ಅಣ್ಣಿಗೇರಿ: ಇಲ್ಲಿನ ಪುರಸಭೆಯ 23 ವಾರ್ಡ್‌ಗಳಿಗೆ ನಿಗದಿಪಡಿಸಿದ ಮೀಸಲಾತಿಗೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯು ವಿಚಾರಣೆ ಹಂತದಲ್ಲಿ ಇರುವುದರಿಂದ ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿದ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯಲ್ಲಿ ಅಣ್ಣಿಗೇರಿಯನ್ನು ಕೈ ಬಿಡಲಾಗಿದೆ.
ಅಣ್ಣಿಗೇರಿ ಪುರಸಭೆಯ 23 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ನಿಗದಿಪಡಿಸಿದ ಮೀಸಲಾತಿಗೆ ಏನಾದರೂ ಆಕ್ಷೇಪಣೆಗಳಿದ್ದರೆ ತಕರಾರು ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ನಂತರ ಮೀಸಲಾತಿಯನ್ನು ಮಾರ್ಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಆದರೆ ಈ ಕುರಿತು ಅಣ್ಣಿಗೇರಿ ಪುರಸಭೆ ಮಾಜಿ ಅಧ್ಯಕ್ಷೆ ರೂಪಾ ಶಿವಶಂಕರ ಕಲ್ಲೂರ, ಸದಸ್ಯ ಜಟ್ಟೆಪ್ಪ ಕಲ್ಲೊಡ್ಡರ, ನಾಗರಿಕರಾದ ರಾಜು ಹಳ್ಳಿಕೇರಿ ಹಾಗೂ ಮುತ್ತು ಸೂಡಿ ಅವರು ಆಕ್ಷೇಪ ವ್ಯಕ್ತಪಡಿಸಿ ಮೊದಲು ನಿಗದಿಪಡಿಸಿದ ಮೀಸಲಾತಿಗೆ ಯಾರೂ ಆಕ್ಷೇಪಣೆ ಸಲ್ಲಿಸದೇ ಇರುವಾಗ ಜಿಲ್ಲಾಡಳಿತ ಮೀಸಲಾತಿಯನ್ನು ಬದಲಾಯಿಸಿ ಆದೇಶ ಹೊರಡಿಸಿದ್ದು ಏಕೆ ಎಂದು ಪ್ರಶ್ನಿಸಿದರು. ರಾಜಕೀಯ ಒತ್ತಡಕ್ಕೆ ಮಣಿದು ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ಕುರಿತು ಜಿಲ್ಲಾಡಳಿತ ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ಅನಿವಾರ್ಯವಾಗಿ ತಾವು ಹೈಕೋರ್ಟ್ ಮೊರೆ ಹೋಗಬೇಕಾಯಿತು ಎಂದು ದೂರುದಾರರು ಹೇಳಿದ್ದಾರೆ. ಸದ‌್ಯ ಹೈಕೋರ್ಟ್‌ಗೆ ರಜಾ ಕಾಲ ಇರುವುದರಿಂದ ರಜೆ ಮುಗಿದ ನಂತರ ವಿಚಾರಣೆ ನಡೆದು ತೀರ್ಪು ಹೊರಬಂದ ನಂತರ ಅಣ್ಣಿಗೇರಿ ಪುರಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.