Advertisement

ಪ್ರಸಾದದ ಬಗ್ಗೆ ಕಾಳಜಿ ಇರಲಿ, ಅನುಮಾನವಲ

09:15 AM Dec 19, 2018 | Team Udayavani |

ಧಾರವಾಡ: ಪ್ರಸಾದ ಶಿವನ ತುತ್ತು, ದಾಸೋಹ ಪರಂಪರೆ ಕೊಂಡಿ. ಇಂತಹ ಸಾಮಾಜಿಕ ಸಾಮರಸ್ಯದ ವ್ಯವಸ್ಥೆಯನ್ನೇ ಚಾಮರಾಜನಗರ ಜಿಲ್ಲೆ ಸುಳ್ವಾಡಿಯಲ್ಲಿ ದುಷ್ಕರ್ಮಿಗಳು ತಮ್ಮ ಸೇಡಿನ ಗಾಳ ಮಾಡಿಕೊಂಡಿದ್ದಕ್ಕೆ ನಾಡಿನ ಮಠಾಧೀಶರು, ಶರಣರು, ದಾಸೋಹ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಬಂದ ಮಠ ಮಾನ್ಯಗಳು ವಿಷಪ್ರಾಶನ ಮಾಡಿದ ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿವೆ. ತಮ್ಮ ಸೇಡಿಗೆ ಪ್ರಸಾದವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಕ್ಕೆ ನಾಡಿನ ಧರ್ಮಾಧಿಕಾರಿಗಳು ಮತ್ತು ಮಠಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಇನ್ನು, ದಾಸೋಹ ಪರಂಪರೆಯ ಮೇಲೆ ಸರ್ಕಾರ ತನ್ನ ಹಿಡಿತ ಸಾಧಿಸುವ ಪ್ರಯತ್ನ ಮಾಡಬಾರದು. ಪ್ರಸಾದ ಪರಂಪರೆಯ ಬಗ್ಗೆ ನಂಬಿಕೆ ಇರಬೇಕೇ ಹೊರತು ಒಂದು ಘಟನೆಯ ಆಧಾರದಲ್ಲಿ ಎಲ್ಲವನ್ನೂ ಅನುಮಾನದಿಂದ ನೋಡಬಾರದೆಂದು ಮಠಾಧೀಶರು
ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಸಾದ ಸಿದ್ಧ ಮಾಡುವ ಅಡುಗೆ ಮನೆಗೆ ಸಿಸಿಟಿವಿ ಅಳವಡಿಕೆ, ಸರ್ಕಾರದ ಅನುಮತಿ ಪಡೆದು ಪ್ರಸಾದ ವಿನಿಯೋಗ ಮಾಡುವುದು ಸೇರಿದಂತೆ 20 ಅಂಶಗಳನ್ನು ಪಾಲಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದಕ್ಕೆ ಮಠಾಧೀಶರು, ಶರಣರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಪುನರ್‌
ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. 

ಮದುವೆ, ಶಾಲಾ ಮಕ್ಕಳಿಗೆ ಏನು?: ಮದುವೆಯಂತಹ ಕಾರ್ಯಗಳಲ್ಲೂ ಇಂತಹ ಘಟನೆಗಳು ನಡೆದು ಜನ ಸತ್ತಿದ್ದಾರೆ, ಅಸ್ವಸ್ಥರಾಗಿದ್ದಾರೆ. ಅನೇಕ ಶಾಲೆಗಳಲ್ಲಿ ಮಕ್ಕಳು ಕೂಡ ಮಧ್ಯಾಹ್ನದ ಬಿಸಿಯೂಟ ಮಾಡಿ ತೀವ್ರ ಅಸ್ವಸ್ಥರಾಗಿದ್ದ ನೂರಾರು ಪ್ರಕರಣಗಳಿವೆ. ಹೀಗಾಗಿ, ಒಂದು ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಸರ್ಕಾರ ದೊಡ್ಡದಾಗಿ ಬಿಂಬಿಸಿ ಭಕ್ತರಿಗೆ ತೊಂದರೆಯಾಗುವ
ಯಾವ್ಯಾವುದೋ ಕಾನೂನು ಜಾರಿಗೊಳಿಸುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ದಾಸೋಹ ಪರಂಪರೆಯಲ್ಲಿ ನಂಬಿಕೆ ಇಟ್ಟವರು.

