Advertisement

“ಕ್ರಿಮಿನಲ್‌ಗ‌ಳ ಜತೆ ಸ್ನೇಹ ಸಹಿಸುವುದಿಲ್ಲ’

11:17 PM Aug 29, 2019 | Lakshmi GovindaRaj |

ಬೆಂಗಳೂರು: “ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಕ್ರಿಮಿನಲ್‌ಗ‌ಳ ಜತೆ ಯಾವುದೇ ರೀತಿಯ ಸಂಬಂಧ ಸ್ನೇಹ ಸಂಬಂಧ ಹೊಂದಿರುವುದನ್ನು ಸಹಿಸುವುದಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಅವರು ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದರು.

Advertisement

“ಬಡವರ ದುರ್ಬಲರಿಗೆ ನ್ಯಾಯ ಕೊಡಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯ. ಹೀಗಾಗಿ ಪೊಲೀಸರು ಜನರಿಗೆ ಹತ್ತಿರವಾಗಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಸ್ನೇಹಿತರಾಗಿ ಕ್ರಿಮಿನಲ್‌ಗ‌ಳಿಗೆ ಸಿಂಹಸ್ವಪ್ನವಾಗಿ ಕೆಲಸ ಮಾಡಿ. ಅದನ್ನು ಹೊರತುಪಡಿಸಿ ಕ್ರಿಮಿನಲ್‌ಗ‌ಳ ಜತೆ ಸ್ನೇಹ ಇರುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಐಪಿಎಸ್‌ ಅಧಿಕಾರಿಗಳು ಸೇವೆಗೆ ಸೇರುವ ದಿನ ಇಟ್ಟುಕೊಂಡಂತಹ ಆದರ್ಶಗಳು, ಸೇವಾ ಮನೋಭಾವನೆ, ಮೌಲ್ಯಗಳನ್ನು ಸೇವೆಯಲ್ಲಿ ಮುಂದುವರಿಸಿಕೊಂಡು ಕಾರ್ಯನಿರ್ವಹಿಸಬೇಕು. ಪೊಲೀಸ್‌ ಸಿಬ್ಬಂದಿಯ ಕಾರ್ಯಶೈಲಿ, ಮನಸ್ಥಿತಿ ಬದಲಾಗಬೇಕು.ಅಪರಾಧ ಚಟುವಟಿಕೆಗಳನ್ನು ಕಡಿವಾಣ ಹಾಕುವ, ನಾಗರಿಕರಿಗೆ ಪಾರದರ್ಶಕ ಸೇವೆ ಸಲ್ಲಿಸುವ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ನಿಮ್ಮ ಕಾರ್ಯವೈಖರಿ ಯಾವ ಮಾದರಿಯಲ್ಲಿರುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿರಲಿದೆ ಎಂದರು.

ಸಮಾಜದಲ್ಲಿ ಮೌಲ್ಯಗಳು ಕುಸಿದಂತೆ ಅಪರಾಧಗಳು ಹೆಚ್ಚುತ್ತಿವೆ. ಅತಿಯಾದ ಶ್ರೀಮಂತಿಕೆ ಅತಿಯಾದ ಬಡತನ ಅಪರಾಧಗಳಿಗೆ ಕಾರಣವಾಗಲಿದೆ. ಹೀಗಾಗಿ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ರೌಡಿ ಚಟುವಟಿಕೆಗಳು ಸೇರಿದಂತೆ ಅಪರಾಧಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಲಾಖೆ ತಂಡದ ರೀತಿಯಲ್ಲಿ ಕೆಲಸ ಮಾಡಬೇಕು. ನಿಮ್ಮ ತಂಡದ ಜತೆ ನಾನೂ ಒಬ್ಬ ಸದಸ್ಯ ಆಗಿರಲಿದ್ದೇನೆ ಎಂದರು.

ಕಾರಾಗೃಹ, ಅಗ್ನಿಶಾಮಕ ಸಿಬ್ಬಂದಿಗೆ ಸಿಹಿ ಸುದ್ದಿ!: ಪೊಲೀಸರ ವೇತನ ಪರಿಷ್ಕರಣೆ ಸಂಬಂಧದ ಔರಾದ್ಕರ್‌ ವರದಿ ಜಾರಿಯ ಕಾರ್ಯ ನಡೆಯುತ್ತಿದೆ. ಇದರೊಟ್ಟಿಗೆ ಕಾರಾಗೃಹ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೂ ಔರಾದ್ಕರ್‌ ವರದಿ ಅನ್ವಯ ವೇತನ ಹೆಚ್ಚಳ ಸೇರಿ ಇನ್ನಿತರೆ ಅನುಕೂಲಗಳು ನೀಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಹಣಕಾಸು ಇಲಾಖೆ ಜತೆ ಚರ್ಚಿಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು. ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 24 ಸಾವಿರ ಹುದ್ದೆಗಳ ಪೈಕಿ ಈ ವರ್ಷ ನಾಲ್ಕು ಸಾವಿರ ಪೊಲೀಸ್‌ ಪೇದೆಗಳು ಹಾಗೂ 200 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

