ಕೊಲ್ಲೂರು: ಕೇಂದ್ರ ಸರಕಾರ ಪ್ರತೀ 50 ಕೆ.ಜಿ. ರಾಸಾಯನಿಕ ಗೊಬ್ಬರ ಚೀಲವನ್ನು ಯುಪಿಎ ಸರಕಾರಕ್ಕಿಂತ ಕಡಿಮೆ ದರದಲ್ಲಿ ನೀಡುತ್ತಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ರೈತರಿಗೆ ಎಲ್ಲಿಯೂ ರಾಸಾಯನಿಕ ಗೊಬ್ಬರದ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.
ಕೊಲ್ಲೂರು, ಶೃಂಗೇರಿ ಹಾಗೂ ಹೊರನಾಡು ಕ್ಷೇತ್ರ ಸಂದರ್ಶನ ಮಾಡಿ ರಾಜ್ಯ ಎದುರಿಸುತ್ತಿರುವ ತೀವ್ರ ಬರಗಾಲದಿಂದ ತತ್ತರಿಸಿರುವ ಜನರಿಗೆ ವರುಣನ ಕೃಪೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿ ಸಲು ಕೊಲ್ಲೂರಿಗೆ ಆಗಮಿಸಿದ ಸಂದರ್ಭ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜಕಾರಣಕ್ಕೆ ಅಲ್ಪಸಂಖ್ಯಾಕರನ್ನು ಓಲೈಸುವ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರ ವಿಚಾರ ಅರ್ಥ ಮಾಡಿಕೊಂಡು ಹೇಳಿಕೆ ನೀಡಲಿ ಎಂದರು. ಕೇಂದ್ರ ಸರಕಾರದಿಂದ ಬರಗಾಲ ಹಾಗೂ ಅಭಿ ವೃದ್ಧಿ ಸಲುವಾಗಿ 4,500 ಕೋ. ರೂ. ಧನಸಹಾಯ ನೀಡಲಾಗಿದೆ. 550 ಕೋ. ರೂ. ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಳಕೆ ಮಾಡದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್ ಆಡಳಿತಾವಧಿಯಲ್ಲಿ 2 ಬಾರಿ ಸಾಲ ಮನ್ನಾ ಮಾಡಲಾಗಿದೆ. ತೀವ್ರ ಬರಗಾಲವಿರುವ ಈ ಪರಿಸ್ಥಿತಿಯಲ್ಲಿ ಕೃಷಿ ಸಾಲ ಮನ್ನಾ ಮಾಡಲು ರಾಜ್ಯ ಸರಕಾರ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಎಲ್ಲ ಬಿಜೆಪಿ ನಾಯಕರು ಒಂದಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಜನಪರ ಕಾಳಜಿ, ಕೇಂದ್ರ ಸರಕಾರದ 3 ವರುಷದ ಸಾಧನೆ ರಾಷ್ಟ್ರಮಟ್ಟದಲ್ಲಿ ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರಕಾರ ಮುಂದಿನ 2 ವರುಷ ಪೂರ್ಣಗೊಳಿಸುವುದರೊಳಗೆ ಇನ್ನಷ್ಟು ಜನಪರ ಕಾಳಜಿಯ ಕಾರ್ಯಕ್ರಮದೊಡನೆ ಜನ ಮೆಚ್ಚುಗೆ ಗಳಿಸಲಿದೆ ಎಂದರು.
ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ. ಸದಸ್ಯ ಬಾಬು ಹೆಗ್ಡೆ, ಬೈಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಶಿವರಾಜ ಪೂಜಾರಿ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ವ್ಯವಸ್ಥಾಪನ ಸಮಿತಿ ಸದಸ್ಯ ರಮೇಶ್ ಗಾಣಿಗ, ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ನಾರಾಯಣ ನಾಯಕ್, ಜಿಲ್ಲಾ ಖಜಾಂಚಿ ರವಿ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.