ಹೈದರಾಬಾದ್: ಐಪಿಎಲ್‌ನಲ್ಲಿ ಅತ್ಯಧಿಕ ಆರು ಶತಕ ಬಾರಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿದೂಗಿಸಿದ ಸಡಗರದಲ್ಲಿದ್ದಾರೆ ವಿರಾಟ್ ಕೊಹ್ಲಿ. ಹೈದರಾಬಾದ್ ಎದುರಿನ ಮಹತ್ವದ ಪಂದ್ಯದಲ್ಲಿ ಅಮೋಘ 100 ರನ್ ಕೊಡುಗೆ ಸಲ್ಲಿಸಿ ಆರ್‌ಸಿಬಿಗೆ ಅಮೋಘ ಗೆಲುವನ್ನು ತಂದಿತ್ತ ಖುಷಿಯೂ ಅವರದಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ತಾನು ಕೆಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು. ಅನಗತ್ಯ ಹೊಡೆತಗಳಿಗೆ ಮುಂದಾಗದಿರುವುದು, ಫ್ಯಾನ್ಸಿ ಹೊಡೆತಗಳಿಂದ ದೂರ ಉಳಿಯುವುದು ಇವುಗಳಲ್ಲಿ ಮುಖ್ಯವಾದುದು. ಮುಂದಿನ ತಿಂಗಳು ಆಸ್ಟ್ರೇಲಿಯ ವಿರುದ್ಧ ಆಡಲಾಗುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಿನ್ನೆಲೆಯಲ್ಲಿ ತನ್ನ ಬ್ಯಾಟಿಂಗ್ ಕೌಶಲದತ್ತ ಗಮನ ಹರಿಸಬೇಕಿದೆ ಎಂದರು.
“ಜನರು ಏನು ಹೇಳುತ್ತಿದ್ದಾರೆ ಎಂಬ ಕುರಿತು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಲ್ಲ ಅವರವರ ಅಭಿಪ್ರಾಯ. ನಾನು ಫ್ಯಾನ್ಸಿ ಶಾಟ್ ಬಾರಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಇದರಿಂದ ಅನಗತ್ಯವಾಗಿ ವಿಕೆಟ್ ಕೈಚೆಲ್ಲುವುದು ನನಗೆ ಇಷ್ಟವಿಲ್ಲ. ಏಕೆಂದರೆ ಮುಂದಿನ ತಿಂಗಳು ನಾವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕಿದೆ. ನನ್ನ ಬ್ಯಾಟಿಂಗ್ ಕೌಶಲದತ್ತ ಹೆಚ್ಚಿನ ಗಮನ ಹರಿಸಬೇಕಿದೆ’ ಎಂಬುದಾಗಿ ಕೊಹ್ಲಿ ಹೇಳಿದರು.
500 ರನ್ ಸಾಧನೆ
ವಿರಾಟ್ ಕೊಹ್ಲಿ 2023ರ ಐಪಿಎಲ್‌ನಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸುತ್ತ ರನ್ ಪ್ರವಾಹ ಹರಿಸುತ್ತ ಬಂದಿದ್ದಾರೆ. ಈಗಾಗಲೇ 500 ರನ್ ಗಡಿ ದಾಟಿದ್ದಾರೆ (538 ರನ್). ಆದರೆ ಅವರ ಸ್ಟ್ರೈಕ್‌ರೇಟ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಮೂಡಿದ್ದವು. ಇದನ್ನು ನಿವಾರಿಸಿಕೊಳ್ಳಲೋ ಎಂಬಂತೆ ಹೈದರಾಬಾದ್ ವಿರುದ್ಧ ಕೊಹ್ಲಿ ಆರಂಭದಿಂದಲೇ ಮುನ್ನುಗ್ಗಿ ಬಾರಿಸತೊಡಗಿದರು. ಭುವನೇಶ್ವರ್ ಕುಮಾರ್ ಅವರ ಪ್ರಥಮ ಓವರ್‌ನ ಮೊದಲೆರಡು ಎಸೆತಗಳನ್ನು ಬೌಂಡರಿಗೆ ಬಡಿದಟ್ಟಿ ತಮ್ಮ ಇರಾದೆ ಏನೆಂಬುದನ್ನು ಸ್ಪಷ್ಟಪಡಿಸಿದರು.
ಕೊಹ್ಲಿ-ಡು ಪ್ಲೆಸಿಸ್ ಇಬ್ಬರೇ ಸೇರಿ ಹೈದರಾಬಾದ್ ಮೊತ್ತವನ್ನು ಮೀರಿ ನಿಲ್ಲುವ ಸೂಚನೆ ಲಭಿಸಿತ್ತು. 17.5 ಓವರ್‌ಗಳಲ್ಲಿ ಈ ಆರಂಭಿಕರು 172 ರನ್ ರಾಶಿ ಹಾಕಿದ್ದರು. ಕೊಹ್ಲಿ ಗಳಿಕೆ 63 ಎಸೆತಗಳಿಂದ ಭರ್ತಿ 100 ರನ್ (12 ಬೌಂಡರಿ, 4 ಸಿಕ್ಸರ್).