ರಾಧಿಕಾಗೆ ಕೋವಿಡ್ 19 ಭಯ. ಲಾಕ್‌ಡೌನ್ ತೆಗೆದ ಮೇಲಂತೂ ಭಯ ಹೆಚ್ಚಿದೆ. ಗಂಡ- ಮಕ್ಕಳು ಹೊರಗೆ ಹೊರ ಟರೆ ಆಕ್ಷೇಪ ಒಡ್ಡುತ್ತಾರೆ. ಗುಡುಗು ಸಹಿತ ಮಳೆ ಬಂದಾಗ, ಮಗುವಿನಂತೆ ಹೆದರಿಕೊಂಡು ಮಲಗಿಬಿಡುತ್ತಾರೆ. ಆಗ ಪಕ್ಕದಲ್ಲಿ ಯಾರಾದರೂ ಇರಲೇಬೇಕು. ಗಂಡ-ಮಕ್ಕಳು ಎಷ್ಟೊತ್ತು ಇವರ ಪಕ್ಕದಲ್ಲಿ ಕುಳಿತಿರಲು ಸಾಧ್ಯ? ಮನೋವೈದ್ಯರು ಮಾತ್ರೆಗಳನ್ನು ಬರೆದುಕೊಟ್ಟು, ಭಯ ನಿವಾರಣೆಗೆ ನನ್ನ ಬಳಿ ಕೌನ್ಸೆಲಿಂಗ್‌ಗೆ ಕಳಿಸಿದ್ದರು.
ಮೂವತ್ತೆಂಟು ವರ್ಷದ ರಾಧಿಕಾಗೆ ಭಯದ ಸಮಸ್ಯೆ ಈ ಮೊದಲು ಕಾಡಿದ್ದ ನೆನಪಿಲ್ಲ. ಆದರೂ ಅವರಿಗೆ ಈಗ ಯಾಕೆ ಅಂತಹ ಸಮಸ್ಯೆ ಜತೆಯಾಯಿತು ಎಂದು ತಿಳಿಯಲು ಹೊರಟಾಗ, ಆಕೆ ಬಾಲ್ಯದಲ್ಲಿ ನಡೆದ ಪ್ರಸಂಗಗಳನ್ನು ತೆರೆದಿಟ್ಟರು. ಆಕೆ ಚಿಕ್ಕವಳಿದ್ದಾಗ ತಾತನ ತಮ್ಮ, ಮುದ್ದಾದ ಮಗು ರಾಧಿಕಾಳನ್ನು ಹಿಚುಕಿ ಮುದ್ದು ಮಾಡುತ್ತಿದ್ದರೆ, ಇವಳಿಗೆ ಉಸಿರುಕಟ್ಟಿದ ಅನುಭವ. ಆ ಹುಲಿ ಮುದ್ದು ಇವಳಿಗೆ ಅಳು ತರಿಸುತ್ತಿತ್ತು.
ಸ್ವತ್ಛಂದ ಮನಸ್ಸಿನ ಮಗುವಿನ ವ್ಯಕ್ತಿತ್ವದಲ್ಲಿ ಉದ್ವಿಘ್ನತೆಯನ್ನು ದೊಡ್ಡವರು ಹುಟ್ಟುಹಾಕುತ್ತಾ ರೆ. ಹಗಲುಕನಸು ಕಾಣುವ ಎಳೆಯ ಮಕ್ಕಳನ್ನು ಪಕ್ಕನೆ ಹಿಡಿದು, ವಿಕೃತ ನಗು ನಕ್ಕರೆ, ವ್ಯಕ್ತಿತ್ವದಲ್ಲಿ ಗಾಬರಿ ಮೊಳಕೆಯೊಡೆಯುತ್ತದೆ. ರಾಧಿಕಾ ಎಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ, ಮುಂದೆ ಓದುವ ಇಚ್ಛೆ ಹೊಂದಿದ್ದರು. ಆ ಕುರಿತು ತಯಾರಿಯನ್ನೂ ನಡೆಸಿದ್ದರು. ಹಾಗೆಯೇ, ತಾವು ಸಹಪಾಠಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ತಂದೆಗೆ ತಿಳಿಸಿದಾಗ, ಮುಂಗೋಪಿ ತಂದೆ ಯಾರಿಗೂ ತಿಳಿಸದೆ, ಪಕ್ಕನೆ ಬೇರೊಂದು ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು.