ಸಿಸಿಟಿವಿ ಅಳವಡಿಕೆ, ಪ್ರತಿ ಬಾರಿಯೂ ಪ್ರಸಾದ ಸಜ್ಜಾದಾಗ ಅದನ್ನು ಪರಿಶೀಲನೆ ನಡೆಸುವುದು ಹೇಗೆ? ಪ್ರಸಾದ ಸಜ್ಜುಗೊಳಿಸುವ ಖಾಸಗಿ ವ್ಯಕ್ತಿಗಳಿಗೆ ಅನುಮತಿ ಪಡೆಯುವುದು ಹೇಗೆ? ಪ್ರಸಾದ ವಿತರಣೆಗೆ ಸಮಯಕ್ಕೆ ಸರಿಯಾಗಿ ಅವಕಾಶ ನೀಡದಿದ್ದರೆ ಹೇಗೆ? ಧಾರ್ಮಿಕ ಕಾರ್ಯಕ್ಕೆ ಇಂತಹ ಕಾನೂನು ಬೇಕೆ ಎಂಬೆಲ್ಲ ಪ್ರಶ್ನೆಗಳು ಇದೀಗ ಧಾರ್ಮಿಕ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ.

ದಾಸೋಹಂ ಎನಿಸಯ್ಯ:12ನೇ ಶತಮಾನದ ಶರಣರಿಂದ ಆರಂಭಗೊಂಡ ದಾಸೋಹ ಪರಂಪರೆ ಈ ನಾಡಿನ ಎಲ್ಲಾ ಧರ್ಮಿಯರ ಮಠ-ಮಂದಿರಗಳಲ್ಲಿ ಕಾಯಂ ಆಗಿ ನಡೆದುಕೊಂಡು ಬರುತ್ತಿವೆ. ಉತ್ತರ ಕರ್ನಾಟಕದಲ್ಲಿನ ಪಂಚಪೀಠಗಳ ಮಠಗಳು, ಶರಣರ
ತತ್ವದಲ್ಲಿ ನಡೆಯುತ್ತಿರುವ ಸಾವಿರಕ್ಕೂ ಅಧಿಕ ವಿರಕ್ತ ಮಠಗಳಲ್ಲಿ ಪ್ರತಿದಿನ ದಾಸೋಹ ನಡೆಯುತ್ತದೆ. ಇನ್ನು ಕರಾವಳಿ ಪ್ರದೇಶದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಹೊರನಾಡು, ಕೊಲ್ಲೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಅನ್ನದಾಸೋಹ ಇದ್ದೇ ಇರುತ್ತದೆ. ಸರ್ಕಾರ ಸದ್ಯಕ್ಕೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿನ ಪ್ರಸಾದ ವ್ಯವಸ್ಥೆ ಮೇಲೆ ನಿಗಾ ಇಡಲು 20 ಅಂಶಗಳನ್ನು ರೂಪಿಸಿದೆ. ಇತರ ಮಠಗಳಿಗೆ ಇದು ವಿಸ್ತರಣೆಯಾದರೆ ರಾಜ್ಯಾದ್ಯಂತ ಸರ್ಕಾರ ಮತ್ತು ಮಠಗಳ ಮಧ್ಯೆ ಮತ್ತೂಂದು ಸುತ್ತಿನ ಸಮರ
ನಡೆಯುವುದು ನಿಶ್ಚಿತ.

