕೆಲವು ದಿನ ಇತರೆಡೆಯ ವೈದ್ಯಕೀಯ ನಿರೀಕ್ಷಕರು ಪ್ರಭಾರ ಹುದ್ದೆ ನಿರ್ವಹಿಸಬೇಕಾದ ಅನಿ ವಾರ್ಯತೆಯಿಂದ ಪೂರ್ಣ ಪ್ರಮಾಣದಲ್ಲಿ ಪಶು ಇಲಾಖೆ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಸರಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದರೂ ಇಲಾಖೆಯಲ್ಲಿ ಅಗತ್ಯವಿರುವ ಸಿಬಂದಿ ನೇಮಕಕ್ಕೆ ಶೀಘ್ರ ಮುಂದಾಗದಿದ್ದಲ್ಲಿ ಜನ ಹೈನುಗಾರಿಕೆಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಲಿದೆ. ರಾಜ್ಯದಲ್ಲಿ ರಾಸುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯಾರ ಬಳಿ ಕೇಳಬೇಕೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಜನರು.
ವೈದ್ಯರ ಕೊರತೆ ಇದೆ: ಹೆಚ್ಚಿನ ಪಶು ಚಿಕಿತ್ಸಾಲಯದಲ್ಲಿ ವೈದ್ಯರ ಕೊರತೆ ಇದೆ. ಜಿಲ್ಲೆಯಲ್ಲಿ ಕೇವಲ ಶೇ.20ರಷ್ಟು ಮಾತ್ರ ಇದೆ. ಅನಿವಾರ್ಯವಾಗಿ ಪಶು ವೈದ್ಯಕೀಯ ನಿರೀಕ್ಷರನ್ನು ನಿಯೋಜಿಸಿಕೊಂಡು ನಿಭಾಯಿಸಿಕೊಂಡು ಹೋಗಲಾಗುತ್ತಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ವೈದ್ಯರ ಹುದ್ದೆ ಭರ್ತಿ ಕಾರ್ಯ ನಡೆಯಲಿದೆ. –
ಡಾ| ಶಂಕರ್ ಶೆಟ್ಟಿ, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ
ಜನಪ್ರತಿನಿಧಿಗಳಲ್ಲಿ ಮನವಿ: ಇಲ್ಲಿನ ವೈದ್ಯರು ಸಿಗದೆ ಕೆಲವೊಂದು ಲಸಿಕೆ ಸಂದರ್ಭದಲ್ಲಿ ತುಂಬಾ ಸಮಸ್ಯೆಯಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದೇವೆ. ಮಲ್ಪೆಯ ಪಶು ಚಿಕಿತ್ಸಾ ಕೇಂದ್ರಕ್ಕೆ ಪೂರ್ಣ ಪ್ರಮಾಣದ ವೈದ್ಯಾಧಿಕಾರಿಯನ್ನು ನಿಯೋಜನೆ ಮಾಡಬೇಕು.
-ಸುಬ್ರಹ್ಮಣ್ಯ ಬಾದ್ಯ ಕೊಡವೂರು, ಕೃಷಿಕ