ಆ ಮೂಲಕ, ಓದು- ಕೆಲಸದ ಕನಸನ್ನು ಮಣ್ಣುಪಾಲು ಮಾಡಿದ್ದರು. ಮದುವೆಯಾದ ಎರಡು ವರ್ಷದಲ್ಲೇ ಎರಡು ಮಕ್ಕಳಾದವು. ಪರಿಣಾಮ, ಮುಂದಕ್ಕೆ ಓದುವುದಿರಲಿ, ಕೆಲಸಕ್ಕೆ ಸೇರಲೂ ಸಾಧ್ಯವಾಗಲಿಲ್ಲ. ಈಗ ಆಕೆಯ ಸಹಪಾಠಿಗಳೆಲ್ಲಾ ಒಳ್ಳೊಳ್ಳೆಯ ಹುದ್ದೆಯಲ್ಲಿದ್ದಾರೆ. ಅದನ್ನು ನೆನೆಸಿಕೊಂಡಾಗ ರಾಧಿಕಾಗೆ ಹೊಟ್ಟೆ ಯುರಿ. ವಿದ್ಯಾರ್ಹತೆ ಇದ್ದರೂ, ವೃತ್ತಿಯನ್ನು ರೂಢಿಸಿಕೊಳ್ಳಲಿಲ್ಲ ಎಂಬ ಖನ್ನತೆ, ಬೇರೆ ಪ್ರವೃತ್ತಿಯ ಕಡೆಗೂ ಗಮನ ಕೊಡಲಿಲ್ಲ ಎಂಬ ವಿಷಾದ,
ಈಗ ಏನೂ ಮಾಡಲಾಗುವುದಿಲ್ಲ ಎಂಬ ಅಸಹಾ ಯಕತೆ, ಇರುವ ಜೀವನವನ್ನೂ ಕೋವಿಡ್ 19 ಕಿತ್ತುಕೊಂಡರೆ ಎಂಬ ಚಿಂತೆ, ಆಕೆಯಲ್ಲಿ ಸಾಂದರ್ಭಿಕ ಖನ್ನತೆಯನ್ನು ಜಾಸ್ತಿ ಮಾಡಿದೆ. ಚಿಕ್ಕ ವಯಸ್ಸಿನಲ್ಲಿ ತಾತನ ತಮ್ಮ ಅಥವಾ ತಂದೆ ತನ್ನ ಜೀವನದ ಮೇಲೆ ಸಾಧಿಸಿದ್ದ ಹಿಡಿತವನ್ನು ಈಗ ಕೋವಿಡ್ 19 ಸಾಧಿಸಿದರೆ ಎಂಬ ಹಿಂಜರಿಕೆ, ರಾಧಿಕಾಳಲ್ಲಿ regressive ವ್ಯಕ್ತಿತ್ವ ಮತ್ತು ವರ್ತನೆ ಯನ್ನು ಹುಟ್ಟುಹಾಕಿದೆ.
ಜೀವನ ನಿಯಂತ್ರಣ ತಪ್ಪುತ್ತಿದೆ ಎನಿಸಿದಾಗ ಭಯ ಉತ್ಪತ್ತಿಯಾಗುತ್ತದೆ ಎಂಬುದು ಅರ್ಥವಾದಮೇಲೆ, ರಾಧಿಕಾ ಪ್ರೌಢಿಮೆ ಹೊಂದಿದರು. ಕೆಲವು ಆನ್ ಲೈನ್ ತರಗತಿಗಳಿಗೆ ಸೇರಿಕೊಂಡರು. ಸ್ನೇಹಿತರ ಸಹಾಯದಿಂದ ಯಾವುದಾದರೂ ಕೆಲಸಕ್ಕೆ ಸೇರಬಹುದೆಂಬ ಆತ್ಮವಿಶ್ವಾಸ ಹೆಚ್ಚಾಯಿತು. ಆತಂಕದ ಘಟನೆಗಳನ್ನು ಎದುರಿಸಲು ಮತ್ತೆ ಮತ್ತೆ ಸಜ್ಜಾಗಬೇಕು ಎಂದು ಅರಿವಾಯಿತು. ಕೊನೆಯ ಮಾತು: ಜೀವನದಲ್ಲಿ ಕ್ಷಮಿಸಲಾಗದವರನ್ನು ಮರೆಯಬೇಕು. ಮರೆಯಲಾಗದವರನ್ನು ಕ್ಷಮಿಸಬೇಕು.
* ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