Advertisement

ಕಾನೂನುಗಳಿಂದ ಎಲ್ಲವನ್ನೂ ರಕ್ಷಣೆ ಮಾಡುವುದು ಅಸಾಧ್ಯ. ಮುಜರಾಯಿ ದೇವಸ್ಥಾನ ಗಳಿಗೆ ಮೂಲ ಸೌಕರ್ಯಗಳೇ ಇಲ್ಲ. ಇನ್ನು ಈ 20 ಅಂಶಗಳನ್ನು ಹೇಗೆ ಜಾರಿಗೊಳಿಸಲು ಸಾಧ್ಯ. ಎಲ್ಲರೂ ಕಟುಕರಿರುವುದಿಲ್ಲ. 
● ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠ

ಎಲ್ಲವನ್ನೂ ಕಾನೂನಿಂದಲೇ ಸರಿ ಮಾಡಲಾಗದು. ಅರಣ್ಯ, ಊರಾಚೆ ಇರುವ ದೇವಸ್ಥಾನ ಗಳಲ್ಲಿ ಸಿಸಿಟಿವಿ ಹಾಕಿ ಕಾಯಲು 
ಸಾಧ್ಯವೆ? ಜಾತ್ರಾ ಸಮಿತಿ, ಭಕ್ತರ ಸಾಮರಸ್ಯದಲ್ಲಿ ಪ್ರಸಾದ ವ್ಯವಸ್ಥೆ ಸಾಗುವುದು ಉತ್ತಮ.

●ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠ

ಸಾವಿರ ವರ್ಷದ ಪರಂಪರೆಯನ್ನು ಒಂದು ಘಟನೆಯಲ್ಲಿ ವಿಶ್ಲೇಷಣೆ ಮಾಡಬಾರದು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಕೊಟ್ಟರೆ ಇಂತಹ
ಘಟನೆಗಳಿಗೆ ಕಡಿವಾಣ ಬೀಳುತ್ತದೆ. ಅದನ್ನು ಬಿಟ್ಟು ಪ್ರಸಾದ ಪರೀಕ್ಷೆ ಮಾಡೋದು ಸರಿಯಲ್ಲ.

● ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ, ಮಹಾರಾಷ್ಟ್ರ

ದಾಸೋಹ ಮಾಡುವವರು ಸರ್ಕಾರದ ಅನುಮತಿಗೆ ಕಾಯಬೇಕು ಎನ್ನುವುದು ಸರಿಯಲ್ಲ. ಇದು ದಾಸೋಹ ಪರಂಪರೆಯ ದಿಕ್ಕನ್ನು ಬದಲಿಸುತ್ತದೆ. ಮದುವೆ, ಶಾಲೆಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಎಲ್ಲದಕ್ಕೂ ಹೇಗೆ ನಿಬಂಧನೆ ಹಾಕಲು ಸಾಧ್ಯ?
●ಶ್ರೀ ಡಾ.ಚನ್ನ ಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ಶ್ರೀಶೈಲ ಪೀಠ 

ಪ್ರಸಾದ ಸಜ್ಜಾದಾಗ ಮೊದಲು ಮಠಾಧೀಪತಿಗಳೇ ಊಟ ಮಾಡುವ ಪದ್ಧತಿ ಶರಣ ಪರಂಪರೆಯಲ್ಲಿದೆ. ಹೀಗಾಗಿ, ಸರ್ಕಾರ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಪ್ರಸಾದ ಪರೀಕ್ಷೆ, ಅಧಿಕಾರಿಗಳ ಅನುಮತಿಗೆ ಕಾಯುವುದನ್ನು ಜಾರಿಗೆ ತರಲೇಬಾರದು.
●ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘಾಮಠ, ಧಾರವಾಡ.

ಪ್ರಸಾದ ಪರೀಕ್ಷೆ ಸರ್ಕಾರಕ್ಕೂ ತಲೆನೋವು, ದಾಸೋಹ ಪರಂಪರೆಗೂ ತಲೆನೋವು. ಇದನ್ನು ನಿಯಂತ್ರಿಸಲು ಸರ್ಕಾರಕ್ಕೆ ಪ್ರತ್ಯೇಕ ಇಲಾಖೆಯೇ ಬೇಕಾಗಬಹುದು. ಹೀಗಾಗಿ ಸುತ್ತೋಲೆ ಕೈ ಬಿಟ್ಟು, ಸುಳ್ವಾಡಿ ಘಟನೆಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು.
●ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಬಾಲೆಹೊಸೂರು.

●ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next