ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ ತಲಗೂರು ಗ್ರಾಮದ ಬಡ ಮಹಿಳೆಗೆ ಗ್ರಾಮ ಪಂಚಾಯತ್ ಹಾಗೂ ಸರ್ಕಾರದಿಂದ ಯಾವುದೇ ಸರ್ಕಾರಿ ಸೌಲಭ್ಯ ಹಾಗೂ ನಿವೇಶನ ಒದಗಿಸಿ ಕೊಡಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮರ್ಕಲ್ ಗ್ರಾಮದ ವ್ಯಕ್ತಿಯೊರ್ವ ಅಪಪ್ರಚಾರ ಮಾಡಿದ್ದರು. ಈ ಕುರಿತು ನಿಜಾಂಶ ತಿಳಿಯಲು ಗ್ರಾಮ ಪಂಚಾಯತ್ ನ ತಂಡ ಕುಟುಂಬದ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸತ್ಯಾಂಶ ಹೊರ ಬಿದ್ದಿದೆ.
ಗ್ರಾಮ ಪಂಚಾಯತ್ ನಿಂದ ಈಗಾಗಲೇ ಅವರಿಗೆ ಮನೆ ಕಟ್ಟಲು ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕೂಡ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮಾಡಿಕೊಟ್ಟಿದ್ದಾರೆ. ಆದರೂ ಕೂಡ ಪ್ರಚಾರದ ಗೀಳಿಗಾಗಿ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮನೆ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗಿದ್ದು, ಈಗಿರುವ ಮನೆಯ ಮುಂಭಾಗದಲ್ಲಿ ಫೌಂಡೇಶನ್ ಕೂಡ ಹಾಕಲಾಗಿದೆ. ಗ್ರಾಮ ಪಂಚಾಯತ್ ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಾಂಕ್ರಾಮಿಕಗಳ ತಡೆಗೆ ಸಂಶೋಧನಾ ಕೇಂದ್ರ “ದೀರ್ಘಾಯುಷ್ಯ” ಕ್ಕೆ ನಟ ಪುನೀತ್ ಹೆಸರು
ಕುವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಮಂಗಳವಾರ ಸಂಜೆ ರತ್ನಮ್ಮ ರವರ ಮನೆಗೆ ಭೇಟಿ ನೀಡಿ ಮನೆಯನ್ನು ಅತೀ ಶೀಘ್ರ ಪೂರ್ಣಗೊಳಿಸಲು ತಿಳಿಸಿದ್ದಾರೆ.