ನವದೆಹಲಿ:ಲಡಾಖ್ ನಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರನ್ನು ತಡೆಯುವ ಯಾವ ಶಕ್ತಿಯೂ ಭೂಮಿ ಮೇಲೆ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ (ಸೆಪ್ಟೆಂಬರ್ 17, 2020) ಚೀನಾಕ್ಕೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಲಡಾಖ್ ನ ಎಲ್ ಎಸಿಯಲ್ಲಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಲಡಾಖ್ ನಲ್ಲಿನ ಸಾಂಪ್ರದಾಯಿಕ ಪೋಸ್ಟ್ ಗಳಲ್ಲಿ ಭಾರತೀಯ ಸೈನಿಕರಿಗೆ ಚೀನಾ ಪಹರೆ ನಡೆಸಲು ಬಿಡುತ್ತಿಲ್ಲ ಎಂಬ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್, ಆ ಕಾರಣಕ್ಕಾಗಿಯೇ ನಾವು ಚೀನಾ ಜತೆ ಹೋರಾಡುತ್ತಿರುವುದಾಗಿ ತಿಳಿಸಿದರು.
ರಾಜ್ಯಸಭೆಯಲ್ಲಿ ಭಾರತ, ಚೀನಾ ವಿವಾದದ ಕುರಿತು ಮಾತನಾಡಿದ ಅವರು, ಪೂರ್ವ ಲಡಾಖ್ ನ ವಿವಾದಿತ ಪ್ರದೇಶದಲ್ಲಿನ ಪ್ಯಾಟ್ರೋಲಿಂಗ್ (ಪಹರೆ) ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಅವರು ವಿಪಕ್ಷ ಸದಸ್ಯರಿಗೆ ಭರವಸೆ ನೀಡಿದ್ದಾರೆ. ಸಾಂಪ್ರದಾಯಿಕ ಪಹರೆ ಸ್ಥಳದಿಂದ ಭಾರತೀಯ ಸೈನಿಕರನ್ನು ಹಿಮ್ಮೆಟ್ಟಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಸದಸ್ಯ ಎಕೆ ಆ್ಯಂಟನಿ ಕೇಳಿದ್ದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ವಿಶ್ಲೇಷಣೆ: ಚಳಿಗಾಲದಲ್ಲಿ ಸೇನೆ ನಿಯೋಜನೆ ಪಕ್ಕಾ; ದುಪ್ಪಟ್ಟು ವ್ಯಯಿಸಬೇಕು ಭಾರತ
ಗಡಿ ಪ್ರದೇಶದಲ್ಲಿ ಪಹರೆ ಕಾಯುವ ಮಾದರಿ ಸಾಂಪ್ರದಾಯಿಕವಾದದ್ದು. ಈ ನಿಟ್ಟಿನಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರನ್ನು ಭೂಮಿ ಮೇಲಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಸಿಂಗ್ ಅವರು ಆ್ಯಂಟನಿ ಅವರಿಗೆ ನೀಡಿದ್ದ ವಿವರಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದೊಂದು ತುಂಬಾ ಸೂಕ್ಷ್ಮವಾದ ವಿಚಾರವಾಗಿದ್ದರಿಂದ ಗಡಿಯಲ್ಲಿನ ನಮ್ಮ ಸಿದ್ಧತೆ ಬಗ್ಗೆ ಹೆಚ್ಚು ವಿಷಯವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸದನ ಈ ಸೂಕ್ಷ್ಮ ವಿಚಾರದ ಬಗ್ಗೆ ಅರ್ಥ ಮಾಡಿಕೊಳ್ಳಲಿದೆ ಎಂಬ ಭರವಸೆ ನನ್ನದಾಗಿದೆ ಎಂದರು.
ಇದನ್ನೂ ಓದಿ: LACಯಲ್ಲಿ ಚೀನಾ ಪಡೆಗಳಿಂದ ಪಂಜಾಬಿ ಗಾನ-ಬಜಾನ ; ಏನಿದು ಕೆಂಪು ಸೇನೆಯ ಹೊಸ ಗೇಮ್ ಪ್ಲ್ಯಾನ್?