Advertisement

ಭತ್ತ ಖರೀದಿ ಕೇಂದ್ರದತ್ತ ರೈತರ ಸುಳಿವೇ ಇಲ್ಲ !

11:21 AM Jan 03, 2020 | Suhan S |

ದಾವಣಗೆರೆ: 2019-20ನೇ ಸಾಲಿನ ಕನಿಷ್ಟ ಬೆಂಬಲ ಯೋಜನೆಯಡಿ ಭತ್ತ ಖರೀದಿ ನೋಂದಣಿ ಕೇಂದ್ರ ಪ್ರಾರಂಭವಾಗಿದ್ದರೂ ಒಬ್ಬರೇ ಒಬ್ಬರು ರೈತರು ನೋಂದಣಿ ಆಗಿಲ್ಲ!.

Advertisement

ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಪೊಲೀಸ್‌ ಠಾಣೆ ಎದುರು ಪ್ರಾರಂಭ ಆಗಿರುವ ಕೇಂದ್ರಕ್ಕೆ ಈವರೆಗೆ ರೈತರು ಬಂದಿಲ್ಲ. ಖರೀದಿ ಕೇಂದ್ರದ ಮೂಲಕ ಭತ್ತ ಮಾರಾಟ ಮಾಡುವ ಬಗ್ಗೆ ನೋಂದಣಿ ಮಾಡಿಸಿಲ್ಲ. ಕನಿಷ್ಟ ಬೆಂಬಲ ಯೋಜನೆಯಡಿ ಭತ್ತ, ರಾಗಿ ಖರೀದಿ ಕೇಂದ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಳೆದ ಡಿ. 20ರಂದು ಸಭೆ ನಡೆಸಿ, ಡಿ.26 ರಿಂದ ಜ.10ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿತ್ತು. ಆದರೆ, ಪ್ರಕ್ರಿಯೆ ಪ್ರಾರಂಭವಾಗಿದ್ದೇ 4 ದಿನ ತಡವಾಗಿ ಅಂದರೆ ಡಿ.30ಕ್ಕೆ. ಖರೀದಿ ಕೇಂದ್ರ ಅಧಿಕೃತವಾಗಿಯೇ ಪ್ರಾರಂಭವಾಗಿ 3 ದಿನ ಕಳೆದರೂ ರೈತರು ಭತ್ತ ಮಾರಾಟದ ನೋಂದಣಿ ಮಾಡಿಸಿಲ್ಲ. ರೈತರು ಕೇಂದ್ರದಲ್ಲಿ ಭತ್ತ ಮಾರಾಟದ ನೋಂದಣಿ ಮಾಡಿಸದೇ ಇರದೇ ಇರಲು ಕಾರಣ ಕೃಷಿ ಇಲಾಖೆ ನೀಡಬೇಕಾಗಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಫ್ರೂಟ್ಸ್‌) 13 ಅಂಕಿಗಳ… ಗುರುತಿನ ಸಂಖ್ಯೆ ಕಡ್ಡಾಯ ಮಾಡಿರುವುದು.

ರೈತರು ಕೃಷಿ ಇಲಾಖೆಯಿಂದ (ಫ್ರೂಟ್ಸ್‌) ಗುರುತಿನ ಸಂಖ್ಯೆಯನ್ನು ಖರೀದಿ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರು ಪಡಿಸಬೇಕು. ಆ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು ನೋಂದಣಿ ಸಾಧ್ಯವಾಗುತ್ತದೆ. (ಫ್ರೂಟ್ಸ್‌) ಗುರುತಿನ ಸಂಖ್ಯೆ ಇದ್ದರೆ ಮಾತ್ರವೇ ರೈತರ ವಿವರದ ಲಾಗಿನ್‌ ಸಾಧ್ಯ. ಗುರುತಿನ ಸಂಖ್ಯೆ ಇಲ್ಲದೇ ಹೋದಲ್ಲಿ ಸಾಫ್ಟ್‌ವೇರ್‌ನಲ್ಲಿ ಲಾಗಿನ್‌ ಆಗುವುದೇ ಇಲ್ಲ.

