Advertisement

ಗಂಗೊಳ್ಳಿ: ಬ್ರೇಕ್‌ ವಾಟರ್‌ ತುದಿಯಲ್ಲಿಲ್ಲ ವಿದ್ಯುತ್‌ ದೀಪ

01:20 AM Aug 29, 2018 | Karthik A |

ವಿಶೇಷ ವರದಿ – ಗಂಗೊಳ್ಳಿ: ಕೋಡಿ, ಗಂಗೊಳ್ಳಿಯ ಬ್ರೇಕ್‌ ವಾಟರ್‌ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಆದರೆ ಬ್ರೇಕ್‌ವಾಟರ್‌ ತುದಿಯಲ್ಲಿ ಯಾವುದೇ ಬೆಳಕಿನ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳದಿರುವುದರಿಂದ ರಾತ್ರಿ ವೇಳೆ ಬೋಟುಗಳ ಸಂಚಾರಕ್ಕೆ ಅಡ್ಡಿಯಾಗುವ ಆತಂಕ ಮೀನುಗಾರರದ್ದಾಗಿದೆ. ಕೋಡಿ ಹಾಗೂ ಗಂಗೊಳ್ಳಿಯ ಸಮುದ್ರ ತೀರದಲ್ಲಿ ಕಡಲ್ಕೊರೆತದ ಶಾಶ್ವತ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮಂಜೂರಾದ 102 ಕೋ.ರೂ. ವೆಚ್ಚದ ಬ್ರೇಕ್‌ ವಾಟರ್‌ ಕಾಮಗಾರಿ 2015ರಲ್ಲಿ ಆರಂಭಗೊಂಡಿತ್ತು. ಕೋಡಿಯಲ್ಲಿ 900 ಮೀಟರ್‌ ಹಾಗೂ ಗಂಗೊಳ್ಳಿಯ ಕಡಲಿನಲ್ಲಿ 700 ಮೀಟರ್‌ ಉದ್ದದ ಬ್ರೇಕ್‌ ವಾಟರ್‌ ನಿರ್ಮಾಣ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಯಿದೆ.

Advertisement

ಗಂಗೊಳ್ಳಿ ಬಂದರಿನಿಂದ 338 ಟ್ರಾಲರ್‌, 36 ಪರ್ಸಿನ್‌, 1,945 ಗಿಲ್‌ನೆಟ್‌ ಹಾಗೂ ಮಾಟುಬಲೆ, 1,456 ಯಾಂತ್ರೀಕೃತವಲ್ಲದ ದೋಣಿಗಳು ಹಾಗೂ ಬೀಡುಬಲೆ, 23 ಪಾತಿ ದೋಣಿಗಳು ಸೇರಿ ಒಟ್ಟು 3,798 ಬೋಟುಗಳು ಮೀನುಗಾರಿಕೆಗೆ ತೆರಳುತ್ತವೆ. ಈಗ ಸದ್ಯಕ್ಕೆ ಮೀನುಗಾರರೇ ಗಂಗೊಳ್ಳಿಯ ಬ್ರೇಕ್‌ ವಾಟರ್‌ ಕೊನೆಯಲ್ಲಿ ತಾತ್ಕಾಲಿಕವಾಗಿ ಸಣ್ಣ ವಿದ್ಯುತ್‌ ದೀಪವೊಂದನ್ನು ಅಳವಡಿಸಿದ್ದಾರೆ. ಆದರೆ ಇದರಿಂದೇನೂ ಪ್ರಯೋಜನವಾಗುತ್ತಿಲ್ಲ. ಮತ್ತೆ ಇದು ಹೆಚ್ಚು ದಿನ ಬಾಳಿಕೆಯು ಬರುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರವಾಗಿ ಈ ಬ್ರೇಕ್‌ ವಾಟರ್‌ ಕಾಮಗಾರಿ ನಿರ್ವಹಿಸುವವರೇ ಬೆಳಕಿನ ವ್ಯವಸ್ಥೆಯನ್ನು ಅಳವಡಿಸಲಿ ಅಥವಾ ಮೀನುಗಾರಿಕಾ ಮತ್ತು ಬಂದರು ಇಲಾಖೆ ವಿದ್ಯುತ್‌ ದೀಪ ಅಳವಡಿಸಲಿ ಎಂದು ಇಲ್ಲಿನ ಮೀನುಗಾರರು ಒತ್ತಾಯಿಸಿದ್ದಾರೆ.


