ಸಾಗರ: ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಿದರೂ ಸಂಪೂರ್ಣ ಸೀಲ್‌ಡೌನ್ ಮಾಡುವ ಯೋಚನೆ ಇಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳತ್ತ ಜನ ಕಿವಿಗೆ ಹಾಕಿಕೊಳ್ಳಬಾರದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸ್ಪಷ್ಟಪಡಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೋವಿಡ್ ಹಿನ್ನೆಲೆಯಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಕೂಡ ಮಾತನಾಡಿದ್ದೇನೆ. ರಾಜ್ಯದಲ್ಲಿಯೂ ಕೂಡ ಸೀಲ್ ಡೌನ್ ಪ್ರಸ್ತಾಪ ಇಲ್ಲ. ಜನ ಸ್ವಯಂಪ್ರೇರಿತರಾಗಿ ರೋಗ ನಿಯಂತ್ರಣದಲ್ಲಿ ತಮ್ಮ ಕೈ ಜೋಡಿಸಬೇಕಾಗಿದೆ ಎಂದು ಅವರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ತಾಯಿ ಮಗು ಆಸ್ಪತ್ರೆಯಲ್ಲಿ ಐಸಿಯು, ಎಕ್ಸ್‌ರೇ ವಿಭಾಗಗಳು ಇಲ್ಲದಿರುವುದರಿಂದ ಅಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ಸ್ಥಾಪಿಸಲು ಆಗುವುದಿಲ್ಲ. ಈ ಕಾರಣ ಉಪ ವಿಭಾಗೀಯ ಆಸ್ಪತ್ರೆಯಲ್ಲಿಯೇ 100 ಬೆಡ್‌ಗಳ ವಾರ್ಡ್ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ಜಿಲ್ಲಾಡಳಿತ 50 ಬೆಡ್ ಗಳ ವಾರ್ಡ್‌ಗೆ ಅನುಮತಿ ನೀಡಿದ್ದು, ಈಗ ಇಲ್ಲಿರುವ ವ್ಯವಸ್ಥೆ 80 ಬೆಡ್ ಹಾಕುವ ಮಟ್ಟದಲ್ಲಿದೆ. ಇದನ್ನು 100 ಬೆಡ್‌ಗೆ ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪ್ರಕಾಶ್ ಬೋಸ್ಲೆ ಮಾತನಾಡಿ, ಮುಂದಿನ 10 ದಿನಗಳಿಗಾಗುವಷ್ಟು ಮಾತ್ರವೇ ಪಿಪಿಇ ಕಿಟ್, ಗ್ಲೌಸ್, ಎನ್95 ಮಾಸ್ಕ್, ಸ್ಯಾನಿಟೈಸರ್ ಮೊದಲಾದವುಗಳು ಆಸ್ಪತ್ರೆಯ ಸಂಗ್ರಹದಲ್ಲಿದೆ. ಈ ಕೋವಿಡ್ ಚಿಕಿತ್ಸೆ, ನಿರ್ವಹಣೆಗೆ ಅಗತ್ಯವಾದ ವಸ್ತು, ಉಪಕರಣಗಳ ಖರೀದಿಗೆ ತಾಲೂಕು ಆಡಳಿತ ಮುಂದಾಗಬೇಕಾಗಿದೆ ಎಂದು ಗಮನ ಸೆಳೆದರು.
ಸಾಗರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ನಾಗರಾಜ್ ಎನ್. ಮಾತನಾಡಿ, ಕೋವಿಡ್ ವಾರ್ಡ್ ಗೆ ಆರು ಜನ ವೈದ್ಯರು ಹಾಗೂ 10 ಜನ ಸ್ಟಾಫ್ ನರ್ಸ್‌ಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಸ್ಟಾಫ್ ನರ್ಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಭಾನುವಾರ ಸಂಪೂರ್ಣ ಲಾಕ್‌ಡೌನ್ ಇದ್ದು, ಮೀನು, ಮಾಂಸ ಸೇರಿದಂತೆ ಯಾವುದೇ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಸೋಮವಾರದಿಂದ ಬೆಳಗ್ಗೆ 9ರಿಂದ ವ್ಯಾಪಾರ- ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಭಾನುವಾರ ತೀರ್ಮಾನಿಸಲಾಗುತ್ತದೆ ಎಂದರು.