Advertisement

ಡ್ರಗ್ಸ್‌ ಮೂಲಕ್ಕೆ ಕೈ ಹಾಕಿ: ಬೆಂಗಳೂರು ಸೇರಿ ರಾಜ್ಯಕ್ಕೆ ಪಿಡುಗಾಗಿರುವ “ಡ್ರಗ್ಸ್‌ ಮಾಫಿಯಾ’ ಕಡಿವಾಣಕ್ಕೆ ಪರಿಣಾಮಕಾರಿಯಾಗಿ ಅದರ ಮೂಲ ಬೇರಿಗೆ ಕೈ ಹಾಕಿ ಮಟ್ಟ ಹಾಕುವ ಕೆಲಸ ಆಗಬೇಕಿದೆ. ಹೀಗಾದಾಗ ಮಾತ್ರ ಕಡಿವಾಣ ಸಾಧ್ಯ. ನಕಲಿ ಕಂಪೆನಿಗಳು ಸಾರ್ವಜನಿಕರಿಗೆ ವಂಚಿಸುವ ಬಳಿಕ ಕೇಸು ದಾಖಲಿಸುವು ದಕ್ಕಿಂತ, ಹಣಕಾಸು ಕಂಪೆನಿಗಳ ಮೇಲೆ ಮುಂಜಾಗೃತೆಯಿಂದ ನಿಗಾವಹಿಸಿ, ಇತರೆ ಇಲಾಖೆಗಳೊಂದಿಗೆ ಸಹಕಾರ ಪಡೆದು ಆ ಕಂಪೆನಿಗಳ ಕಾರ್ಯಚಟುವಟಿಕೆಗಳನ್ನು ಗಮನಿಸಿ. ವಂಚನೆ ಕಂಡು ಬರುತ್ತಿದೆ ಎಂದು ಕಂಡು ಬಂದರೆ ತಡಮಾಡದೆ ಕ್ರಮ ಜರುಗಿಸಿ ಎಂದು ಸಚಿವರು ಸೂಚಿಸಿದರು.

ಕೋಮು ಸೌಹಾರ್ದತೆ ಕಾಪಾಡಿ: ಈ ಬಾರಿ ಗಣೇಶ ಚತುರ್ಥಿ ಹಾಗೂ ಮೊಹರಂ ಒಟ್ಟಿಗೆ ಬಂದಿದೆ. ಹೀಗಾಗಿ, ಎಲ್ಲಿಯೂ ಕಾನೂನು ಲೋಪವಾಗಬಾರದು. ಹಿರಿಯ ಅಧಿಕಾರಿಗಳೇ ಖುದ್ದು ಉಸ್ತುವಾರಿ ವಹಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬಗಳ ಆಚರಣೆ ನಡೆಯುವಂತೆ ನೋಡಿಕೊಳ್ಳಬೇಕು. ಸಮಾಜದ ಶಾಂತಿ ಕದಡುವ ಮತೀಯ ಶಕ್ತಿಗಳನ್ನು ಮುಲಾಜಿಲ್ಲದೆ ಹತ್ತಿಕ್ಕಿ ಎಂದು ಸೂಚಿಸಿದರು.

ಅಧಿಕಾರಿಗಳ ನಡುವೆ ಸಮನ್ವಯ ಕೊರತೆಗೆ ಗರಂ: ಹಿರಿಯ ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಇಲಾಖೆಯೊಳಗಿನ ಸಮನ್ವಯ ಕೊರತೆ ಕುರಿತು ಗೃಹ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಫೋನ್‌ ಕದ್ದಾಲಿಕೆ, ಐಎಂಎ ಬಹುಕೋಟಿ ವಂಚನೆ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರುವ ಗೃಹ ಸಚಿವರು, ಇಂತಹ ಘಟನೆಗಳು ಮರುಕಳಿಸಬಾರದು.

ಇಲಾಖೆಯೊಳಗೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ. ಜನರ ಸೇವೆ ಮಾಡುವುದು ನಿಮ್ಮ ಗುರಿಯಾಗಿರಲಿ ಎಂದು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ ಗೃಹ ಸಚಿವರು, ಸರ್ಕಾರ ಬದಲಾಗಿದೆ. ಹಿಂದಿನ ಸರ್ಕಾರದಲ್ಲಿ ಹೇಗೆ ಕೆಲಸ ನಡೆಯಿತು ಎಂಬುದು ಬೇಡ. ಅಧಿಕಾರಿಗಳು ಒಗ್ಗಟ್ಟಾಗಿ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next