ಗುರುತಿನ ಸಂಖ್ಯೆ(ಫ್ರೂಟ್ಸ್‌) ಬಗ್ಗೆ ಹಲವಾರು ರೈತರಿಗೆ ಮಾಹಿತಿಯೇ ಇಲ್ಲ. ರೈತರು(ಫ್ರೂಟ್ಸ್‌) ಸಂಖ್ಯೆ ಪಡೆಯಲು ಬಂದಿಲ್ಲ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು. ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ 1,815, ಎ ಗ್ರೇಡ್‌ ಭತ್ತಕ್ಕೆ 1,835 ನಿಗದಿಪಡಿಸಿದೆ. ಒಬ್ಬ ರೈತ 40 ಕ್ವಿಂಟಲ್‌ವರೆಗೆ ಭತ್ತವನ್ನು ಮಾತ್ರ ಖರೀದಿ ಕೇಂದ್ರಕ್ಕೆ ತರಬಹುದು. ಇವೇ ಮಾನದಂಡಗಳು ರೈತರು ಖರೀದಿ ಕೇಂದ್ರಗಳತ್ತ ನಿರಾಸಕ್ತಿ ತೋರಲು ಪ್ರಮುಖ ಕಾರಣ.

ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ 1,600 ರಿಂದ 2,200 ರೂ. ಧಾರಣೆ ಇದೆ. ಖರೀದಿ ಕೇಂದ್ರದ ಧಾರಣೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಯಲ್ಲಿನ ವ್ಯತ್ಯಾಸವೂ ರೈತರು ಖರೀದಿ ಕೇಂದ್ರದತ್ತ ಮುಖ ಮಾಡುತ್ತಿಲ್ಲ. ಖರೀದಿ ಕೇಂದ್ರದ ಮೂಲಕ ಭತ್ತ ಮಾರಾಟ ಮಾಡುವಂತಹ ರೈತರ ಬಯೋಮೆಟ್ರಿಕ್‌, ತೇವಾಂಶ, ಗುಣಮಟ್ಟ ಪರೀಕ್ಷೆ, ಖರೀದಿ ಕೇಂದ್ರಕ್ಕೆ ನೀಡಿದ 3 ದಿನಗಳ ನಂತರ ಖಾತೆಗೆ ನೇರವಾಗಿ ಹಣ ಪಾವತಿ ಮಾಡಲಾಗುವುದು.

Advertisement

ಫ್ರೂಟ್ಸ್‌ ಸಂಖ್ಯೆ ಕಡ್ಡಾಯ, 40 ಕ್ವಿಂಟಲ್‌ ಮಿತಿ, ತೇವಾಂಶ, ಗುಣಮಟ್ಟ ಪರೀಕ್ಷೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಬೆಲೆಯಲ್ಲಿನ ವ್ಯತ್ಯಾಸ..ಒಳಗೊಂಡಂತೆ ಇತರೆ ಕಾರಣದಿಂದ ಖರೀದಿ ಕೇಂದ್ರಕ್ಕೆ ರೈತರು ಸುಳಿಯದಂತಾಗಿದೆ. ಕನಿಷ್ಟ ಬೆಂಬಲ ಯೋಜನೆಯಡಿ ಖರೀದಿ ಕೇಂದ್ರಕ್ಕೆ ರೈತರು ಬರದೇ ಇರಬಹುದು. ಕೇಂದ್ರ ಸರ್ಕಾರವೇ ನಿಗದಿಪಡಿಸಿರುವ ಬೆಲೆಗಿಂತಲೂ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಆಗುವುದಿಲ್ಲ. ಒಂದೊಮ್ಮೆ ಕಡಿಮೆಯಾದರೂ ರೈತರು ಪ್ರಶ್ನಿಸುತ್ತಾರೆ. ಹಾಗಾಗಿ ಕೇಂದ್ರಗಳಿಂದ

ರೈತರಿಗೆ ಅನುಕೂಲ ಆಗುತ್ತದೆ. ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಸದೇ ಇರುವಂತೆ ಭತ್ತ ಖರೀದಿ ಮಾಡಬೇಕಾದ ಹಲ್ಲರ್‌(ಅಕ್ಕಿ ಗಿರಣಿ)ಯವರು ನೋಂದಣಿ ಮಾಡಿಸಿಲ್ಲ. ಈ ಎಲ್ಲಾ ಅಂಶ ಪರಿಗಣಿಸಿದರೆ ಖರೀದಿ ಕೇಂದ್ರದ ಪ್ರಕ್ರಿಯೆಯೇ ವೃಥಾನಾ…? ಎಂಬ ಪ್ರಶ್ನೆ ಉದ್ಭವಿಸದೇ ಇರದು.

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next