ಬೆಳ್ತಂಗಡಿ : ತಾಲೂಕಿನ ಬಂದಾರು ಗ್ರಾಮದ ಪುರಡ್ಕ ಎಸ್ಸಿ, ಎಸ್ಟಿ ಕಾಲನಿ ನಿವಾಸಿಗಳು ನೀರಿಗಾಗಿ ಪಡುತ್ತಿರುವ ಕಷ್ಟ ಹೇಳತೀರದಂತಾಗಿದೆ.
ಗ್ರಾ.ಪಂ. ಹಾಗೂ ಕಾಲನಿ ನಿವಾಸಿಗಳು ಕೊರೆಸಿದ ಒಟ್ಟು 6 ಬೋರ್‌ವೆಲ್‌ನಲ್ಲಿ ಹನಿ ನೀರಿಗೂ ತತ್ವಾರವಾಗಿದೆ. ಮತ್ತೂಂದೆಡೆ ಕಳೆದ 25 ವರ್ಷಗಳ ಹಿಂದೆ ತೆಗೆದಿದ್ದ ಸರಕಾರಿ ಬಾವಿ ಪಾಳು ಬಿದ್ದಿದೆ. ಇದರ ಹೂಳೆತ್ತದ ಪರಿಣಾಮ ಬಾವಿ ಕಸ-ಕಡ್ಡಿ, ಪೊದೆಗಳಿಂದ ಆವೃತ್ತವಾಗಿ ಹನಿ ನೀರಿಗೂ ಹಾಹಾಕಾರ ಬಂದೊದಗಿದೆ. 15 ಕುಟುಂಬಳಿರುವ ಕಾಲನಿಯಲ್ಲಿ ಸುಮಾರು 50 ಮಂದಿ ವಾಸವಾಗಿದ್ದಾರೆ. ವೃದ್ಧರು ಮಕ್ಕಳು ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದು ಶಾಶ್ವತ ನೀರಿನ ಯೋಜನೆಗೆ ಗ್ರಾ.ಪಂ., ಜಿ.ಪಂ.ಗೆ ಮನವಿ ನೀಡಿದರೂ ಪ್ರಯೋಜನ ಕಂಡಿಲ್ಲ.
ಅರ್ಧ ಇಂಚು ನೀರು
ಪಂ.ನಿಂದ ಅಳವಡಿಸಲಾಗಿರುವ ಪೈಪ್ ಲೈನ್ ನೀರು ಎರಡು ದಿಗಳಿಗೊಮ್ಮೆ ಬರುತ್ತದೆ. ಆದರೆ ಕಾಲನಿ ಜನರಿಗೆ ಬೇಕಾಗುವಷ್ಟು ತಲುಪುತ್ತಿಲ್ಲ ಎಂಬುದು ನಿವಾಸಿಗಳ ಅಳಲು. ಅರ್ಧ ಇಂಚು ನೀರು ಅರ್ಧ ತಾಸಿನಲ್ಲೇ ಮಾಯವಾಗುತ್ತದೆ. ವಾಟರ್‌ವೆುನ್ ಬಳಿ ಕೇಳಿದರೆ ನೀರಿನ ಬಿಲ್ ನೀಡಿಲ್ಲ ಅದರಿಂದ ನೀರು ಬಿಡುತ್ತಿಲ್ಲ ಎಂಬ ಉತ್ತರ ಬರುತ್ತದೆ. ಆದರೆ ನೀರು ಬರದಿದ್ದರೆ ಬಿಲ್ ಯಾಕಾಗಿ ಕಟ್ಟಬೇಕು, ಕೆಲವರು ನೀರಿನ ಬಿಲ್ ನೀಡಿಲ್ಲ ಎಂದು ಕಾಲನಿಗೆ ನೀರು ನೀಡದಿದ್ದರೆ ಹೇಗೆ ಎಂಬುದು ಕಾಲನಿ ಜನರ ಅಳಲು. ಸ್ಥಳೀಯವಾಗಿರುವ ಹ್ಯಾಂಡ್‌ಬೋರ್ ವೆಲ್‌ನಲ್ಲಿ ನೀರಿದ್ದರೂ ನಿರ್ವಹಣೆಯಿಲ್ಲದೆ ಬಳಕೆ ಯೋಗ್ಯವಾಗಿಲ್ಲ. ಗ್ರಾ.ಪಂ.