ಬೆಂಗಳೂರು: ರಾಜಧಾನಿಯಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಚಿನ್ನಾಭರಣ ಅಂಗಡಿ ದೋಚುವ ಯತ್ನ ವಿಫಲವಾಗಿದೆ. ಅಂಗಡಿಯಲ್ಲಿದ್ದ ಮಹಿಳೆಯ ದಿಟ್ಟತನದ ಪ್ರತಿರೋಧಕ್ಕೆ ಹೆದರಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅತ್ಯಂತ ಜನನಿಬಿಡ ಪ್ರದೇಶ ಪ್ಯಾಲೇಸ್ ಗುಟ್ಟಹಳ್ಳಿನಲ್ಲಿ ಇರುವ ‘ಸಾಮ್ರಾಟ್’ ಜ್ಯುವೆಲರ್ನಲ್ಲಿ ಈ ದರೋಡೆ ಯತ್ನ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯ 200 ಮೀಟರ್ ದೂರದಲ್ಲಿಯೇ ನಡೆದಿರುವ ಗುಂಡಿನ ದಾಳಿ ಮೂಲಕ ದರೋಡೆ ಯತ್ನ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಘಟನಾ ಸ್ಥಳದಲ್ಲಿ ಒಂದು ಗುಂಡು, ಆರೋಪಿಯೊಬ್ಬನ ಮೊಬೈಲ್ ಫೋನ್ ದೊರೆತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೈಯಾಲಿಕಾವಲ್ ಠಾಣೆ ಪೊಲೀಸರು ತನಿಖೆ ಮುಂದು ವರಿಸಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸಿ ಬಂದ ಆಗಂತುಕರು!: ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ‘ಸಾಮ್ರಾಟ್ ಜ್ಯುವೆಲರ್’ನ ಮಳಿಗೆಯಲ್ಲಿ ಮಾಲೀಕ ಆಶಿಶ್ ಹಾಗೂ ಅವರ ಪತ್ನಿ ರಾಖೀ ಇಬ್ಬರೇ ಇದ್ದರು. ಈ ವೇಳೆ ಇಬ್ಬರು ಯುವಕರು ಮಳಿಗೆ ಪ್ರವೇಶಿಸಿದ್ದು ಇದರಲ್ಲಿ ಒಬ್ಟಾತ ಹೆಲ್ಮೆಟ್ ಧರಿಸಿದ್ದ.
ಮಳಿಗೆಗೆ ಬಂದ ಈ ಇಬ್ಬರು ಆಗಂತುಕರು ರಾಖೀ ಅವರನ್ನು ಚಿನ್ನದ ಸರ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ರಾಖೀ ಅವರು ಕೆಲ ಮಾದರಿಯ ಚಿನ್ನದ ಸರ ತೋರಿಸಿದ್ದಾರೆ. ಅದನ್ನು ನೋಡುತ್ತಿದ್ದ ವೇಳೆಯಲ್ಲೇ ಒಬ್ಟಾತ ಗನ್ ತೆಗೆದು ಮೇಲ್ಛಾವಣಿಗೆ ಗುಂಡು ಹಾರಿಸಿ ಹೆದರಿಸಿದ್ದಾನೆ. ದುಷ್ಕರ್ಮಿಯ ಹಿಡಿದಿದ್ದ ಗನ್‌ಗೂ ವಿಚಲಿತರಾಗದ ರಾಖೀ ಅವರು ಕೂಡಲೇ ಅಲ್ಲಿದ್ದ ಚೇರ್ ಎತ್ತಿ ಅವನ ಮೇಲೆ ಎಸೆದಿದ್ದಾರೆ. ಮತ್ತೂಂದು ಬದಿಯಲ್ಲಿದ್ದ ಆಶಿಶ್ ಪತ್ನಿ ಸಹಾಯಕ್ಕೆ ಬಂದು, ಆರೋಪಿಗಳನ್ನು ಹಿಡಿದುಕೊಳ್ಳಲು ಯತ್ನಿಸಿ ದ್ದಾರೆ. ಇವರಿಬ್ಬರ ಪ್ರತಿರೋಧಕ್ಕೆ ಹೆದರಿದ ದುಷ್ಕರ್ಮಿಗಳು ಹೊರಗೆ ಓಡಿದ್ದಾರೆ. ಅವರನ್ನು ಆಶಿಶ್, ಚೋರ್ ಚೋರ್ ಎಂದು ಕೂಗುತ್ತಾ ಬೆನ್ನಟ್ಟಿದ್ದಾರೆ.
ಸ್ಥಳೀಯರ ಸಹಕಾರ: ದರೋಡೆಕೋರರನ್ನು ಸ್ಥಳೀಯರು ಕೂಡ ಬೆನ್ನಟ್ಟಿದ್ದಾರೆ. ರಸ್ತೆಯಲ್ಲಿ ನಿಂತಿದ್ದ ಒಬ್ಬನೂ ಸೇರಿ ಮೂವರು ದುಷ್ಕರ್ಮಿಗಳು ಮುಖ್ಯ ರಸ್ತೆಯಲ್ಲಿ ಗುಟ್ಟಹಳ್ಳಿ ಕಡೆ ಓಡತೊಡಗಿದ್ದಾರೆ. ಸ್ವಲ್ಪವೇ ದೂರದಲ್ಲಿ ಆರೋಪಿಯೊಬ್ಬ ಬೆನ್ನಟ್ಟಿದವರ ಕಡೆ ಹೆಲ್ಮೆಟ್ ಎಸೆದಿದ್ದಾನೆ. ಜತೆಗೆ ಆತನ ಮೊಬೈಲ್ ಫೋನ್ ಕೂಡ ಬಿದ್ದು ಹೋಗಿದೆ. ಸ್ಥಳೀಯರು ಬೆನ್ನಟ್ಟಿದ್ದರೂ ಕೈಗೆ ಸಿಗದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.