ಬ್ರೇಕ್‌ ತುದಿಯಲ್ಲಿ ಈಗಿರುವ ತಾತ್ಕಾಲಿಕ ಸಣ್ಣ ವಿದ್ಯುತ್‌ ದೀಪ.

ಸಮಸ್ಯೆಯೇನು?

ಆದರೆ ಇದರಿಂದ ಒಂದು ಸಮಸ್ಯೆ ಪರಿಹಾರವಾದರೆ ಮತ್ತೂಂದು ಸಮಸ್ಯೆ ಉದ್ಭವವಾದಂತಾಗಿದೆ. ರಾತ್ರಿ ವೇಳೆ ಮೀನುಗಾರಿಕೆ ಮುಗಿಸಿ ವಾಪಸ್ಸು ಗಂಗೊಳ್ಳಿ ಬಂದರು ಕಡೆಗೆ ಬೋಟುಗಳು ಬರುವಾಗ ಈ ಬ್ರೇಕ್‌ ವಾಟರ್‌ ಇರುವುದು ಕಾಣಿಸುವುದಿಲ್ಲ. ಇದರಿಂದ ಬೋಟುಗಳು ಬ್ರೇಕ್‌ ವಾಟರ್‌ಗೆ ಢಿಕ್ಕಿ ಹೊಡೆಯುವ ಸಾಧ್ಯತೆಯಿರುತ್ತದೆ. ಇದರಿಂದ ಬೋಟುಗಳ ಅವಘಢ ಸಂಭವಿಸುವ ಸಾಧ್ಯತೆಯಿರುತ್ತದೆ.

ಅವಘಡಕ್ಕೆ ಯಾರು ಹೊಣೆ?
ರಾತ್ರಿ ವೇಳೆ ಮೀನುಗಾರಿಕೆ ಮುಗಿಸಿ ಬಂದರಿಗೆ ಬರುವಾಗ ಈ ಬ್ರೇಕ್‌ ವಾಟರ್‌ ತುದಿ ಕಾಣುವುದಿಲ್ಲ. ಆಗ ಅದಕ್ಕೆ ಬೋಟುಗಳು ಢಿಕ್ಕಿ ಹೊಡೆಯುವ ಸಾಧ್ಯತೆಯಿರುತ್ತದೆ. ಏನಾದರೂ ಅವಘಢ ಸಂಭವಿಸಿದರೆ ಯಾರು ಹೊಣೆ.
– ರಮೇಶ್‌ ಕುಂದರ್‌, ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘ

Advertisement

ವಹಿಸಿಕೊಂಡವರೇ ಮಾಡಿಕೊಡಬೇಕು
ಬ್ರೇಕ್‌ ವಾಟರ್‌ ಕಾಮಗಾರಿ ವಹಿಸಿಕೊಂಡವರೇ ಅಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಡಬೇಕಿದೆ. ಈ ಸಂಬಂಧ ಬಂದರು ಮತ್ತು ಮೀನುಗಾರಿಕಾ ಇಲಾಖೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕಿದೆ. ಬ್ರೇಕ್‌ವಾಟರ್‌ ತುದಿಯಲ್ಲಿ ಅಗತ್ಯವಾಗಿ ವಿದ್ಯುತ್‌ ದೀಪ ಅಳವಡಿಸಬೇಕಿದೆ. 
– ಅಂಜನಾದೇವಿ, ಗಂಗೊಳ್ಳಿ ಬಂದರಿನ ಮೀನುಗಾರಿಕಾ ಸಹಾಯಕ ನಿರ್ದೇಶಕಿ 

ಮೀನುಗಾರಿಕಾ ಇಲಾಖೆಯ ಜವಾಬ್ದಾರಿ
ನಮಗೆ ಬ್ರೇಕ್‌ ವಾಟರ್‌ ನಿರ್ಮಾಣ ಯೋಜನೆ ಸಿದ್ಧಪಡಿಸುವ ಜವಾಬ್ದಾರಿ ಮಾತ್ರ ಇರುವುದು. ವಿದ್ಯುತ್‌ ದೀಪ ಅಳವಡಿಕೆ, ಬೆಳಕಿನ ವ್ಯವಸ್ಥೆ ಮಾಡಿಸುವುದು ಮೀನುಗಾರಿಕಾ ಇಲಾಖೆಗೆ ಸಂಬಂಧಪಟ್ಟದ್ದು. ಅವರೇ ಪ್ರಸ್ತಾವನೆ ಕಳುಹಿಸಿಕೊಡಲಿ.
– ನಾಗರಾಜ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next