Advertisement

Goa ದೂಧ್ ಸಾಗರ್ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ

06:26 PM Jul 22, 2023 | Team Udayavani |

ಪಣಜಿ:  ಇತ್ತೀಚಿನ ದಿನಗಳಲ್ಲಿ ಗೋವಾದಲ್ಲಿ ಪ್ರವಾಸಿಗರು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ದೂಧ್ ಸಾಗರ್ ಜಲಪಾತಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಿದ್ದಾರೆ.

Advertisement

ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಅಶ್ವಿನ್ ಚಂದ್ರು ಅವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ. ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದು, ದೂಧ್ ಸಾಗರಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದ್ದಾರೆ.

ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ಪ್ರಕಾರ 
1).ದೂಧ್ ಸಾಗರ್ ಜಲಪಾತ, ದೂಧ್ ಸಾಗರ್ ರೈಲ್ವೆ ನಿಲ್ದಾಣ, ದೂಧ್ ಸಾಗರ್ ಜಲಪಾತದ ಬಳಿಯ ರೈಲ್ವೆ ಸೇತುವೆ  ಮೇಲೆ ಪ್ರವಾಸಿಗರು, ಚಾರಣಿಗರು ಮತ್ತು ಇತರರಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸರು, ರೈಲ್ವೆ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಇಲ್ಲಿಗೆ ಹೋಗುವಂತಿಲ್ಲ.
2).ಆದಾಗ್ಯೂ, ದೂಧ್ ಸಾಗರ್ ಜಲಪಾತದ ತಪ್ಪಲಿನಲ್ಲಿ ಗೊತ್ತುಪಡಿಸಿದ ಮಾರ್ಗವನ್ನು ಅನುಸರಿಸಲು ಅನುಮತಿ ನೀಡಲಾಗುತ್ತದೆ. ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು.
3).ಕುಳೆ, ಕ್ಯಾಸಲ್ ರಾಕ್, ಸೋನಾವಲಿ ಮತ್ತು ಕರಂಜೋಲ್‍ನಲ್ಲಿ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು. ಪೊಲೀಸ್, ರೈಲ್ವೆ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಇರುತ್ತಾರೆ. ಇಲ್ಲಿಂದ ಪ್ರವೇಶವನ್ನು ಮುಚ್ಚಲಾಗುತ್ತದೆ. ನೈಋತ್ಯ ರೈಲ್ವೆಯಿಂದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ನಿಗಾ ಕೂಡ ಇರುತ್ತದೆ.
4).ನೈಋತ್ಯ ರೈಲ್ವೆಯಿಂದ ಬ್ಯಾರಿಕೇಡಿಂಗ್ ಮಾಡಲಾಗುವುದು. ಜಲಪಾತದಲ್ಲಿ ಇಂಗ್ಲಿಷ್, ಮರಾಠಿ, ಕೊಂಕಣಿ, ಕನ್ನಡ ಮತ್ತು ಹಿಂದಿ ಭಾಷೆಯ  ಪ್ರವೇಶ ನಿಷೇಧದ ಫಲಕಗಳನ್ನು ಸಹ ಅಳವಡಿಸಲಾಗುವುದು.
5).ಮೇಲ್ಕಂಡ ನಿಯಮಗಳ ಉಲ್ಲಂಘನೆಗಾಗಿ ಅಥವಾ ನೌಕರರು ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಜಿಲ್ಲಾಧಿಕಾರಿಗಳ ಈ ಆದೇಶಪತ್ರವನ್ನು ಜಿಲ್ಲಾಧಿಕಾರಿಗಳು ನೈಋತ್ಯ ರೈಲ್ವೆ ಹುಬ್ಬಳ್ಳಿ ಕಚೇರಿ, ಹುಬ್ಬಳ್ಳಿ ರೈಲ್ವೆ ಪೊಲೀಸ್, ವನ್ಯಜೀವಿ ರೇಂಜರ್ ಫೊಂಡಾ, ಕುಲೆ ಪೊಲೀಸ್ ಠಾಣೆ, ಸಹಾಯಕ ಅರಣ್ಯ ರಕ್ಷಕ ಉತ್ತರ ಗೋವಾ, ಕಾರ್ಯದರ್ಶಿ ಮತ್ತು ಗೆಡಾ ಸದಸ್ಯರಿಗೆ ಪತ್ರಗಳನ್ನು ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next