Advertisement
ಕೆರೆಗಳ ಅಸಮರ್ಪಕ ನಿರ್ವಹಣೆ ಹಾಗೂ ಒತ್ತುವರಿಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ವಿಫಲವಾದ ಹಿನ್ನೆಲೆಯಲ್ಲಿ, ಕೆರೆಗಳ ಅಂಚಿನಿಂದ 75 ಮೀಟರ್ ಬಫರ್ ವ್ಯಾಪ್ತಿ ಕಾಯ್ದುಕೊಳ್ಳಬೇಕೆಂದು 2016ರ ಮೇ 4ರಂದು ಎನ್‌ಜಿಟಿ ಮಹತ್ವದ ಆದೇಶ ಹೊರಡಿಸಿತ್ತು. ಆದರೆ, ಪಾಲಿಕೆ ಮಾತ್ರ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸುವ ಆಸಕ್ತಿ ತೋರುತ್ತಿಲ್ಲ.
Related Articles
Advertisement
ಅಧಿಕಾರಿಗಳ ಕುಮ್ಮಕ್ಕು: ಎನ್‌ಜಿಟಿ ಆದೇಶ ಹೊರಡಿಸುವುದಕ್ಕೂ ಮೊದಲೇ ಕಟ್ಟಡ ನಕ್ಷೆ ಪಡೆದು ಕಟ್ಟಡ ನಿರ್ಮಿಸದವರಿಗೆ ಅನುಮತಿ ನೀಡಬೇಕೆ ಬೇಡವೇ? ಹಾಗೂ ಈಗಾಗಲೇ ಕಟ್ಟಡ ನಿರ್ಮಿಸಿಕೊಂಡವರಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಬೇಕೇ ಬೇಡವೇ ಎಂಬ ಕುರಿತು ಹಲವಾರು ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಆಸ್ತಿಯ ಮಾಲೀಕರಿಗೆ ಪಾಲಿಕೆಯ ಅಧಿಕಾರಿಗಳೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಳ್ಳುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
34 ಸಾವಿರ ಫ್ಲಾಟ್‌ಗಳಿಗೆ ಸಂಕಷ್ಟ: ಎನ್‌ಜಿಟಿ ಆದೇಶದಿಂದಾಗಿ ನಗರದ 9 ವಲಯಗಳಲ್ಲಿ 152 ಪ್ರಮುಖ ಯೋಜನೆಗಳ 34,853 ಫ್ಲಾಟ್‌ಗಳು (ಯುನಿಟ್‌ಗಳು) ಸಂಕಷ್ಟ ಎದುರಿಸುವಂತಾಗಿದೆ. ಎನ್‌ಜಿಟಿ ಆದೇಶಕ್ಕೆ ಮೊದಲು ನಕ್ಷೆ ಪಡೆದು ಕಾಮಗಾರಿ ಆರಂಭಿಸದ, ಕಾಮಗಾರಿ ಪೂರ್ಣಗೊಳಿಸಿ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಹಾಗೂ ಹೊಸ ಕಟ್ಟಡಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಪಾಲಿಕೆಯಿಂದ ಯಾವುದೇ ಅನುಮತಿ ಹಾಗೂ ಪ್ರಮಾಣ ಪತ್ರ ನೀಡಲು ಬರುವುದಿಲ್ಲ. ಇದರಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ.
ಮರು ಪರಿಶೀಲನೆಗೆ ಅರ್ಜಿ?: ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ಮಾತ್ರ ಕೆರೆಯಿಂದ 75 ಮೀಟರ್ ಬಫರ್ ವ್ಯಾಪ್ತಿ ಎಂದು ಎನ್‌ಜಿಟಿ ಆದೇಶಿಸಿದೆ. ಆದರೆ, ದೆಹಲಿ ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ಈ ವ್ಯಾಪ್ತಿ 15-20 ಮೀಟರ್‌ಗೆ ನಿಗದಿಪಡಿಸಲಾಗಿದೆ. ಜತೆಗೆ ಕೆರೆಯಿಂದ 75 ಮೀಟರ್ ಜಾರಿಗೊಳಿಸಲು ಮುಂದಾದರೆ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಆದೇಶವನ್ನು ಮರು ಪರಿಶೀಲಿಸುವಂತೆ ಎನ್‌ಜಿಟಿಯನ್ನು ಕೋರುವುದಾಗಿ ಈ ಹಿಂದೆ ಉಪಮುಖ್ಯಮಂತ್ರಿಗಳು ತಿಳಿಸಿರುವುದು ಮತ್ತಷ್ಟು ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಎನ್‌ಜಿಟಿ ಆದೇಶದಲ್ಲೇನಿದೆ?: ಕೆರೆಗಳ ಸಂರಕ್ಷಣೆಗಾಗಿ ಕೆರೆಯ ಅಂಚಿನಿಂದ 75 ಮೀಟರ್, ಪ್ರಾಥಮಿಕ ಕಾಲುವೆಯ ಅಂಚಿನಿಂದ 50 ಮೀಟರ್, ದ್ವೀತಿಯ ಕಾಲುವೆಯ ತಡೆಗೋಡೆಯಿಂದ 35 ಮೀಟರ್ ಹಾಗೂ ತೃತೀಯ ಕಾಲುವೆ ಅಂಚಿನಿಂದ 25 ಮೀಟರ್ ಪ್ರದೇಶವನ್ನು ಬಫರ್ ವ್ಯಾಪ್ತಿ ಎಂದು ಕಾಯ್ದಿರಿಸಬೇಕು. ಬಫರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಸುವಂತಿಲ್ಲ ಎಂದು ಎನ್‌ಜಿಟಿ ಆದೇಶ ನೀಡಿದೆ.
* ವೆಂ.ಸುನೀಲ್‌ಕುಮಾರ್