ನಿಂದ ಪಕ್ಕದಲ್ಲೇ ಮತ್ತೂಂದು ಕೊಳವೆಬಾವಿ ಕೊರೆಯುವಂತೆ ವಿನಂತಿಸಿದರೂ ಕೇಳುತ್ತಿಲ್ಲ. ಪಂ.ನಿಂದ ಕೊರೆಸಿದ 3 ಕೊಳವೆ ಬಾವಿಯೂ ನಿಷ್ಪ್ರಯೋಜಕವಾಗಿವೆ. ಇದಕ್ಕಾಗಿ ಕಾಲನಿ ನಿವಾಸಿಗಳು ಸಾಲಸೋಲ ಮಾಡಿ ಮತ್ತೆ 3 ಕೊಳವೆ ಬಾವಿ ಕೊರೆಸಿದ್ದಾರೆ. ಆದರೆ ಹನಿ ನೀರು ಸಿಗದಿರುವುದರಿಂದ ಕಾಲನಿ ನಿವಾಸಿಗಳು ಬೇಸತ್ತಿದ್ದಾರೆ.
ನಿರಂತರ ನೀರು ಒದಗಿಸಲು ಪ್ರಯತ್ನ
ಕಾಲನಿಗೆ ನೀರಿಲ್ಲದಿರುವ ಕುರಿತು ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ತಂದಿರಲಿಲ್ಲ. ಬೇಸಗೆಯಾದ್ದರಿಂದ ಹೆಚ್ಚಿನ ಕಡೆ ನೀರಿಗೆ ಸಮಸ್ಯೆ ಇದೆ. ಪಂ.ನಿಂದ ನಿರಂತರ ನೀರು ಒದಗಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
– ಮೋಹನ್ ಬಂಗೇರ,
ಪಿಡಿಒ, ಬಂದಾರು ಗ್ರಾ.ಪಂ.
ಕಲುಷಿತ ನೀರು
ನೀರಿನ ಸಂಪರ್ಕವಿದ್ದರೂ ಪ್ರಯೋಜನ ವಾಗುತ್ತಿಲ್ಲ. ಅರ್ಧ ತಾಸು ನೀರು ಬಂದು ಬಳಿಕ ನಿಂತು ಹೋಗುತ್ತದೆ. ಕಲುಷಿತ ನೀರನ್ನೇ ಬಳಸುವಂತಾಗಿದೆ. ಕೃಷಿ ಮಾಡದಂತ ಪರಿಸ್ಥಿತಿ ನಮ್ಮದು. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರತಿಕ್ರಿಯೆ ಸಿಗದೆ ಬೇಸತ್ತು ಹೋಗಿದ್ದೇವೆ.
– ಕೃಷ್ಣಪ್ಪ
ಕಾಲನಿ ನಿವಾಸಿ
ಮನವಿಗೆ ಸ್ಪಂದನೆ ಇಲ್ಲ
ಶಾಶ್ವತ ನೀರು ಹಾಗೂ ರಸ್ತೆ ಕಲ್ಪಿಸುವಂತೆ ಈಗಾಗಲೇ ಜಿ.ಪಂ. ಸಹಿತ ಎಲ್ಲ ಅಧಿಕಾರಿಗಳಿಗೆ ಕಾಲನಿ ನಿವಾಸಿಗಳಿಂದ ಮನವಿ ನೀಡಲಾಗಿದೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನೀರಿಲ್ಲದಂತಾಗಿದ್ದು, ಮಕ್ಕಳು ಶಾಲೆಗೆ ತೆರಳಲು ಸಮಸ್ಯೆಯಾಗುತ್ತಿದೆ.
– ಶ್ರೀನಿವಾಸ್
ಕಾಲನಿ ನಿವಾಸಿ
ಚೈತ್ರೇಶ್ ಇಳಂತಿಲ